ನವದೆಹಲಿ: ಲೋಕಸಭಾ ಚುನಾವಣೆಗೆ ಮತದಾನ ಸಂಪೂರ್ಣ ಮುಕ್ತಾವಾದ ಹಿನ್ನೆಲೆಯಲ್ಲೇ ಮತದಾನೋತ್ತರ ಸಮೀಕ್ಷಾ ವರದಿಗಳು ಪ್ರಕಟವಾಗಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್’ಡಿಎಗೆ ಭರ್ಜರಿಯ ಜಯ ಎಂದಿರುವುದು ಪ್ರತಿಪಕ್ಷಗಳನ್ನು ಹತಾಷೆಗೆ ದೂಡಿದೆ.
ಸಮೀಕ್ಷಾ ವರದಿಗಳ ಹಿನ್ನೆಲೆಯಲ್ಲಿ ಹತಾಷೆಗೊಂಡಿರುವ ಮೋದಿ ವಿರೋಧಿ ನಾಯಕರುಗಳು ವಿಚಿತ್ರ ವಿಚಿತ್ರ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ, ಚುನಾವಣೋತ್ತರ ಸಮೀಕ್ಷೆಗಳು ಗಾಸಿಪ್ ಇದ್ದಂತೆ, ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.
ಮೋದಿ ಮತ್ತು ಶಾ ತಂಡ ಚುನಾವಣೆಯಲ್ಲಿ ಬಳಸಿದ್ದ ಕುತಂತ್ರವನ್ನೇ ಚುನಾವಣೋತ್ತರ ಸಮೀಕ್ಷೆಗಳಲ್ಲೂ ಬಳಸಿರುವ ಸಾಧ್ಯತೆ ಇದೆ. ಚುನಾವಣೋತ್ತರ ಸಮೀಕ್ಷೆಗಳನ್ನು ತಮ್ಮ ಪರ ಮಾಡಿಕೊಂಡು ಈ ನಡುವಿನ ಅವಧಿಯಲ್ಲಿ ಇವಿಎಂಗಳನ್ನು ತಿರುಚುವ ಅಥವಾ ಬದಲಿ ಇವಿಎಂಗಳನ್ನು ಸೇರಿಸುವ ಹುನ್ನಾರ ನಡೆದಿದೆ. ಈ ಬಗ್ಗೆ ನಾವು ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದಿದ್ದಾರೆ.
ಇನ್ನು ಈ ಕುರಿತಂತೆ ಮಾತನಾಡಿರುವ ಜಮ್ಮು ಕಾಶ್ಮೀರ ಮಾಜಿ ಸಿಎಂ ಓಮರ್ ಅಬ್ದುಲ್ಲಾ, ಎಲ್ಲ ಚುನಾವಣೋತ್ತರ ಸಮೀಕ್ಷೆಗಳೂ ಸರಿಯಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಎಲ್ಲ ಸಮೀಕ್ಷೆಗಳಲ್ಲೂ ಒಂದೇ ತೆರನಾದ ಫಲಿತಾಂಶ ಬಂದಾಗ ಅನುಮಾನ ಮೂಡುತ್ತದೆ. ಆದರೂ ಇದೇ 23ಕ್ಕೆ ಫಲಿತಾಂಶ ಪ್ರಕಟವಾಗಲಿದ್ದು, ಆಗ ಸಂಪೂರ್ಣ ಚಿತ್ರಣ ದೊರೆಯುತ್ತದೆ ಎಂದಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್, ಚುನಾವಣೋತ್ತರ ಸಮೀಕ್ಷೆಗಳು ನಿಖರವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಾಕಷ್ಟು ಬಾರಿ ಚುನಾವಣೋತ್ತರ ಸಮೀಕ್ಷೆ ಉಲ್ಟಾ ಆದ ಉದಾಹರಣೆಗಳೂ ಕೂಡ ಇದೆ. ಸಮೀಕ್ಷೆಗಳು ಏನೇ ಹೇಳಲಿ ಕಾಂಗ್ರೆಸ್ ಪಕ್ಷ ರಾಜ್ಯ ಮಟ್ಟದಲ್ಲಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲಿದ್ದು, ಮುಂದಿನ ಬಾರಿ ಕಾಂಗ್ರೆಸ್ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Discussion about this post