ಬೆಂಗಳೂರು: ಈಗಿನ ಕಾಲದಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಾಮಾಜಿಕ ಜಾಲತಾಣಗಳು ಪ್ರಮುಖ ಮಾಧ್ಯಮವಾಗಿ ಪರಿವರ್ತಿತವಾಗಿವೆ. ಆದರೆ, ಅದು ಸಾಮಾಜಿಕ ಜಾಲತಾಣಗಳ ಕಲ್ಪನೆಯೇ ಇಲ್ಲದ ಕಾಲ. ಅಂತಹ ಕಾಲದಲ್ಲಿ ತಮ್ಮ ಮಾತಿನ ಮೂಲಕವೇ ಅನ್ಯಾಯದ ವಿರುದ್ಧ ಧ್ವನಿಯಾಗಿದ್ದ ಏಕೈಕ ವ್ಯಕ್ತಿ ಮಾಸ್ಟರ್ ಹಿರಣ್ಣಯ್ಯ.
ಹೌದು… ಇಂಟರ್’ನೆಟ್, ಸಾಮಾಜಿಕ ಜಾಲತಾಣಗಳ ಕಲ್ಪನೆಯೇ ಇಲ್ಲದ ಕಾಲವದು. ಮುದ್ರಣ ಮಾಧ್ಯಮ ಹಾಗೂ ಸರ್ಕಾರಿ ಚಾನೆಲ್ ಮಾತ್ರ ಇದ್ದ ಕಾಲ.. ಆ ವೇಳೆ ಜನ ಸಾಮಾನ್ಯರು ತಮ್ಮ ಮೇಲಾಗುವ ಅನ್ಯಾಯ, ಅಕ್ರಮ ಹಾಗೂ ದಬ್ಬಾಳಿಕೆಗಳ ವಿರುದ್ಧ ದನಿ ಎತ್ತಲು ವೇದಿಕೆಗಳೇ ಇರಲಿಲ್ಲ. ಅಲ್ಲದೇ. ಈ ರೀತಿ ಎದುರಿಸಲು ಬಹಳಷ್ಟು ಮಂದಿ ಹಿಂಜರೆಯುತ್ತಿದ್ದರೂ ಸಹ. ಆದರೆ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಸಮಾಜದ ಅಂಕುಡೊಂಕುಗಳನ್ನು ತಮ್ಮ ಮಾತಿನ ಚಾಟಿಯ ಮೂಲಕ ಹೊಡೆದು ಸಮಾಜವನ್ನು ತಿದ್ದುತ್ತಿದ್ದ ರಾಜ್ಯದ ಏಕೈಕ ಶಕ್ತಿ ಇಂದು ನಮ್ಮೊಂದಿಗಿಲ್ಲ.
ತಮ್ಮ ನಾಟಕಗಳ ಮೂಲಕ ಸಾರ್ವಜನಿಕ ವಲಯದಲ್ಲಿ, ಸಮಾಜದ ರಾಜಕೀಯದ ಅಂಕು ಡೊಂಕುಗಳ ಬಗ್ಗೆ ವಿಚಾರ ಕ್ರಾಂತಿ ಮೂಡಿಸಿದವರು. ಅದಕ್ಕೂ ಮಿಗಿಲಾಗಿ ಅವರ ವಿರುದ್ಧ ಕಿರುಕುಳ ನೀಡಲು ನಿಂತವರ ಮುಂದೆ ಸೊಪ್ಪು ಹಾಕದೆ ತಮ್ಮ ಕೆಲಸವನ್ನು ನಿರಂತರವಾಗಿ ಮುಂದುವರೆಸಿದವರು ಹಿರಣ್ಣಯ್ಯನವರು.
ಅಂದಿನ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ಪ್ರಧಾನಿ ಇಂದಿರಾ ಗಾಂಧೀ ಜೊತೆಗೆ ಅನೇಕ ರಾಜಕೀಯ ನಾಯಕರು, ವಿವಿಧ ಹಂತಗಳ ಪುಡಾರಿಗಳು ಇವರ ಟೀಕಾ ಪ್ರಹಾರವನ್ನು ತಡೆದುಕೊಳ್ಳಲಾರದೆ ಅವರ ಚಟುವಟಿಕೆಗಳನ್ನು ಮಟ್ಟ ಹಾಕಲು ನಡೆಸಿದ ಪ್ರಯತ್ನಗಳನ್ನೆಲ್ಲಾ ಧೈರ್ಯವಾಗಿ ಮೆಟ್ಟು ನಿಂತ ಧೀರರಾಗಿ ಅವರು ತಮ್ಮ ಕಲೆಯನ್ನು ಬೆಳಗಿದ ರೀತಿ ಅನನ್ಯ. ಅದೆಷ್ಟು ಬಾರಿ ಕೋರ್ಟ್ ಹತ್ತಿದರೋ ಈ ಪುಣ್ಯಾತ್ಮ ಇವರು. ಸುಪ್ರೀಂ ಕೋರ್ಟಿಗೆ ಹೋಗಿ ನ್ಯಾಯ ಪಡೆದರು.
ಆದರೆ ಅನ್ಯಾಯವಂತರೆದುರು ಎಂದೂ ತಲೆತಗ್ಗಿಸಲಿಲ್ಲ. ಅವರ ಸಾಮಾಜಿಕ ಕಾಳಜಿ, ಅನ್ಯಾಯದ ವಿರುದ್ಧ ನಿರ್ದಾಕ್ಷಿಣ್ಯ ಮಾತು, ಅಂತೆಯೇ ಕನ್ನಡದ ಬಗ್ಗೆ, ಕನ್ನಡದ ಸಾಮಾನ್ಯ ಜನತೆಗೆ ಅವರು ತೋರುತ್ತ ಬಂದಿರುವ ಪ್ರೀತಿ, ಸರಳ ಸಜ್ಜನಿಕೆ, ಇವೆಲ್ಲಾ ಅನುಪಮವಾದದ್ದು.
ಮಾಸ್ಟರ್ ಹಿರಣ್ಣಯ್ಯನವರು ಕನ್ನಡ ನಾಡಿಗೆ ನೀಡಿದ ನಿರ್ಭೀತ ಶಕ್ತಿ ಈಗ ಅವರ ಅಗಲಿಕೆಯ ನಂತರವೂ ಸಹ ಹೆಚ್ಚು ಹೆಚ್ಚಾಗಿ ನಮ್ಮ ವ್ಯವಸ್ಥೆಯಲ್ಲಿ ತುಂಬಿರುವ ಅನಿಷ್ಟಗಳನ್ನು ದೂರವಾಗಿಸಲು ಪ್ರೇರಕ ಶಕ್ತಿಯಾಗಲಿ ಎಂಬುದು ನಮ್ಮ ಆಶಯ.
Discussion about this post