ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಾಡ ಹಬ್ಬ ದಸರಾವನ್ನು ಮುಂದಿನ ತಲೆಮಾರಿಗೆ ನಾವು ತಿಳಿಸಿ, ಉಳಿಸಿಕೊಡುವ ಕೆಲಸಗಳು ಆಗಬೇಕಿದೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದರು.
ಹಳೇನಗರ ಕನಕ ಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ದಸರಾ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ದೇಶದ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಪರಂಪರೆಯನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕಿದೆ. ಇದೇ ನಿಟ್ಟಿನಲ್ಲಿ ಪ್ರತಿ ವರ್ಷ ನಗರಸಭೆಯಿಂದ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಮುಂದಿನ ವರ್ಷ ಇನ್ನೂ ಹೆಚ್ಚಾಗಿ ಆಚರಿಸಲಾಗುವುದು ಎಂದರು.
ನಗರದ ಎಲ್ಲ ದೇವಾನುದೇವತೆಗಳನ್ನು ವಾಹನಗಳಲ್ಲಿ ಅಲಂಕರಿಸಿ ಸಂಜೆ 5 ಗಂಟೆ ವೇಳೆಗೆ ಹುತ್ತಾ ಕಾಲೋನಿಯಿಂದ ಮೆರವಣಿಗೆ ಆರಂಭಗೊಂಡಿತು. ವಿವಿಧ ದೇವಾನುದೇವತೆಗಳ ಅಲಂಕಾರ ನೋಡುಗರ ಕಣ್ಮನ ಸೆಳೆಯಿತು. ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ಇನ್ನಿತರ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಮೆರವಣಿಗೆ ಕನಕಮಂಟಪದಲ್ಲಿ ಸಮಾವೇಶಗೊಂಡಿತು. ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ರಂಗನಾಥ ಶರ್ಮಾ ನೇತೃತ್ವದ ವೈದಿಕರ ತಂಡ ಬನ್ನಿ ಮುಡಿಯುವ ಪೂಜಾ ವಿಧಿವಿಧಾನ ನಡೆಸಿತು.
ಸಂಪ್ರದಾಯದಂತೆ ತಹಶೀಲ್ದಾರ್ ಆರ್. ಪ್ರದೀಪ್ ನಿಕ್ಕಂ ಅವರು ಪೂಜೆ ಸಲ್ಲಿಸಿ, ಬನ್ನಿ ಮುಡಿದರು. ಈ ಮೂಲಕ ನಗರಸಭೆ ದಸರಾಗೆ ಅದ್ದೂರಿ ತೆರೆ ಬಿದ್ದಿತು.
ಆನಂತರ ರಾವಣ ಸಂಹಾರ ಹಾಗೂ ಸಿಡಿಮದ್ದು ಪ್ರದರ್ಶನ ನಡೆದಿದ್ದು, ಸಾವಿರಾರು ಮಂದಿಯ ಗಮನ ಸೆಳೆಯಿತು.
ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಪೌರಾಯುಕ್ತ ಮನುಕುಮಾರ್, ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು, ಪೌರಾಕಾರ್ಮಿಕರ ಸಂಘದ ಅಧ್ಯಕ್ಷ ಮಂಜುನಾಥ್, ಆರ್’ಒ ರಾಜಕುಮಾರ್, ಪ್ರಮುಖರಾದ ರಮಾಕಾಂತ್, ನರಸಿಂಹಚಾರ್, ಶ್ರೀನಿವಾಸ್, ಮಾರುತಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post