ಕಲ್ಪ ಮೀಡಿಯಾ ಹೌಸ್ | ಮಿಜೋರಾಂನಿಂದ ಪ್ರತ್ಯಕ್ಷ ವರದಿ-2 |
ಕಣ್ಣು ಹಾಯಿಸಿದಲ್ಲೆಲ್ಲಾ ಹಚ್ಚ ಹಸಿರು, ದಟ್ಟ ಕಾನನ, ಭಯಾನಕ ಪ್ರಪಾತಗಳು ಹಾಗೂ ದುರ್ಗಮ ಪ್ರದೇಶ. ಅದೇ ಈಶಾನ್ಯ ಪ್ರದೇಶದ ಮಿಜೋರಾಂ ಎಂಬ ಪುಟ್ಟ ರಾಜ್ಯ. ಇಲ್ಲಿ ನಮ್ಮ ಹೆಮ್ಮೆಯ ರೈಲ್ವೆ ಇಂಜಿನಿಯರ್’ಗೆ ಸೃಷ್ಠಿಸಿರುವ ಒಂದು ಅದ್ಭುತವೇ ಸೈರಾಂಗ್ – ಬೈರಾಬಿ ಬ್ರಾಡ್ ಗೇಜ್ ಮಾರ್ಗ.
ಹೌದು… ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್ ದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ, ಪ್ರಾಕೃತಿಕ ಸೊಬಗನ್ನು ಹೊದ್ದುಕೊಂಡಿದ್ದರೂ, ಈಶಾನ್ಯ ರಾಜ್ಯಗಳಲ್ಲೇ ಅತಿ ಹಿಂದುಳಿದ ಮಿಜೋರಾಂನಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಪ್ರಮುಖವಾಗಿ, ಮಿಜೋರಾಂನ ಸಮಗ್ರ ಅಭಿವೃದ್ಧಿಯ ಭಾಗವಾಗಿ ಈ ರಾಜ್ಯದ ರಾಷ್ಟ್ರೀಯ ಸಂಪರ್ಕವನ್ನು ವಿಸ್ತರಿಸಲು ಸೈರಾಂಗ್ – ಬೈರಾಬಿ ನೂತನ ಬ್ರಾಡ್ ಗೇಜ್ ರೈಲು ಮಾರ್ಗವನ್ನು ನಿರ್ಮಿಸಿದೆ. ಈ ಮೂಲಕ ಸ್ಥಳೀಯರ 26 ವರ್ಷಗಳ ಕನಸನ್ನು ನನಸಾಗಿಸಿದೆ.
ಸಮುದ್ರ ಮಟ್ಟದಿಂದ 900 ಮೀಟರ್, ಭೂಮಿಯ ಸಮತಟ್ಟಿನಿಂದ 2,165 ಮೀಟರ್ ಎತ್ತರ ಪ್ರದೇಶದಲ್ಲಿರುವ ಈ ಪ್ರದೇಶದಲ್ಲಿ ರೈಲ್ವೆ ಮಾರ್ಗ ನಿರ್ಮಿಸುವುದು ಅತ್ಯಂತ ಸಾಹಸವಾದ ಕೆಲಸವಾಗಿತ್ತು. ಅಲ್ಲಿರುವ ಬೆಟ್ಟುಗಳು ಹಾಗೂ ಕಣಿವೆಗಳ ನಡುವೆ ರೈಲ್ವೆ ಯೋಜನೆ ಜಾರಿಗೊಳಿಸುವ ವೇಳೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜೀವವನ್ನೇ ಒತ್ತೆಯಿಟ್ಟಿದ್ದಾರೆ.
- 70 ಮೀಟರ್’ಗಿಂತಲೂ ಎತ್ತರದ 6 ಸೇತುವೆಗಳು (ಗರಿಷ್ಠ 114 ಮೀ)
- ದುರ್ಗಮ ಸವಾಲಿನ ಭೂವೈಜ್ಞಾನಿಕ ಪರಿಸ್ಥಿತಿಗಳಲ್ಲಿ 45 ಸುರಂಗಗಳು
- ಎಲ್ಲಾ ಸುರಂಗಗಳಲ್ಲಿ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್ ಅಳವಡಿಕೆ
- ಒಟ್ಟು ಸೇತುವೆಗಳ ಉದ್ದ – 11.78 ಕಿ.ಮೀ (23%)
- ಒಟ್ಟು ಸೇತುವೆಗಳು – 153
- ಸಣ್ಣ ಸೇತುವೆಗಳು – 88
- ಆರ್’ಒಬಿ ಮತ್ತು ಆರ್’ಯುಬಿ – 10
- ದೊಡ್ಡ ಸೇತುವೆಗಳು – 55
- ಮಾರ್ಗದ ಒಟ್ಟು ಸುರಂಗಗಳು – 45
- ಸುರಂಗಗಳ ಒಟ್ಟು ಉದ್ದ – 15.885 ಕಿ.ಮೀ (31%)
- ಅತಿದೊಡ್ಡ ಸುರಂಗ – 1.868 ಕಿ.ಮೀ

ನೆರೆಯ ಮಣಿಪುರದಲ್ಲಿರುವ ನೋನಿ ಸೇತುವೆ ಅತಿ ಎತ್ತರವಾಗಿದ್ದು, 141 ಮೀಟರ್ ಎತ್ತರವಿದೆ, ಇದನ್ನು ನಿರ್ಮಾಣ ಹಂತದಲ್ಲಿರುವ 111-ಕಿಮೀ ಜಿರಿಬಮ್-ಇಂಫಾಲ್ ರೈಲು ಮಾರ್ಗದ ಭಾಗವಾಗಿ ನಿರ್ಮಾಣವಾಗಿದೆ.
