ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಹಿಳೆಯರ ದಿನ! ಅವರಿಗೆಂತಹ ದಿನ? ಭುಜಂಗ ಇದರ ಬಗ್ಗೆ ಉಗ್ರ ಹೋರಾಟ ಮಾಡ್ಲಿಕ್ಕುಂಟು ಅಲ್ವನ? ಅಹುದು ಇಂದು ಮೊದಲ ಉಸಿರಿನಿಂದ ಹಿಡಿದು ಕಟ್ಟ ಕಡೆಯ ಎದೆಯ ಬಡಿತದ ತನಕ ಜೀವ ತುಂಬುವ ತಾಯಂದಿರ ದಿನ.
ಮಹಿಳೆ – ತಾಯಿ, ಅಜ್ಜಿ, ಅಕ್ಕ, ತಂಗಿ, ಪತ್ನಿ, ಮಗಳು ಹೀಗೆ ಒಂದು ಬದುಕಿನಲ್ಲಿ ಅದೆಷ್ಟು ಅವತಾರಗಳಲ್ಲಿ ಬರುವರೋ ಆ ದೇವರೇ ಬಲ್ಲ. ಅದರಲ್ಲೂ ಕೆಲವು ಗಟ್ಟಿಗಿತ್ತಿಯರು ಇರುತ್ತಾರೆ. ಕಷ್ಟಗಳೆಲ್ಲಾ ಅವರನ್ನು ನೋಡುತ್ತ ಕೈ ಹಿಸುಕಿಕೊಳ್ಳುತ್ತಾ ಕುಳಿತಿರುತ್ತವೆ ಕೈಲಾಗದೆ. ಬದುಕು ಕೆಟ್ಟು ನಿಂತಾಗೆಲ್ಲ ಜಾಡಿಸಿ, ಕೊಡವಿ ಮತ್ತೆ ನವಿರು ನಂಬಿಕೆಯಿತ್ತು ಮತ್ತೆ ಚಲಾಯಿಸುವವರು. ಅವರನ್ನು ತುಂಬಾ ಜನರನ್ನು ನೋಡಿದ್ದೇನೆ. ಮತ್ತು ಸದಾ ಅಂತಹವರನ್ನು ಹುಡುಕುತ್ತೇನೆ ಕೂಡ.
ಪ್ರತಿ ಉಸಿರಿನಲ್ಲೂ ಎಡತಾಕುತ್ತಲೇ ಇರುವ ಜೀವ ಹಿಂಡುವ ನೋವಿಗೆ ಬೆನ್ನು ಹಾಕಿ ನಿಂತು ನಗುತ್ತ ನಿಂತವಳ ನೋಡಿದ್ದೇನೆ, ನೋವಿನ ಮೇಲೆ ನೋವುಂಡರೂ ಕನಸಿನ ರೆಕ್ಕೆ ಕಟ್ಟಿಕೊಂಡು ಜಯಿಸಿ ಬಾನೆತ್ತರಕ್ಕೆ ಜಿಗಿದವರ ನೋಡಿದ್ದೇನೆ, ಗಂಡ ಜವಾಬ್ದಾರಿ ಮರೆತಾಗ ಸಮಯಕ್ಕೆ ಸವಾಲು ಹಾಕಿ ದುಡಿದವರ ನೋಡಿದ್ದೇನೆ, ಎಳೆಯ ಹರೆಯಕ್ಕೆ ವಿವಾಹವಾಗಿ ವಾರ್ಷಿಕೋತ್ಸವಗಳ ಪರಿವೆಯೂ ಇಲ್ಲದೆ ನೆರಳಾಗಿ ನಿಂತು ಬದುಕುವವರ ನೋಡಿದ್ದೇನೆ. ಹೆಣ್ಣೆಂದರೆ ಬರೀ ತಾಯಲ್ಲ, ಅದೊಂದು ಜಗತ್ತು. ನೀವು ಜಗತ್ತಿಗೆ ಸವಾಲು ಹಾಕಲು ಸಾಧ್ಯವಿದೆ ಎಂದಾದರೆ ಒಂದೋ ನೀವು ಸ್ತ್ರೀಯಾಗಿರಬೇಕು. ಅಥವಾ ನಿಮ್ಮ ಜೊತೆಗೆ ಜೀವಕ್ಕೆ ಜೀವ ಎನ್ನುವ ಸ್ತ್ರೀ ಇರಬೇಕು.
