ಚಳ್ಳಕೆರೆ: ಬಿಸಿಯೂಟ ತಯಾರಕರು ಸಹ ಸಮವಸ್ತ್ರ ಧರಿಸಬೇಕು ಶಾಸಕರ ಅನುದಾನದಲ್ಲಿ ಎರಡು ಜೊತೆ ಸಮವಸ್ತ್ರ ವಿತರಿಸುವುದಾಗಿ ಶಾಸಕ ಟಿ. ರಘುಮೂರ್ತಿ ಭರವಸೆ ನೀಡಿದರು.
ನಗರದ ಸ್ವಾಮಿ ವಿವೇಕಾನಂದ ಪ್ರೌಢಶಾಲಾ ಆವರಣದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಅಡುಗೆ ತಯಾರಕ ಹಾಗೂ ಸಹಾಯಕಿಯರ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮವಸ್ತ್ರ ವಿತರಿಸಲು ಶಾಸಕರ ಅನುದಾನದಲ್ಲಿ ಅವಕಾಶ ಇಲ್ಲದಿದ್ದಲ್ಲಿ ಸರ್ಕಾರದಿಂದಲೇ ಸಮವಸ್ತ್ರವನ್ನು ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ಭಯ ಮತ್ತು ಆತಂಕವನ್ನು ದೂರಮಾಡಿಕೊಂಡು ಮಕ್ಕಳಿಗೆ ಅತ್ಯುತ್ತಮ ಆಹಾರವನ್ನು ತಯಾರಿಸಿಕೊಡಬೇಕು. ಆಹಾರ ಬಿಸಿ ಇರುವುದರಿಂದ ಮಕ್ಕಳ ಮೇಲೆ ಬೀಳಬಹುದು. ಅಡುಗೆ ಮಾಡುವಾಗ, ಬಡಿಸುವಾಗ ತುಂಬಾ ಜಾಗೃತೆ ವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಮಿಕ ಸಂಘಟನೆಗಳ ರಾಜ್ಯ ಮುಖಂಡ ಸಿ.ವೈ. ಶಿವರುದ್ರಪ್ಪ ಮಾತನಾಡಿ, ಅಡುಗೆ ತಯಾರಕರಿಗೆ ಕನಿಷ್ಠ ವೇತನದ ನೀಡುತ್ತಿದ್ದು, ಇದರಿಂದ ಸರ್ಕಾರ ನೀಡುವ ವೇತನ ಯಾವುದಕ್ಕೂ ಸಾಲುತಿಲ್ಲ. ಬೆಳಗ್ಗೆ 10 ಬರುವ ಅಡಿಗೆ ತಯಾರಕರು ಸಂಜೆ 4 ಗಂಟೆಯವರೆಗೂ ಶಾಲೆಯಲ್ಲೇ ಇರಬೇಕಾಗುತ್ತದೆ. ಆದಕಾರಣ ಸರ್ಕಾರ ಅಡಿಗೆ ತಯಾರಕರಿಗೆ ವೇತನ ಜಾಸ್ತಿ ಮಾಡಬೇಕು. ಜೊತೆಗೆ ಸಾಮಾಜಿಕ ಭದ್ರತೆ ಒದಗಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ವೆಂಕಟೇಶಪ್ಪ ಮಾತನಾಡಿ, ಕರ್ನಾಟಕ ರಾಜ್ಯದ ಮಧ್ಯಾಹ್ನದ ಊಟದ ಯೋಜನೆಯ ಕಾರ್ಯಕ್ರಮ 2002-13 ನೆಯ ಸಾಲಿನ, ಮೊದಲ ಹಂತದಲ್ಲಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಈಶಾನ್ಯ ವಲಯದ ಏಳು ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ 1 ರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ ಬಿಸಿಯೂಟ ಪ್ರಾರಂಭವಾಗಿದೆ. ಅಲ್ಲಿಂದ ಮಕ್ಕಳು ಅಪೌಷ್ಟಕತೆಯಿಂದ ಬಳಲಬಾರದು ಮತ್ತು ಮನೆಗಳಿಗೆ ಹೋಗದೆ ಶಾಲೆಯಲ್ಲೇ ಇರಬೇಕು ಎಂಬ ಕಾರಣದಿಂದ ಬಿಸಿಯೂಟ ನೀಡುತ್ತಾ ಬಂದಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಹಾಲು ಸಹ ನೀಡುತ್ತದೆ ಎಂದರು.
ಕಾರ್ಮಿಕ ಇಲಾಖೆ ನಿರೀಕ್ಷಕ ಸೈಪುಲ್ಲಾ, ಅಗ್ನಿಶಾಮಕ ದಳ ನಿಜಗುಣ, ಆರೋಗ್ಯ ಇಲಾಖೆ ತಿಪ್ಪೇಸ್ವಾಮಿ, ಅಕ್ಷರ ದಾಸೋಹದ ತಾಲೂಕು ಅಧಿಕಾರಿ ತಿಪ್ಪೇಸ್ವಾಮಿ ಮಾತನಾಡಿದರು.
ನಗರಸಭೆ ಸದಸ್ಯರಾದ ಸುಜಾತ, ರಮೇಶಗೌಡ, ಎಚ್.ಎಸ್.ಸೈಯದ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ಆರ್. ಪ್ರಸನ್ನಕುಮಾರ್, ಬೋರಣ್ಣ, ಪಾಲಯ್ಯ, ಮುಖ್ಯಶಿಕ್ಷಕಿ ಡಿ.ಆರ್. ಪ್ರಮೀಳಾ, ಶಿಕ್ಷಕ ಶ್ರೀಧರ ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Discussion about this post