ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಪ್ಪಳ: ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಳಗೊಂದು ಹೊರಗೊಂದು ಮಾತನಾಡುವ ದ್ವಂದ್ವ ನೀತಿ ಬಿಡಬೇಕೆಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತೀವ್ರ ವಾಗ್ದಾಳಿ ನಡೆಸಿದರು.
ಕೊಪ್ಪಳ ನಗರದಲ್ಲಿಂದು ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ಸರ್ಕಾರದವ್ರು ತಾವು ಹಂಚುವ ಆಹಾರಧಾನ್ಯ ಮತ್ತಿತರೆ ಅವಶ್ಯಕ ಪದಾರ್ಥಗಳ ಕಿಟ್ ಮೇಲೆ ಬಿಜೆಪಿ ಚಿನ್ಹೆ ಹಾಕಿ ವಿತರಿಸುತ್ತಿದ್ದಾರೆ ಎಂಬ ಅವರ ಟೀಕೆ ಹುರುಳಿಲ್ಲದ್ದು. ಬಿಜೆಪಿ ಮುಖಂಡರು ತಮ್ಮ ಸ್ವಂತ ಖರ್ಚಿನಲ್ಲಿ ವಿತರಣೆ ಮಾಡುತ್ತಿರುವ ಕಿಟ್’ಗಳನ್ನು ತಂದು ಅವರು ಈ ರೀತಿ ಆರೋಪ ಮಾಡುವುದು ಸರಿಯಲ್ಲ. ವಿವರಗಳನ್ನು ಪರಿಶೀಲಿಸಿ ಮಾತನಾಡಬೇಕೆಂದರು.
ಇತ್ತೀಚೆಗೆ ವಿಧಾನಸೌಧದಲ್ಲಿ ಸರ್ಕಾರ ನಡೆಸಿದ ಸರ್ವಪಕ್ಷಗಳ ಮುಖಂಡರ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಯಡಿಯೂರಪ್ಪ ನೇತೃತ್ವದ ಸರ್ಕಾರ ಕೊರೋನಾ ಸಂಕಷ್ಟ ಸಮಯದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಹತ್ತಾರು ಬಾರಿ ಹೊಗಳಿದರು. ಹೀಗೆ ಹೇಳಿದವರು ಹೊರಗೆ ಅನಗತ್ಯ ಟೀಕೆ-ಆರೋಪ ಮಾಡುತ್ತಿದ್ದಾರೆ. ಇಂಥ ಇಬ್ಬಗೆ ನೀತಿಯನ್ನು ಅವರು ಬಿಡಬೇಕೆಂದರು.
ಹುರುಳಿಲ್ಲದಿದ್ದರೂ ಟೀಕೆ ಮಾಡುತ್ತಲೇ ಇರುವ ಅವರಿಗೆ ಟೀಕೆ ಮಾಡದಿದ್ದರೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಪಟ್ಟದಿಂದ ಕಿತ್ತೊಗೆಯುತ್ತಾರೆ ಎಂಬ ಭೀತಿ ಆವರಿಸಿಕೊಂಡಿದೆ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಮಾಡುವ ಹುರುಳಿಲ್ಲದ ಟೀಕೆಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ. ಏಪ್ರಿಲ್ ತಿಂಗಳಿನಲ್ಲಿ ತೀರಾ ಅವಶ್ಯಕ ಸೇವೆ ಹೊರತುಪಡಿಸಿ ಉಳಿದ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಈಗ ಅವು ಪುನಾರಂಭವಾಗಿದ್ದು ಎಲ್ಲ ಬಿಲ್’ಗಳನ್ನು ಕ್ರಮವಾಗಿ ವಿಲೇವಾರಿ ಮಾಡುತ್ತಿದ್ದಾರೆ. ಬಿಲ್ ಮತ್ತು ಸಂಬಳ ನೀಡಲಾಗದಂಥ ಮಟ್ಟಕ್ಕೆ ಸರ್ಕಾರ ಹೋಗಿಲ್ಲ ಎಂದು ಆಕ್ರೋಶದಿಂದ ಹೇಳಿದರು.
ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ವಿವರಿಸಿದ ಅವರು, ಪ್ರತಿ ರಾಜ್ಯಕ್ಕೂ ಓರ್ವ ಐಎಎಸ್ ಹಂತದ ಅಧಿಕಾರಿಯನ್ನು ನಿಯೋಜಿಸಿ ಸೇವಾಸಿಂಧು ಮೂಲಕ ಪ್ರಯಾಣ ಮಾಡುವವರ ವಿವರ ನೋಂದಾಯಿಸಿಕೊಂಡು ಕಳಿಸಲಾಗಿದೆ. ಸರ್ಕಾರ ಯಾರಿಗೂ ತೊಂದರೆಯಾಗದಂತೆ ಶಕ್ತಿಮೀರಿ ಶ್ರಮಿಸುತ್ತಿದೆ ಎಂದು ವಿವರಿಸಿದರು.
Get in Touch With Us info@kalpa.news Whatsapp: 9481252093
Discussion about this post