ಮೈಸೂರು: ಮೈಸೂರು ಯುವ ದಸರಾ ವೇದಿಕೆಯಲ್ಲಿ ಬಿಗ್ ಬಾಸ್ ಖ್ಯಾತಿಯ ಬೇಬಿ ಡಾಲ್ ನಿವೇದಿತಾಗೆ ಪ್ರೇಮ ನಿವೇದನೆ ಮಾಡಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ವಿರುದ್ಧ ಮೈಸೂರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಈ ಕುರಿತಂತೆ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಯೂತ್ ಕಾಂಗ್ರೆಸ್ ವತಿಯಿಂದ ದೂರು ದಾಖಲಿಸಲಾಗಿದ್ದು, ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ತಮ್ಮ ವೈಯಕ್ತಿಕ ಕೆಲಸ ಸಾಧನೆಗಾಗಿ ಸರ್ಕಾರಿ ಹಾಗೂ ಸಾಂಸ್ಕೃತಿಕ ವೇದಿಕೆ ಬಳಸಿಕೊಂಡಿದ್ದು ತಪ್ಪು. ಅಲ್ಲದೇ ಆಹ್ವಾನವಿಲ್ಲದೇ ಇದ್ದರೂ ಸಹ ನಿವೇದಿತಾ ಅವರನ್ನು ವೇದಿಕೆಗೆ ಬಿಟ್ಟಿದ್ದು ಭದ್ರತಾ ಲೋಪವೂ ಸಹ ಆಗಿದೆ ಎಂದು ದೂರಲಾಗಿದೆ.
ಇನ್ನು ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಚಿವ ವಿ. ಸೋಮಣ್ಣ, ಚಂದನ್ ಶೆಟ್ಟಿ ಮತ್ತು ನಿವೇದಿತಾ ವೇದಿಕೆಯಲ್ಲಿ ನಡೆದುಕೊಂಡ ರೀತಿ ಅಕ್ಷಮ್ಯ ಅಪರಾಧ. ನಾಡಹಬ್ಬದ ವೇದಿಕೆಯಲ್ಲಿ ಈ ರೀತಿ ಆಗಬಾರದಿತ್ತು. ಇದಕ್ಕೆ ದಸರಾ ಉಪಸಮಿತಿ ಕಾರಣವಲ್ಲ. ಈ ಸಂಬಂಧ ಯುವ ದಸರಾ ಉಪಸಮಿತಿಯ ಕಾರ್ಯಾಧ್ಯಕ್ಷ, ಮೈಸೂರು ಜಿಲ್ಲಾ ಅಧೀಕ್ಷಕ ರಿಷ್ಯಂತ್ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
Discussion about this post