ಏನೆಲ್ಲಾ ಸವಾಲುಗಳು ಎದುರಾಗಿದ್ದವು?
ಬೈರಾಬಿ-ಸೈರಾಂಗ್ ಮಾರ್ಗವನ್ನು ನಿರ್ಮಿಸುವಾಗ ರೈಲ್ವೆಗಳು ಕಠಿಣವಾದ ಇಂಡೋ-ಬರ್ಮೀಸ್ ಟೆಕ್ಟೋನಿಕ್ ಭೂಪ್ರದೇಶವನ್ನು ಹೊಂದಿದ್ದರಿಂದ, ಕಡಿದಾದ ಇಳಿಜಾರುಗಳು, ಆಳವಾದ ಕಣಿವೆಗಳು ಮತ್ತು ಸವೆತಕ್ಕೆ ಒಳಗಾಗುವ ದುರ್ಬಲವಾದ, ಜೇಡಿಮಣ್ಣಿನಂತಹ ಮಣ್ಣಿನಿಂದ ಕೂಡಿರುವ ಕಾರಣ, ನಿರ್ಮಾಣದ ವೇಳೆ ದೊಡ್ಡ ಸವಾಲುಗಳನ್ನು ತಂಡ ಎದುರಿಸಬೇಕಾಯಿತು.
ಐಐಟಿ ಗುವಾಹಟಿ ಮತ್ತು ಐಐಟಿ ರೂರ್ಕಿಯಿಂದ ವಿನ್ಯಾಸ ಮತ್ತು ಸುರಕ್ಷತಾ ಅಂಶಗಳನ್ನು ಪರಿಶೀಲಿಸಿದ ಈ ಯೋಜನೆಯನ್ನು ಕಾರ್ಯಗತಗೊಳಿಸಿದ ಸಂಸ್ಥೆಯಾದ ಈಶಾನ್ಯ ಗಡಿನಾಡು ರೈಲ್ವೆ (ನಿರ್ಮಾಣ), 223 ಕಿಮೀ ಸಂಪರ್ಕ ರಸ್ತೆಗಳನ್ನು ಸಹ ನಿರ್ಮಿಸಿದೆ.
ಹಳಿ ನಿರ್ಮಾಣಕ್ಕಾಗಿ ಗುಡ್ಡ ಅಗೆಯುವುದು, ಪಿಯರ್(ಕಂಬ) ನಿರ್ಮಾಣದ ಹಂತಕ್ಕೆ ತಲುಪುವುದು ಅತ್ಯಂತ ಕ್ಲಿಷ್ಟಕರವಾಗಿತ್ತು. ಇಲ್ಲಿನ ಬಹುತೇಕ ಪ್ರದೇಶಗಳಿಗೆ ರಸ್ತೆ ಸಂಪರ್ಕವೇ ಇರಲಿಲ್ಲ. ಹೀಗಾಗಿ, ಎನ್’ಎಫ್’ಆರ್ ವತಿಯಿಂದ ಇಲ್ಲಿನ 23 ಕಿಲೋ ಮೀಟರ್ ರಸ್ತೆ ನಿರ್ಮಿಸಲಾಯಿತು. ಇದು ಅಂದಿನಿಂದ ಕೊಲಾಸಿಬ್ ಮತ್ತು ಐಜ್ವಾಲ್ ಜಿಲ್ಲೆಗಳ ಹಲವಾರು ಹಳ್ಳಿಗಳಿಗೆ ಪ್ರಯೋಜನವನ್ನು ನೀಡಿದೆ.
ಇನ್ನು, ಈ ಪ್ರದೇಶದಲ್ಲಿ ಪ್ರತಿ ವರ್ಷ ಕೇವಲ 4-5 ತಿಂಗಳು ಅಂದರೆ ನವೆಂಬರ್’ನಿಂದ -ಮಾರ್ಚ್’ವರೆಗೆ ಮಾತ್ರ ಇಲ್ಲಿ ಕೆಲಸ ನಿರ್ವಹಿಸುವುದು ಸಾಧ್ಯವಾಗಿತ್ತು. ಏಪ್ರಿಲ್-ಅಕ್ಟೋಬರ್’ಗಳು ಭಾರಿ ಮಳೆಯಿಂದ ಕಾರ್ಯ ನಿಂತುಹೋಗುತ್ತದೆ.