ಅಂತಹ ಗಟ್ಟಿಗಿತ್ತಿಯರಲ್ಲಿ ಒಬ್ಬರು ಅಕ್ಷತಾ. ಇವತ್ತು ಅವರ ಮೃದು ಮನಸ್ಸಿನ ಕುರಿತು ಒಂದಷ್ಟು ಮಾತು. ವೃತ್ತಿಯಿಂದ ಬ್ಯಾಂಕ್ ಉದ್ಯೋಗಿ. ಮನದಲ್ಲಿ ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕು ಎಂಬ ತುಡಿತ. ಸ್ವಾಮಿ ವಿವೇಕಾನಂದರ ಒಂದು ಮಾತಿದೆ ಸಮಾಜಕ್ಕೆ ಏನೂ ಕೊಡದೇ ಕೇವಲ ಪಡೆಯುತ್ತಾ ಹೋದರೆ ಅದು ದುರ್ಬಲವಾಗುತ್ತದೆ, ದಿವಾಳಿ ಏಳುತ್ತದೆ. ಆದ್ದರಿಂದ ಸಮಾಜಕ್ಕೆ ಸೇವೆ ಸಲ್ಲಿಸಬೇಕಾದುದು ಪ್ರತಿಯೊಬ್ಬನ ಆದ್ಯ ಕರ್ತವ್ಯ. ಅಂತಹ ಆದ್ಯ ಕರ್ತವ್ಯವನ್ನು ಅಕ್ಷತಾ ಅವರು ಇವತ್ತು ನೆರವೇರಿಸಿದ್ದಾರೆ.
ಇವತ್ತಿನ ದಿನ ಗೃಹಿಣಿಯರಲ್ಲದೆ, ವೃತ್ತಿನಿರತ ಮಹಿಳೆಯರು ಏನು ಮಾಡಬಹುದೋ ಅದೆಲ್ಲವನ್ನೂ ಹೊರತುಪಡಿಸಿ ವಿಭಿನ್ನವಾಗಿ ನಿಂತಿದ್ದಾರೆ. ಅದೆಂತದೋ ದಿವ್ಯ ಸೆಳೆತಕ್ಕೆ ಒಳಗಾಗಿ, ವನವಾಸಿ ಕಿರಣಗಳೊಂದಿಗೆ ಜತೆಯಾಗಿ ಹಾರೈಸುತ್ತಿದ್ದಾರೆ. ಅವರ ಮನಸ್ಸಿಗೆ, ಪ್ರೀತಿಗೆ ಇದೋ ಶರಣು.
ಹಿಂದೊಮ್ಮೆ ಸಾಗರದ ವನವಾಸಿ ಮಕ್ಕಳ ನಿಲಯದ ಕುರಿತು ತಿಳಿಸಿದ್ದೆ.
ರಾಶಿ ರಾಶಿ ಕನಸುಗಳ ಬುತ್ತಿಯ ಹೊತ್ತ ಮಲೆನಾಡ ಈ ಸ್ಥಳಕ್ಕೆ ನೀವೊಮ್ಮೆ ಭೇಟಿ ನೀಡಲೇಬೇಕು
ಈ ಲೇಖನವನ್ನು ಓದಿದ್ದ ಅವರು ಅಂದಿನಿಂದಲೂ ತಮ್ಮ ಕೈಲಾದ ಸಹಾಯ ಮಾಡಲು ಬಯಸಿದ್ದರು. ಅದು ಇಂದು ನೆರವೇರಿದೆ. ಎರಡು ದಿನಗಳ ಹಿಂದಷ್ಟೇ ಮೊದಲ ಭೇಟಿಯಾಗಿ ಅವರು ಬಂದಾಗ ಮೊದಲು ಹೇಳಿದ್ದು ಸಾಗರದಲ್ಲಿ ಇಂತಹ ಎಷ್ಟು ಸುಂದರ ಸ್ಥಳ ಇದೆಯಲ್ಲ ಎಂದು, ಎರಡನೆಯದು ಚಿಕ್ಕ ಪುಟ್ಟ ಕಷ್ಟಗಳಿಗೆ ಓಗೊಟ್ಟು ಎಷ್ಟು ಸಮಯ ವ್ಯರ್ಥ ಮಾಡ್ತೀವಿ, ಬದುಕಿನಲ್ಲಿ ಮಾಡಲು ಬಹಳಷ್ಟು ಇದೆ ಅನ್ನುವುದು. ನಿಜ ಹೆಮ್ಮೆಯಾಯಿತು ನಿಮ್ಮ ಬಗ್ಗೆ.
