ಇಸ್ಲಾಮಾಬಾದ್: ಮೋಸ್ಟ್ ವಾಂಟೆಡ್ ಉಗ್ರ, ಪುಲ್ವಾಮಾ ದಾಳಿ ಮಾಸ್ಟರ್ ಮೈಂಡ್ ಉಗ್ರ ಮಸೂದ್ ಅಜರ್ ಮೃತಪಟ್ಟಿದ್ದಾನೆ ಎಂದು ರಾವಲ್ಪಿಂಡಿಯಿಂದ ವರದಿಯಾಗಿದೆ.
ಈ ಕುರಿತಂತೆ ಉನ್ನತ ಮೂಲಗಳಿಂದ ಮಾಹಿತಿ ಬಹುತೇಕ ಖಚಿತಗೊಂಡಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಮಸೂದ್ ರಾವಲ್ಪಿಂಡಿ ಆಸ್ಪತ್ರೆಯಲ್ಲಿ ಸತ್ತಿದ್ದು, ಈ ವಿಚಾರವನ್ನು ಪಾಕಿಸ್ಥಾನ ಮರೆ ಮಾಚಿದೆ ಎನ್ನಲಾಗಿದೆ. ಒಂದು ವೇಳೆ ಈ ವಿಚಾರ ನಿಜವೇ ಆದರೆ, ಇಡಿಯ ಭಾರತಕ್ಕೆ ಇಂದು ಶುಭದಿನವಾಗಲಿದೆ.
ಮೂತ್ರ ಪಿಂಡ ತೀವ್ರ ವೈಫಲ್ಯದಿಂದ ಬಳಲುತ್ತಿದ್ದ ಜೈಷ್ ಮುಖ್ಯಸ್ಥ ಮತ್ತು ಪುಲ್ವಾಮಾ ದಾಳಿ ರೂವಾರಿ ಅಜರ್ ರಾವಲ್ಪಿಂಡಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ ಎಂದು ಪಾಕ್ ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದವು.
ಇನ್ನೊಂದು ಮೂಲಗಳ ಪ್ರಕಾರ ದಾಳಿ ನಡೆದಾಗ ಅಜರ್ ಮಸೂದ್ ಮತ್ತು ಐಎಸ್’ಐ ನ ಉನ್ನತ ಶ್ರೇಣಿಯ ಅಧಿಕಾರಿ ಕರ್ನಲ್ ಸಲೀಂ ಇಬ್ಬರೂ ಬಾಲಾಕೋಟ್ ಉಗ್ರ ನೆಲೆಯಲ್ಲಿ ಇದ್ದರು ಎನ್ನಲಾಗಿದೆ. ಭಾರತೀಯ ವಾಯುಪಡೆ ದಾಳಿಯಿಂದಾಗಿ ಅಜರ್ ಮಸೂದ್ ಮತ್ತು ಕರ್ನಲ್ ಸಲೀಂ ತೀವ್ರ ಗಾಯಗೊಂಡಿದ್ದು, ಶೀಘ್ರವೇ ಅವರಿಬ್ಬರನ್ನೂ ಸೇನಾ ಆಸ್ಪತ್ರೆಗೆ ಸೇರಿಸಲಾಗಿತ್ತು.
ಅವರಲ್ಲಿ ಕರ್ನಲ್ ಸಲೀಂ ಆಗಲೇ ಸಾವನ್ನಪ್ಪಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಜೈಶ್ ಮುಖ್ಯಸ್ಥ ಮಸೂದ್ ಅಜರ್ ಶನಿವಾರ ಅಂದರೆ ಮಾರ್ಚ್ ಎರಡರಂದು ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಇನ್ನು ಬಾಲಾಕೋಟ್ ದಾಳಿಯ ವಿಚಾರದಲ್ಲಿ ಪ್ರತ್ಯಕ್ಷದರ್ಶಿಯೊಬ್ಬ ಅಂತಾರಾಷ್ಟ್ರೀಯ ಮಾಧ್ಯಮಕ್ಕೆ ಮಾತನಾಡಿದ್ದು, ದಾಳಿಯ ಸ್ಥಳವನ್ನು ಪಾಕಿಸ್ಥಾನ ಸೇನೆ ತಕ್ಷಣವೇ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಸ್ಥಳೀಯ ಪೊಲೀಸರಿಗೆ ಕೂಡಾ ದಾಳಿ ನಡೆದ ಸ್ಥಳಕ್ಕೆ ಹೋಗಲು ಅವಕಾಶ ನೀಡಿರಲಿಲ್ಲ. ಆ ಸ್ಥಳದಿಂದ ಸುಮಾರು 35 ಹೆಣಗಳನ್ನು ಸಾಗಿಸುವುದನ್ನು ನಾನು ನೋಡಿದ್ದೇನೆ ಎಂದಿದ್ದಾನೆ.
ಇನ್ನೊಂದೆಡೆ ಭಾರತಕ್ಕೆ ಮೋಸ್ಟ್ ವಾಂಟೆಡ್ ಉಗ್ರನಾಗಿರುವ ಅಜರ್ ನಮ್ಮ ದೇಶದಲ್ಲಿ ಇಲ್ಲ ಎಂದು ಪಾಕ್ ವಾದ ಮಾಡುತ್ತಲೇ ಇದೆ. ಆದರೆ, ಈಗ್ಗೆ ಎರಡು ದಿನಗಳ ಹಿಂದೆ ಮಾತನಾಡಿದ್ದ ಪಾಕ್ ವಿದೇಶಾಂಗ ಸಚಿವ, ಅಜರ್ ನಮ್ಮಲ್ಲೆ ಇದ್ದಾನೆ. ಅವನಿಗೆ ಅನಾರೋಗ್ಯ ಕಾಡುತ್ತಿದ್ದು ಓಡಾಡಲೂ ಆಗದ ಸ್ಥಿತಿಯಲ್ಲಿದ್ದಾನೆ ಎಂದಿದ್ದರು.
ಇದೇ ವೇಳೆ, ಅಜರ್ ಭಾರತ ಹಸ್ತಾಂತರಕ್ಕೆ ಹಾಗೂ ಜೈಷ್ ಉಗ್ರ ಸಂಘಟನೆ ನಿಷೇಧಕ್ಕೆ ಜಾಗತಿಕ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರ ಸಾವಿನ ನಾಟಕವನ್ನು ಪಾಕ್ ಆಡುತ್ತಿದೆ ಎಂಬ ಅನುಮಾನಗಳೂ ಸಹ ಮೂಡಿವೆ.
Discussion about this post