ಶೇಲ್, ಸಿಲ್ಟ್ಸ್ಟೋನ್, ಸ್ಯಾಂಡ್ಸ್ಟೋನ್ ಹಗುರ ಕಲ್ಲುಗಳು ನೀರು ನುಗ್ಗುವಿಕೆ ಮತ್ತು ಕುಸಿತಕ್ಕೆ ಕಾರಣವಾಗುತ್ತವೆ. ಅಲ್ಲದೇ, ಕೆಲಸದ ಸ್ಥಳಗಳಿಗೆ ಹೋಗುವ ರಸ್ತೆಗಳಲ್ಲಿ ಭೂಕುಸಿತ ಸಾಮಾನ್ಯ. ಸಣ್ಣ ಮಳೆಯಾದರೂ ರಸ್ತೆ ಜಾರಿ ಹೋಗಿ ಜನರು ಮತ್ತು ಸಾಮಗ್ರಿಗಳ ಚಲನೆ ಅಸಾಧ್ಯವಾಗಿತ್ತು.
ಇದರ ಜೊತೆಯಲ್ಲಿ ಕಾಮಗಾರಿಗೆ ಸ್ಥಳೀಯ ಕಾರ್ಮಿಕರ ಕೊರತೆಯಿತ್ತು. ಹೀಗಾಗಿ ಇತರ ರಾಜ್ಯಗಳಿಂದ ಕಾರ್ಮಿಕರನ್ನು ತರಬೇಕಾಯಿತು. ಕಾಮಗಾರಿಗೆ ಅಗತ್ಯವಾಗಿದ್ದ ಮರಳು, ಕಲ್ಲು ಮುಂತಾದ ಸಾಮಗ್ರಿಗಳು ಮಿಜೋರಾಂನಲ್ಲಿ ಲಭ್ಯವಿಲ್ಲ. ಹೀಗಾಗಿ, ಅಸ್ಸಾಂ, ಪಶ್ಚಿಮ ಬಂಗಾಳ, ಮೇಘಾಲಯ ಹಾಗೂ ಇತರ ರಾಜ್ಯಗಳಿಂದ ತರಬೇಕಾಗಿತ್ತು.
ಸ್ಥಳೀಯ ಪ್ರತಿರೋಧವನ್ನು ಪರಿಹರಿಸಲು, ರೈಲ್ವೆ ಇಲಾಖೆ ಅಂತಿಮವಾಗಿ ಮಿಜೋರಾಂನ ಸ್ಥಳೀಯ ಜನರನ್ನು ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿತು.
ಈ ಪ್ರದೇಶದಲ್ಲಿ ವರ್ಷಕ್ಕೆ ಕೇವಲ 6-7 ತಿಂಗಳುಗಳ ಕೆಲಸದ ಅವಧಿ ಕಡಿಮೆ ಇದ್ದ ಕಾರಣ ಯೋಜನೆಯು ನಿಧಾನಗತಿಯಲ್ಲಿ ಪ್ರಗತಿ ಕಂಡಿತು. ಹೆಚ್ಚಿನ ವೇತನದ ಹೊರತಾಗಿಯೂ, ದೂರದ ಸ್ಥಳ ಮತ್ತು ಕೆಲಸದ ಸ್ಥಳಗಳಲ್ಲಿ ಇಂಟರ್ನೆಟ್ ಸಂಪರ್ಕದ ಕೊರತೆಯಿಂದಾಗಿ ಅನೇಕ ಕಾರ್ಮಿಕರು ಯೋಜನೆಯನ್ನು ತೊರೆದಿದ್ದಾರೆ.
ಪರ್ವತ ಪ್ರದೇಶಗಳಾದ ಇಲ್ಲಿ ಈ ರೀತಿ ಸಾಮಗ್ರಿಗಳನ್ನು ಒದಗಿಸಿಕೊಂಡು ನಿರ್ಮಾಣ ಮಾಡಿರುವುದೇ ಒಂದು ಸಾಹಸವಾಗಿದೆ.
ನಾಳೆ: ಮಿಜೋರಾಂ | ಈಶಾನ್ಯ ರಾಜ್ಯವೊಂದರಲ್ಲಿ ರೈಲ್ವೆ ಇಂಜಿನಿಯರಿಂಗ್ ಅದ್ಭುತ | ಯಾಕಿಷ್ಟು ಮಹತ್ವ?
(ಸೈರಾಂಗ್-ಬೈರಾಬಿ ನಡುವಿನ ಈ ಯೋಜನೆಯ ಪ್ರತ್ಯಕ್ಷ ಅನುಭವ ಪಡೆಯಲು ಭಾರತೀಯ ರೈಲ್ವೆ ಆಯೋಜಿಸಿದ್ದ ಮೂರು ದಿನಗಳ ಕ್ಷೇತ್ರ ಭೇಟಿಯಲ್ಲಿ ಕಲ್ಪ ನ್ಯೂಸ್ ಸಂಪಾದಕರು ಪಾಲ್ಗೊಂಡಿದ್ದ ಖುದ್ಧು ಅನುಭವದ ಲೇಖನ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post