ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿರುವ ಶಾಲೆಗಳನ್ನು ಆರಂಭಿಸಲು ಈವರೆಗೂ ಯಾವುದೇ ದಿನಾಂಕವನ್ನು ಶಿಕ್ಷಣ ಇಲಾಖೆ ನಿಗದಿಪಡಿಸಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಜುಲೈ ಒಂದರಿಂದ ಶಾಲೆಗಳ ಆರಂಭ ಎಂದು ಮಾಧ್ಯಮಗಳ ಸುದ್ದಿ ಹಿನ್ನೆಲೆಯಲ್ಲಿ ಪೋಷಕರಿಗೆ ಫೇಸ್’ಬುಕ್ ಲೈವ್ ಮೂಲಕ ಸ್ಪಷ್ಟೀಕರಣ ನೀಡಿರುವ ಅವರು, ತರಾತುರಿಯಲ್ಲಿ ಶಾಲೆಗಳನ್ನು ಆರಂಭಿಸುವುದಿಲ್ಲ ಎಂದಿದ್ದಾರೆ.
ಶಾಲೆಗಳನ್ನು ಯಾವಾಗಿನಿಂದ ಆರಂಭಿಸಬೇಕು ಎಂಬ ವಿಚಾರದಲ್ಲಿ ಪೋಷಕರಿಂದ ಅಭಿಪ್ರಾಯ ಸಂಗ್ರಹ ಮಾಡುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದ್ದು, ಈ ಪ್ರಕ್ರಿಯೆಗಳನ್ನು ಮಾತ್ರ ನಡೆಸಲಾಗುತ್ತಿದೆ. ಹೀಗಾಗಿ, ಎಲ್ಲ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದ್ದು, ಇದಕ್ಕಾಗಿ ಜೂನ್ 10,11 ಹಾಗೂ 12ರಂದು ಖಾಸಗಿ ಶಾಲೆಗಳು ಪೋಷಕರ ಸಭೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ಎಸ್’ಡಿಎಂಸಿ ಸಮಿತಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಬೇಕು. ತರಗತಿಗಳನ್ನು ಸಾಮಾಜಿಕ ಅಂತರವಿಟ್ಟುಕೊಂಡು ನಡೆಸುವುದು ಹೇಗೆ, ಶಾಲೆಗಳಲ್ಲಿ ಮಕ್ಕಳ ಹಿತಕ್ಕೋಸ್ಕರ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಕುರಿತಾಗಿನ ಎಲ್ಲ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದರು.
ಇನ್ನು, ಈಗಾಗಲೇ ನಾವು ಬಹಳಷ್ಟು ಪೋಷಕರ ಅಭಿಪ್ರಾಯ ಸಂಗ್ರಹಿಸಿದ್ದು, ಸದ್ಯಕ್ಕೆ ಪ್ರೈಮರಿ, ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳನ್ನು ತೆರೆಯುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜೂನ್ 15ರ ವೇಳೆಗೆ ಎಲ್ಲ ಅಭಿಪ್ರಾಯಗಳನ್ನು ಸಂಗ್ರಹಿಸಿ, ಆನಂತರ ಶಾಲೆ ಆರಂಭಿಸುವ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಇನ್ನು, ಖಾಸಗಿ ಶಾಲೆಗಳ ಲಾಭಿಗೆ ಮಣಿದಿರುವ ರಾಜ್ಯ ಸರ್ಕಾರ, ಮಕ್ಕಳ ಹಿತವನ್ನು ಬಲಿ ಕೊಟ್ಟು ಜುಲೈ 1ರಿಂದ ಶಾಲೆ ಆರಂಭಿಸಲು ಮುಂದಾಗಿದೆ ಎಂಬ ವರದಿಗಳನ್ನು ತಳ್ಳಿ ಹಾಕಿರುವ ಸಚಿವರು, ಇಂತಹ ಯಾವುದೇ ಲಾಭಿ ನಡೆದಿಲ್ಲ ಹಾಗೂ ಇಂತಹ ಲಾಭಿಗಳಿಗೆ ಸರ್ಕಾರ ಮಣಿಯುವುದೂ ಇಲ್ಲ. ಈ ಕುರಿತಾಗಿ ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ನಮಗೆ ಎಲ್ಲಕ್ಕಿಂತಲೂ ಮಕ್ಕಳ ಹಿತ ಮುಖ್ಯ ಎಂದರು.
Get In Touch With Us info@kalpa.news Whatsapp: 9481252093
Discussion about this post