ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾ ಸಾವಿನ ಅಂಚಿನಲ್ಲಿದ್ದ ಮಹಿಳೆಗಾಗಿ ನಗರದ ದುರ್ಗಿಗುಡಿ ಮ್ಯಾಕ್ಸ್ ಆಸ್ಪತ್ರೆ ವೈದ್ಯರು ಸಮಯದ ಜೊತೆ ಸ್ಪರ್ಧೆ ಮಾಡಿ ಆಕೆಯನ್ನು ಸಾವಿನ ದವಡೆಯಿಂದ ಕಾಪಾಡಿದ್ದಾರೆ.
ಹೌದು… ಸುಮಾರು 35 ವಯಸ್ಸಿನ ಯುವತಿಗೆ ಅಪರೂಪ ಮತ್ತು ಗಂಭೀರವಾದ ಮಹಾಪಧಮನಿ ತುರ್ತುಚಿಕಿತ್ಸೆಯನ್ನು ಡಾ.ಸುಧೀರ್ ಭಟ್ ಮತ್ತು ತಂಡ ನಡೆಸಿದ್ದು, ಇದರಲ್ಲಿ ಯಶಸ್ವಿಯಾಗುವ ಮೂಲಕ ಅಪ್ರತಿಮ ಸಾಧನೆ ಮಾಡಿದ್ದಾರೆ.
ಈ ಕುರಿತಂತೆ ಮಾತನಾಡಿದ ಆಸ್ಪತ್ರೆಯ ಹೃದ್ರೋಗ ವಿಭಾಗದ ಡಾ. ಸುಧೀರ್ ಭಟ್, ಸುಮಾರು 35 ವರ್ಷದ ಮಹಿಳೆ ತೀವ್ರವಾದ ಹೊಟ್ಟೆ ನೋವಿನಿಂದ ಇದ್ದಕ್ಕಿದ್ದಂತೆ ಬಳಲ ತೊಡಗಿದ್ದರು. ಇದರಿಂದ ಆಕೆಗೆ ಸಹಿಸಲು ಅಸಾಧ್ಯವಾದ ನೋವು ಕಾಣಿಸಿಕೊಂಡಿದ್ದು, ಅವರನ್ನು ನಗರದ ದುರ್ಗಿಗುಡಿಯಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯ ತುರ್ತುಚಿಕಿತ್ಸಾ ಭಾಗಕ್ಕೆ ಕರೆ ತಂದರು ಎಂದರು.
ಉದರ ಶಸ್ತ್ರಚಿಕಿತ್ಸಾ ತಜ್ಞರು ಅವರನ್ನು ತಪಾಸಣೆ ಮಾಡಿದಾಗ ಆಘಾತಕಾರಿ ಸುದ್ದಿ ಕಾದಿತ್ತು. ಅವರ ದೇಹದ ಅತ್ಯಂತ ಪ್ರಮುಖ ರಕ್ತನಾಳ, ಊದಿಕೊಂಡು ಒಡೆದು ಹೋಗಿತ್ತು. ಅದರ ಪರಿಣಾಮವಾಗಿ ತೀವ್ರ ಸ್ವರೂಪದ ರಕ್ತಸ್ರಾವ ಅವರನ್ನು ಜೀವಾಪಾಯಕ್ಕೆ ದೂಡಿತ್ತು. ಪ್ರತಿಕ್ಷಣವೂ ಸಹ ಅಮೂಲ್ಯ. ನೋಡ ನೋಡುತ್ತಿದ್ದಂತೆಯೇ ರೋಗಿಯ ರಕ್ತದೊತ್ತಡ ಕಡಿಮೆಯಾಗುತ್ತಿತ್ತು. ಆ ಸಂದರ್ಭದಲ್ಲಿ ತುರ್ತು ಶಸ್ತ್ರಚಿಕಿತ್ಸೆಯ ನಿರ್ಧಾರವನ್ನು ಕೈಗೊಳ್ಳಲಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ರೋಗಿಯ ಸಂಬಂಧಿಗಳಿಗೆ ವಿವರಿಸಿದಾಗ ಅವರೂ ಸಹ ತುರ್ತು ಶಸ್ತ್ರಚಿಕಿತ್ಸೆಗೆ ಸಮ್ಮತಿಸಿದರು.
