ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮೈಸೂರು: ಇದು ಕೊರೋನಾ ಕಾಲ ಎಂದರೆ ತಪ್ಪಲ್ಲ. ಜೊತೆಗೆ ಇದು ನಮಗೆ ಹಲವಾರು ಪಾಠಗಳನ್ನು ಹೇಳಿಕೊಟ್ಟಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆ ಕಾಪಾಡಿಕೊಳ್ಳುವುದು, ಕನಿಷ್ಠ ಮಂದಿ ಒಂದೆಡೆ ಸೇರುವುದು ಹೀಗೆ ಹತ್ತು ಹಲವು ಕಡಿವಾಣಗಳನ್ನು ನಮಗೆ ನಾವೇ ಹಾಕಿಕೊಳ್ಳುವಂತೆ ಮಾಡಿದೆ. ಇದು ಒಂದರ್ಥದಲ್ಲಿ ನಾವು ಧನಾತ್ಮಕವಾಗಿ ತೆಗೆದುಕೊಳ್ಳುವ ಅಂಶವೂ ಆಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಭಿಪ್ರಾಯಪಟ್ಟರು.
ಅವರು ನಗರದ ಚಾಮುಂಡಿ ಬೆಟ್ಟದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಏರ್ಪಡಿಸಲಾಗಿದ್ದ ಸರಳ-ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದು ನಮ್ಮ ಚಿಂತನೆಗಳು ಬದಲಿಸಿಕೊಂಡು ಸರಳ ಜೀವನ ನಡೆಸಬೇಕಾದ ಅವಶ್ಯಕತೆ ಇದೆ. ಬಹುಮುಖ್ಯವಾಗಿ ನಾವು ಮಾಡುವ ಸಮಾರಂಭಗಳು ಸೀಮಿತ ವ್ಯಾಪ್ತಿಗೆ ಬರಬೇಕಿದೆ. ಮದುವೆ-ಮುಂಜಿ ಸೇರಿದಂತೆ ಅನೇಕ ಸಂಭ್ರಮದ ಕಾರ್ಯಕ್ರಮಗಳು ಮನುಷ್ಯನ ಸಂತೋಷದ ದಿನಗಳ ಭಾಗ ಎಂಬುದರಲ್ಲಿ ಎರಡು ಮಾತಿಲ್ಲ. ಜೀವನದಲ್ಲಿ ಕೆಲವೇ ಕೆಲವು ಬಾರಿ ಬರುವ ಈ ಕ್ಷಣಗಳನ್ನು ಒಂದು ಕನಸಿನ ಮಾದರಿಯಲ್ಲಿ ಮಾಡುಬೇಕೆಂಬ ಹಂಬಲ ಇರುವುದೂ ತಪ್ಪಲ್ಲ. ಆದರೆ, ನಾವೀಗ ಪರಿಸ್ಥಿತಿಯನ್ನು ಅರಿತು ಹೆಜ್ಜೆ ಹಾಕಬೇಕಿದೆ ಎಂದು ಸಲಹೆ ನೀಡಿದರು.
ಹೆಚ್ಚಿನ ಜನರು ಒಂದೆಡೆ ಸೇರುವುದರಿಂದ ಕೊರೋನಾ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಸಮಾರಂಭಗಳಲ್ಲಿ ಮಕ್ಕಳು, ಹಿರಿಯರು ಪಾಲ್ಗೊಳ್ಳುವುದರಿಂದ ಅಪಾಯವನ್ನು ನಾವೇ ಆಹ್ವಾನಿಸಿದಂತಾಗುತ್ತದೆ. ಆದ್ದರಿಂದ ಎಚ್ಚರಿಕೆ ಅನಿವಾರ್ಯ ಎಂದು ಕಿವಿಮಾತು ಹೇಳಿದರು.
ಅದ್ದೂರಿತನ ಎಂಬುದು ನಮ್ಮ ಶಕ್ತಿಗನುಸಾರವಾಗಿ ಇರಬೇಕೇ ಹೊರತು ಪ್ರತಿಷ್ಠೆಯಾಗಬಾರದು. ಇನ್ನೊಬ್ಬರನ್ನು ನೋಡಿ ಆಡಂಬರ ಮಾಡುವುದಕ್ಕಾಗಿ ಸಾಲ ಮಾಡಿ, ಭರ್ಜರಿಯಾಗಿ ವಿವಾಹ ಕಾರ್ಯಗಳನ್ನು ಮುಗಿಸಿ ಜೀವಮಾನವಿಡೀ ಸಾಲದ ಸುಳಿಯಲ್ಲಿ ಸಿಲುಕಿ, ಬಳಿಕ ನಿಮ್ಮ ಮಕ್ಕಳನ್ನೂ ಆ ಸುಳಿಗೆ ನೂಕುವುದು ಸರಿಯಲ್ಲ. ಇಂಥದ್ದಕ್ಕೆಲ್ಲ, ಸರಳ ಸಾಮೂಹಿಕ ವಿವಾಹಗಳು ಉತ್ತಮ ಪರಿಹಾರ. ಈ ನಿಟ್ಟಿನಲ್ಲಿ ನಮ್ಮ ಚಿಂತನೆಗಳು ಸಾಗಲಿ ಎಂದರು.
ಸಾಮೂಹಿಕ ವಿವಾಹಗಳು ಹೆಚ್ಚೆಚ್ಚು ನಡೆಯಬೇಕು. ಆ ಮೂಲಕ ಬಡವರ ಬದುಕಿಗೆ ಹೊರೆಯಾಗುವ ಇಂಥ ಕಾರ್ಯಕ್ರಮಗಳು ವರವಾಗಿ ಪರಿಣಮಿಸಬೇಕು. ಈ ಕೆಲಸವನ್ನು ನಮ್ಮ ಧಾರ್ಮಿಕ ದತ್ತಿ ಇಲಾಖೆ ಹಮ್ಮಿಕೊಂಡಿರುವುದು ಸಮಯೋಚಿತ ಹಾಗೂ ಔಚಿತ್ಯಪೂರ್ಣವೂ ಹೌದು. ಹೀಗಾಗಿ ಅದ್ಧೂರಿತನಕ್ಕೆ ತಡೆ ನೀಡಿ, ಸರಳತನವನ್ನು ರೂಢಿಸಿಕೊಳ್ಳೋಣ. ಕೊರೋನಾ ಕಾಲದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡೋಣ ಎಂದು ಸಚಿವರು ಕರೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post