ಮಹಿಳಾ ದಿನಾಚರಣೆಯ ಅಂಗವಾಗಿ ಸಾಗರದ ವರದಹಳ್ಳಿ ರಸ್ತೆಯಲ್ಲಿರುವ ವನವಾಸಿ ಮಕ್ಕಳ ವಿದ್ಯಾರ್ಥಿ ನಿಲಯಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ನಿಲಯದ ಅಷ್ಟೂ ಮಕ್ಕಳಿಗೆ ಮಧ್ಯಾನ್ಹದ ಊಟದ ಮತ್ತು ಸಿಹಿ ವ್ಯವಸ್ಥೆ ಹಾಗೂ ಮಕ್ಕಳಿಗೆ ವಸ್ತ್ರ ವಿತರಣೆ ಮಾಡಿದರು. ಅಲ್ಲದೆ ತಾವು ಜೊತೆ ಸೇರಿ ಮಕ್ಕಳೊಂದಿಗೆ ಊಟ ಸವಿದಿದ್ದಾರೆ. ಅತ್ಯಂತ ಅರ್ಥಪೂರ್ಣವಾಗಿ ಓರ್ವ ಸಶಕ್ತ ಸ್ತ್ರೀ ತನ್ನ ಸಮಾಜವನ್ನು ಪೊರೆದಂತೆ ನನಗೆ ಅನ್ನಿಸುತ್ತಿದೆ.
ಅವರೂ ಇಂದು ಸಮಾರಂಭಗಳಿಗೆ ತೆರಳಿ, ಆತ್ಮೀಯರನ್ನು ಭೇಟಿಯಾಗಿ ಒಂದಿಷ್ಟು ಸಮಯವನ್ನು ಮನೋರಂಜನೆಗೆ ನೀಡುವ ಎಲ್ಲಾ ಅವಕಾಶವಿತ್ತು.
ಆದರೆ ಅವರು ಇಂದು ನಮ್ಮೊಂದಿಗೆ ಇದ್ದು ಈ ರೀತಿಯಾಗಿ ಆಚರಿಸಿದ್ದು ಖುಷಿಯ ವಿಚಾರ. ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಾದ ಓಂಕಾರಪ್ಪ (7676147981) ಒಂದು ಮಾತು ಹೇಳಿದ್ದರು ಸಮಾಜ ಮೊದಲಿನಂತಿಲ್ಲ, ಮಾನವೀಯತೆ ಕಳೆದು ಹೋಗಿದೆ ಅನ್ನುವುದೆಲ್ಲ ಸುಳ್ಳು. ಈಗಲೂ ದಾನಿಗಳ ಆತ್ಮದಲ್ಲಿ ಅದು ಬೆಳಗುತ್ತಲೇ ಇದೆ ಎಂದು. ಸತ್ಯವಾದ ಮಾತು. ಇಂತಹ ದಿವ್ಯ ಮನಗಳು ವೃದ್ಧಿಸಲಿ, ಸನಾತನ ಪರಂಪರೆ ಜಗದ್ಗುರುವಾಗಲಿ, ತಾಯಿ ಭಾರತಿ ಅಕ್ಷತಾ ಮತ್ತು ಅವರ ಕುಟುಂಬವನ್ನು ನೂರ್ಕಾಲ ಹರಸಲಿ. ಭಾರತೀಯತೆ ಸದಾ ಕಂಗೊಳಿಸುತ್ತಲೇ ಇರಲಿ.
ವನವಾಸಿಗ್ರಾಮವಾಸಿನಗರವಾಸಿ_ನಾವೆಲ್ಲಾ ಭಾರತವಾಸಿ
Get in Touch With Us info@kalpa.news Whatsapp: 9481252093
Discussion about this post