ಕ್ಷಣಕ್ಷಣಕ್ಕೂ ರಕ್ತದೊತ್ತಡ ಕಡಿಮೆಯಾಗುತ್ತಿತ್ತು. ರಕ್ತಸ್ರಾವದ ಪರಿಣಾಮವಾಗಿ ಹಿಮೋಗ್ಲೋಬಿನ್ ಕಡಿಮೆಯಾಗಿತ್ತು. ತಕ್ಷಣವೇ ರಕ್ತಟ್ರಾನ್ಸೂಷನ್ ಮಾಡಿ ರಕ್ತದ ಒತ್ತಡವನ್ನು ಮೇಲೆ ತರುವ ಹಾಗೂ ಶಸ್ತ್ರಚಿಕಿತ್ಸೆಯವರೆಗೆ ಜೀವ ಉಳಿಸುವ ಹೊಣೆ ಅರಿವಳಿಕೆ ತಜ್ಞರಾದ ಡಾ. ಶ್ರೀನಿವಾಸ್ ಮತ್ತು ಡಾ.ಶಿವಕುಮಾರ್ ಅವರೊಟ್ಟಿಗೆ ಹೊತ್ತುಕೊಳ್ಳಲಾಯಿತು.
ಡಾ.ರಾಕೇಶ್, ಉದರ ಶಸ್ತ್ರಚಿಕಿತ್ಸಕರಾದ ಡಾ.ಪ್ರಸನ್ನ ಬಸವರಾಜ್ ಮತ್ತು ಯುರಾಲಜಿಸ್ಟ್ ಡಾ. ರಾಕೇಶ್ ಬಿಸಿಲೆಹಳ್ಳಿಯವರು ಸಹ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯ ಭಾಗವಾಗಿದ್ದು ಯಶಸ್ಸಿಗೆ ಕಾರಣರಾದರು. ಸುಮಾರು 5 ಗಂಟೆಯ ಶಸ್ತ್ರಚಿಕಿತ್ಸೆಯ ನಂತರ ರೋಗಿ ಅಪಾಯದಿಂದ ಪಾರಾಗಿ ಗುಣಮುಖರಾಗುವತ್ತ ಹೊರಳಿದರು. ಇಲ್ಲಿಯವರೆಗೆ ಹೋರಾಟದ ಮೊದಲ ಹಾಗೂ ಅತಿಮುಖ್ಯ ಮಜಲು ದಾಟಿಯಾಗಿತ್ತು ಎಂದರು.
ಅನಂತರ ರೋಗಿಗೆ ಶಸ್ತ್ರಚಿಕಿತ್ಸೆಯ ನಂತರದ ತೀವ್ರ ನಿಗಾ ಅವಶ್ಯಕವಿತ್ತು. ಇನ್ಟೆನ್ಸಿವ್ ಕೇರ್ ತಜ್ಞರ ಉಸ್ತುವಾರಿಯಲ್ಲಿ ಅಂತಿಮವಾಗಿ ಈ ಘಟ್ಟವನ್ನೂ ಸಹ ದಾಟಿ ರೋಗಿ ನಿಶ್ಚಿತ ಮೃತ್ಯುನಿಂದ ಪಾರಾಗಿ ಗುಣಮುಖರಾದರು.
