ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ 78ನೆಯ ಜನ್ಮದಿನ ಅಂಗವಾಗಿ ಫೆ.27ರಂದು ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಸಂಸದ ಬಿ.ವೈ. ರಾಘವೇಂದ್ರ ಅವರು, ಫೆ.27ರಂದು ಮುಖ್ಯಮಂತ್ರಿಗಳ ಜನ್ಮದಿನದ ಹಿನ್ನೆಲೆಯಲ್ಲಿ ವೀರಶೈವ ಕಲ್ಯಾಣ ಮಂದಿರದಲ್ಲಿ ಬೃಹತ್ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಆರೋಗ್ಯ ಶಿಬಿರ ನಡೆಯಲಿದ್ದು, ಶಿವಮೊಗ್ಗ ಮಾತ್ರವಲ್ಲದೆ ಬೇರೆ ಜಿಲ್ಲೆಯವರೂ ಆರೋಗ್ಯ ಶಿಬಿರದಲ್ಲಿ ಭಾಗಿಯಾಗಬಹುದು ಎಂದರು.
ಈ ಬೃಹತ್ ಶಿಬಿರದಲ್ಲಿ ಹೃದಯ ವಿಭಾಗ, ಜನರಲ್ ಮೆಡಿಸಿನ್, ಶ್ವಾಸಕೋಶ ವಿಭಾಗ, ಕೀಲು-ಮೂಳೆ ಮತ್ತು ಕೀಲು ಮರುಜೋಡಣಾ ವಿಭಾಗ ಹಾಗೂ ಸ್ತ್ರೀರೋಗ ವಿಭಾಗಗಳ ತಜ್ಞ ವೈದ್ಯರುಗಳು ಆಗಮಿಸಿ, ಆರೋಗ್ಯ ತಪಾಸಣೆ ನಡೆಸುವರು. ಈ ಅವಧಿಯಲ್ಲಿ ಬಿ.ಪಿ., ಇ.ಸಿ.ಜಿ.ಎಕೋ., ಜಿ.ಆರ್.ಬಿ.ಎಸ್.(ಸಕ್ಕರೆ ಪ್ರಮಾಣ ಪರೀಕ್ಷೆ ಮತ್ತು ವೈದ್ಯರೊಂದಿಗೆ ಸಮಾಲೋಚನೆ ನಡೆಸಲು ಅವಕಾಶ ಕಲ್ಪಿಸಲಾಗುವುದಲ್ಲದೇ ತಜ್ಞವೈದ್ಯರ ಸಲಹೆಯಂತೆ ಉಚಿತವಾಗಿ ಸಾಮಾನ್ಯ ಔಷಧವನ್ನು ವಿತರಿಸಲಾಗುವುದು ಎಂದ ಅವರು ಈ ಕಾರ್ಯಕ್ರಮದ ಯಶಸ್ವಿಗಾಗಿ ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಪ್ರೇರಣಾ ಎಜುಕೇಷನಲ್ ಮತ್ತು ಸೋಷಿಯಲ್ ಟ್ರಸ್ಟ್, ಸಹ್ಯಾದ್ರಿ ನಾರಾಯಣ ಹೃದಯಾಲಯದ ಆಶ್ರಯದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದರು.
ಉಚಿತ ಆಯುಷ್ಮಾನ್ ಕಾರ್ಡ್
300 ಕ್ಕೂ ಹೆಚ್ಚು ಬಾಪೂಜಿ ಸೇವಾ ಕೇಂದ್ರ ಮತ್ತು ಶಿವಮೊಗ್ಗದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ಒಂದು ಲಕ್ಷ ಜನರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಿಸಲಾಗುವುದು. ಸರ್ಕಾರಕ್ಕೆ ಭರಿಸಬೇಕಿರುವ ಶುಲ್ಕವನ್ನು ಪ್ರೇರಣಾ ಎಜುಕೇಷನ್ ಟ್ರಸ್ಟ್ ಭರಿಸಲಿದೆ. ಫೆಬ್ರವರಿ 27, 28 ಮತ್ತು 29 ರಂದು ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಿಸಲಾಗುತ್ತದೆ ಎಂದರು.
ಈ ಹಿಂದೆ ಆಯುಷ್ಮಾನ್ ಭಾರತ್ ಕರ್ನಾಟಕ ಆರೋಗ್ಯ ಕಾರ್ಡ್’ಗಳಲ್ಲಿ 13 ನೆಯ ಸ್ಥಾನ ಪಡೆದಿತ್ತು. ಕಾರ್ಯಕರ್ತರ ಶ್ರಮದಿಂದ 74 ಸಾವಿರ ಕಾರ್ಡ್’ಗಳನ್ನು ಹೆಚ್ಚಿಸಲಾಗಿದ್ದು, ಈಗ 8 ನೆಯ ಸ್ಥಾನ ಪಡೆಯಲಾಗಿದೆ ಎಂದರು.
Get in Touch With Us info@kalpa.news Whatsapp: 9481252093
Discussion about this post