ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಮಕ್ಕಳ ಪ್ರೀತಿಯ ನಗು, ಮುಗ್ಧತೆ, ಸ್ಫೂರ್ತಿ, ಚೈತನ್ಯ ಹಾಗೂ ಸರಳತೆ ಪ್ರತಿಯೊಬ್ಬರಲ್ಲೂ ವಿಕಾಸವಾಗಬೇಕು. ದೇಶದ ಭವಿಷ್ಯವಾಗಿರುವ ಮಕ್ಕಳ ಸಮಗ್ರ ಬೆಳವಣಿಗೆ ನಮ್ಮೆಲ್ಲರ ಗುರಿಯಾಗಬೇಕು ಎಂದು ಸಂಸ್ಕೃತಿ ಚಿಂತಕರು ಹಾಗೂ ಉಪನ್ಯಾಸಕರಾದ ಸುರೇಶ್ ಎನ್. ಋಗ್ವೇದಿ ತಿಳಿಸಿದರು. ಸೋಮವಾರಪೇಟೆಯ ಎಂಸಿಎಸ್ ಪಬ್ಲಿಕ್ ಶಾಲೆಯ (MCS Public School) ಆವರಣದಲ್ಲಿ ನಡೆದ ಮಕ್ಕಳ ದಿನಾಚರಣೆ (Children’s Day) ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಮೊದಲ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಅವರು ಮಕ್ಕಳ ಮೇಲಿನ ಅಪಾರ ಪ್ರೀತಿಯಿಂದ ತಮ್ಮ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲು ಅರ್ಪಿಸಿದ್ದಾರೆ. ಮಕ್ಕಳಲ್ಲಿರುವ ಪ್ರೀತಿ, ವಿಶ್ವಾಸ, ಮಮಕಾರ ಹಾಗೂ ಸ್ಫೂರ್ತಿಯ ಗುಣಗಳನ್ನು ಪ್ರತಿಯೊಬ್ಬರೂ ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು. ಮಕ್ಕಳ ಸಮಗ್ರ ವಿಕಾಸಕ್ಕಾಗಿ ಸಮಾಜ ನಿಸ್ವಾರ್ಥ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಪ್ರತಿಯೊಬ್ಬ ಸಾಧಕರಲ್ಲಿರುವ ಉತ್ತಮ ಗುಣಗಳನ್ನು ಗುರುತಿಸಿ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಾನವ ವಿಕಾಸ ಮತ್ತು ಪ್ರಗತಿಯೊಂದಿಗೆ ದೇಶವನ್ನು ಮುನ್ನಡೆಸಬೇಕು. ಭಾರತದಲ್ಲಿರುವ ಕೋಟ್ಯಂತರ ಮಕ್ಕಳು ಹಾಗೂ ಯುವಜನರಲ್ಲಿ ರಾಷ್ಟ್ರಪ್ರಜ್ಞೆ, ನಾಡಪ್ರಜ್ಞೆ, ಭಾಷಾ ಪ್ರಜ್ಞೆ ಮತ್ತು ಕಲಾಪ್ರಜ್ಞೆಯನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
MCS Public School: ಸಂಸ್ಕೃತಿ, ಪರಂಪರೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಿ
ನಾಡು, ನುಡಿ, ಜಲ, ಭಾಷೆ, ಧರ್ಮ ಮತ್ತು ದೇಶದ ಬಗ್ಗೆ ಅಭಿಮಾನ ಹಾಗೂ ಸ್ವಾಭಿಮಾನ ಬೆಳೆಸಿಕೊಳ್ಳುವ ಮೂಲಕ ಮಕ್ಕಳಲ್ಲಿ ಸದೃಢ ಚಿಂತನೆಗಳನ್ನು ರೂಪಿಸಬೇಕು. ಭಾಷೆ, ಧರ್ಮ, ಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗಾಗಿ ಶ್ರಮಿಸಿದ ಸಾಧಕರು ಹಾಗೂ ಮಹನೀಯರನ್ನು ಗೌರವಿಸುವ ಸಂಪ್ರದಾಯ ಮುಂದುವರಿಯಬೇಕು ಎಂದು ಆಶಿಸಿದರು.
ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಶಿಕ್ಷಣದ ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ, ಇತಿಹಾಸ, ಸಂಸ್ಕೃತಿ, ಪರಂಪರೆ, ನೀತಿಶಾಸ್ತ್ರ ಹಾಗೂ ರಾಷ್ಟ್ರನಿಷ್ಠೆಯ ವಿಚಾರಗಳನ್ನು ಪರಿಚಯಿಸಬೇಕು. ಈ ಮೂಲಕ ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ಮತ್ತು ಸದೃಢ ಯುವಕರನ್ನಾಗಿ ರೂಪಿಸಬೇಕು. ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಸಮಗ್ರ ಇತಿಹಾಸ ಹಾಗೂ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳುವುದರೊಂದಿಗೆ ಭಾಷಾಭಿಮಾನ ಮತ್ತು ದೇಶಾಭಿಮಾನ ಬೆಳೆಸಿಕೊಳ್ಳಲು ಎಲ್ಲರೂ ಕೈಜೋಡಿಸಬೇಕು ಎಂದರು.
ಕನ್ನಡ ರಾಜ್ಯೋತ್ಸವದ ಮಹತ್ವ ತಿಳಿಸಿದ ಶಿಕ್ಷಕರು
ಶಾಲೆಯ ಮುಖ್ಯ ಶಿಕ್ಷಕ ಮಹದೇವಸ್ವಾಮಿ ಮಾತನಾಡಿ, ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ಮಹತ್ವ, ಮೈಸೂರು ಪ್ರಾಂತ್ಯದ ಏಕೀಕರಣದ ಮೂಲಕ ಕರ್ನಾಟಕ ರೂಪುಗೊಂಡ ಇತಿಹಾಸ ಹಾಗೂ ಕನ್ನಡ ಸಾಹಿತ್ಯದ ವಿವಿಧ ವಿಚಾರಧಾರೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಶಾಲೆಯ ಪ್ರಾಚಾರ್ಯ ಶಶಿಧರ್ಮೂರ್ತಿ ಅವರು ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಪ್ರತಿಭಾ ವಿಕಾಸಕ್ಕಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
Also Read>> ಭದ್ರಾ ಜಲಾಶಯದ ನೀರಿಗಾಗಿ ರೈತರ ಸಮರ; ನ. 16ಕ್ಕೆ ಬೃಹತ್ ಪ್ರತಿಭಟನೆ
ಚಿತ್ರಕಲಾ ಶಿಕ್ಷಕ ಸಂಪತ್ ಕುಮಾರ್ ಅವರು ಮಕ್ಕಳಲ್ಲಿರುವ ಕಲೆ, ಸಾಹಿತ್ಯ, ಸಂಗೀತ, ಚಿತ್ರಕಲೆ, ನೃತ್ಯ ಸೇರಿದಂತೆ ವಿವಿಧ ಕಲಾ ಕೌಶಲ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಹಲವು ಸ್ಪರ್ಧೆಗಳನ್ನು ಆಯೋಜಿಸಿ ಮಕ್ಕಳಿಗೆ ಸ್ಫೂರ್ತಿ ತುಂಬಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಆಡಳಿತಾಧಿಕಾರಿ ನಾಗರಾಜು ವಹಿಸಿದ್ದರು. ಉಪಪ್ರಾಂಶುಪಾಲೆ ಗೀತಾ, ಶಿಕ್ಷಕರಾದ ಮಂಗಳಮ್ಮ, ಮಧುರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹಾಗೂ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸುರೇಶ್ ಎನ್. ಋಗ್ವೇದಿ ಅವರನ್ನು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