ಡಾ. ನಾಗೇಂದ್ರ ಅವರ ನೇತೃತ್ವದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಲ್ಲಾ ರೀತಿಯ ಟೆರಿಟರಿ ಚಿಕಿತ್ಸೆಗಳಲ್ಲಿ ಕಳೆದ ಹತ್ತು ವರ್ಷಗಳಿಂದ ತೊಡಗಿಕೊಂಡಿರುವುದು ಮಲೆನಾಡಿಗೆ ಹೆಮ್ಮೆಯ ಸಂಗತಿಯಾಗಿದೆ.ಶಸ್ತ್ರಚಿಕಿತ್ಸೆಗೊಳಗಾಗಿ ಗುಣಮುಖರಾದ ಶಿಕ್ಷಕಿ ಶ್ರೀಲಕ್ಷ್ಮಿ ಮಾತನಾಡಿ, ತೀವ್ರತರವಾದ ಹೊಟ್ಟೆನೋವಿನಿಂದಾಗಿ ನಾನು ಬದುಕುತ್ತೇನೆಂಬ ವಿಶ್ವಾಸವನ್ನು ಕಳೆದುಕೊಂಡಿದ್ದೆ. ತಂದೆಯನ್ನು ಕಳೆದುಕೊಂಡಿದ್ದ ನನನ ಮಗ ತಾಯಿಯನ್ನೂ ಕಳೆದುಕೊಳ್ಳುತ್ತಾನಾ ಎಂದು ಹೆದರಿದೆ. ಆದರೆ, ನಾನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿ ಡಾ. ಸುಧೀಂದ್ರಭಟ್ ಅವರ ತಂಡ ತೀವ್ರ ತಪಾಸಣೆ ನಡೆಸಿ ಕ್ಲಿಷ್ಟಕರವಾಗಿ ಶಸ್ತ್ರಚಿಕಿತ್ಸೆ ಮಾಡಿದ ಪರಿಣಾಮ ಸಾವಿನ ಅಂಚಿನಲ್ಲಿದ್ದ ನಾನು ಪ್ರಾಣ ಉಳಿದಿದೆ. ನನ್ನ ಪ್ರಾಣ ಉಳಿಸಿದ ವೈದ್ಯರ ತಂಡ ಹಾಗೂ ಸಿಬ್ಬಂದಿಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕಿ ಲತಾ ನಾಗೇಂದ್ರ, ವೈದ್ಯರಾದ ಡಾ. ವಿನಯಾ ಶ್ರೀನಿವಾಸ್, ಅರವಳಿಕೆ ತಜ್ಞ ಡಾ. ಶ್ರೀನಿವಾಸ್, ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ. ರಾಕೇಶ್, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೌಶಿಕ್ ಉಪಸ್ಥಿತರಿದ್ದರು.
ಏನಿದು ಗಂಭೀರ ಆರೋಗ್ಯ ಸಮಸ್ಯೆ?
ಅಯೋರ್ಟ ಅಥವಾ ಮಹಾ ಅಪಧಮನಿಯು ಹೃದಯದಿಂದ ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೂ ಸರಬರಾಜು ಮಾಡುವ ರಕ್ತನಾಳ. ದೇಹದ ಎಲ್ಲಾ ನಾಳಗಳಲ್ಲಿ ಇದು ಅತ್ಯಂತ ಪ್ರಮುಖವದದ್ದು.
ಕೆಲವು ಸಂದರ್ಭಗಳಲ್ಲಿ ಈ ರಕ್ತನಾಳದ ಗೋಡೆ ದುರ್ಬಲವಗುತ್ತದೆ. ಅಂತಹ ಸಂದರ್ಭಗಳಲ್ಲಿ ರಕ್ತ ಸಹಜವಾದ ರಕ್ತದ ಒತ್ತಡದಲ್ಲಿ ಕೂಡ ಅಯೋರ್ಟ ರಕ್ತನಾಳದ ಒಂದು ಭಾಗ ಊದಿಕೊಳ್ಳುತ್ತದೆ. ಹೀಗೆ ರಕ್ತನಾಳದ ಗೋಡೆ ಬಲೂನಿನಂತೆ ಹಿಗ್ಗುತ್ತ ಹೋಗಿ ಕೊನೆಯಲ್ಲಿ ಒಡೆದು ಹೋಗಬಹುದು.
ಸಾಧಾರಣವಾಗಿ ಅಂತಹ ಘಟ್ಟವನ್ನು ಮುಟ್ಟುವ ಮೊದಲು ರೋಗ ಪತ್ತೆಯಾದರೆ ಅದನ್ನು ಶಸ್ತ್ರಚಿಕಿತ್ಸೆಯಿಂದ ಗುಣಮಾಡಬಹುದು. ಈ ಸಂದರ್ಭದಲ್ಲಿ ರೋಗಿಗೆ ಯಾವುದೇ ಕಾಯಿಲೆಯ ಲಕ್ಷಣ ಗಮನಕ್ಕೆ ಬರದ ಕಾರಣ ಕೊನೆಯ ಹಂತದಲ್ಲಿ ತುರ್ತು ಶಸ್ತ್ರಚಿಕಿತ್ಸೆ ಅವಶ್ಯವಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post