ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸಾರ್ವಜನಿಕ ಹಿತ ಸುಖ ಕಾಯುವ ನಿಟ್ಟಿನಲ್ಲಿ ಆಡಳಿತಾರೂಢ ಸರ್ಕಾರವು ಕಾಲಕಾಲಕ್ಕೆ ರೂಪಿಸಿ ಅನುಷ್ಠಾನಗೊಳಿಸುವ ಜನಪರ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ, ಅವರ ನೆಮ್ಮದಿಯ ಬದುಕಿಗೆ ಆಸರೆ ಒದಗಿಸಬೇಕೆಂಬ ಸದುದ್ದೇಶ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಅವರು ಇಂದು ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಡಿಜಿಟಲ್ ಸಂವಾದ ನಡೆಸಿ ಮಾತನಾಡಿದರು.
ಸರ್ಕಾರವು ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ರಾಜ್ಯ ಅತೀವೃಷ್ಠಿಗೆ ಒಳಗಾಗಿದ್ದು, ಭೀಕರ ಹಾಗೂ ಗಂಭೀರವಾದ ಸವಾಲುಗಳನ್ನು ಎದುರಿಸಬೇಕಾಯಿತು. ನಂತರದ ಕೆಲವು ದಿನಗಳಲ್ಲಿ ದೇಶದಾದ್ಯಂತ ವ್ಯಾಪಿಸಿರುವ ಮಾರಕ ಸೋಂಕು ಕೊರೋನ ನಿಯಂತ್ರಣಕ್ಕಾಗಿ ಸುಮಾರು 45ದಿನಗಳಿಗೂ ಹೆಚ್ಚು ಕಾಲ ಲಾಕ್‌ಡೌನ್ ಘೋಷಿಸುವುದು ಅನಿವಾರ್ಯವಾಯಿತು ಇದರಿಂದಾಗಿ ರಾಜ್ಯದ ಅಭಿವೃದ್ದಿ ಕಾರ್ಯಗಳಿಗೆ ಹಿನ್ನೆಡೆಯಾಯಿತು ಎಂದರು.
ಈ ಎಲ್ಲಾ ಸಂಕಷ್ಟದ ಸಂದರ್ಭದಲ್ಲಿಯೂ ರಾಜ್ಯದ ನೊಂದ ಹಾಗೂ ಜನಸಾಮಾನ್ಯರ ನೆಮ್ಮದಿಯ ಜೀವನಕ್ಕಾಗಿ ಹಲವು ಮಹತ್ವದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಅವರ ನೆರವಿಗೆ ಧಾವಿಸಿದೆ. ಅಲ್ಲದೇ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿಯೂ ಸರ್ಕಾರ ಸನ್ನದ್ಧವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ, ಅವರ ಅಭಿಪ್ರಾಯ ಪಡೆದ ಅವರು, ಮುಂದಿನ ದಿನಗಳಲ್ಲಿ ಅಗತ್ಯವಿರುವವರಿಗಾಗಿ ಇನ್ನಷ್ಟು ಆರ್ಥಿಕ ನೆರವು ಒದಗಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.
ಮೀನುಗಾರಿಕೆ, ನೇಕಾರಿಕೆ, ಮನೆ ಕಳದುಕೊಂಡ ಸಂತ್ರಸ್ಥರು, ಸಹಾಯಧನ ಪಡೆದ ಅಗಸರು, ಕ್ಷೌರಿಕರು, ಕಟ್ಟಡ ಕಾರ್ಮಿಕರು, ಕೊರೋನ ವಾರಿಯರ್ಸ್ ಹಾಗೂ ಮುಂತಾದವರೊಂದಿಗೆ ಮುಖಾಮುಖಿಯಾಗಿ ಅಭಿಪ್ರಾಯ ಪಡೆದರು. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಬಿಡುಗಡೆಗೊಳಿಸಿದ ಪರಿಹಾರದ ಸ್ಪರ್ಶ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ವೇದಿಕೆಯಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ಕೃತಿಯನ್ನು ಬಿಡುಗಡೆಗೊಳಿಸಿದರು.
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ರುದ್ರೇಗೌಡ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ, ಆರ್ಯವೈಶ್ಯ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಡಿ.ಎಸ್. ಅರುಣ್, ಮೇಯರ್ ಸುವರ್ಣಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಕೆ. ರೇವಣಪ್ಪ, ಚನ್ನಬಸಪ್ಪ, ಅಪರ ಜಿಲ್ಲಾಧಿಕಾರಿ ಜಿ. ಅನುರಾಧ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಫೀಸಾದುದ್ದೀನ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post