ಕಲ್ಪ ಮೀಡಿಯಾ ಹೌಸ್ | ಮೈಸೂರು |
ವಿಶ್ವವಿಖ್ಯಾತ ಮೈಸೂರು ದಸರಾ #MysoreDasara ಎನ್ನುವುದು ಒಂದು ಜೀವಂತ ಮಹಾಕಾವ್ಯವಾಗಿದೆ ಎಂದು ಖ್ಯಾತ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ #Hamsalekha ಬಣ್ಣಿಸಿದರು.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಅಧಿಕೃತ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.
ಮೈಸೂರು ದಸರಾಗೆ #MysoreDasara2023 ಚಾಲನೆ ನೀಡುವ ಅವಕಾಶ ಸಿಕ್ಕಿದ್ದಕ್ಕೆ ಮೊದಲು ಯಾರನ್ನು ನೆನೆಯಲಿ? ಅಪ್ಪ ಗೋವಿಂದರಾಜ ಮಾನೆ, ಅಮ್ಮ ರಾಜಮ್ಮ, ಗುರು ನೀಲಕಂಠ ಅಥವಾ ನಾದ, ನಾಟಕರಂಗ, ಸರ್ಕಾರ ಅಥವಾ ಸಂವಿಧಾನವನ್ನೇ. ಸಂವಿಧಾನದ ದನಿ ಸಿದ್ದರಾಮಯ್ಯ ಅವರನ್ನೇ? ಡಿಸಿಎಂ ಪ್ರಬಲ ಶಕ್ತಿ ಸಂಘಟಕ ಡಿ ಕೆ ಶಿವಕುಮಾರ್. ನನ್ನ ಹೆಸರು ಸೂಚಿಸಿದ ಡಾ ಎಚ್.ಸಿ. ಮಹದೇವಪ್ಪ ಅವರನ್ನೇ. ನನ್ನ ಹೆಂಡತಿ ಮಕ್ಕಳು ಅಭಿಮಾನಿಗಳನ್ನೇ? ಅಥವಾ ಭೂಮಿ ತಾಯಿಯನ್ನೇ ಯಾರು ಯಾರು ಅಂತಾ ಹೇಳಿ ಎಂದು ತಮ್ಮದೇ ಮಾತಿನ ಶೈಲಿಯಲ್ಲಿ ಮಾತು ಪ್ರಾರಂಭಿಸಿದರು.
ಕನ್ನಡಿಗರ ಆಶಯದಂತೆ ನಾನೀಗ ಕನ್ನಡ ದೀಪ ಹಚ್ಚಿದ್ದೇನೆ. ದಸರಾ ಎನ್ನುವುದು ಜೀವಂತ ಮಹಾಕಾವ್ಯ. ದಕ್ಷಿಣ ಭಾರತದ ವೀರರ ಕಥೆಯೆ ಈ ಮಹಾಕಾವ್ಯ. ವಿಜಯನಗರದ ಮಹಾ ಸಾಮ್ರಾಜ್ಯ ಆರಂಭಿಸಿದ ಮಹಾಕಾವ್ಯವಿದು. ದಸರಾ ಒಂದು ರೀತಿ ಕಥಾ ಕಣಜ. ಇದು ಮಹಾಕಾವ್ಯವಾಗಿ ಬೆಳಗಬೇಕು ಎಂದರು.
ಕನ್ನಡ ನಮ್ಮ ಶೃತಿ ಆಗಬೇಕು. ಅಭಿವೃದ್ಧಿ ನಮ್ಮ ಕೃತಿ ಆಗಬೇಕು. ಕನ್ನಡದ ಭಾಷೆಗೆ ಮಿತಿ ಇದೆ. ಆದರೆ ಭಾವಕ್ಕೆ ಮಿತಿ ಎಲ್ಲಿದೆ. ನಮಗೆ ದೆಹಲಿ ಬೇಕು ದೆಹಲಿಗೂ ನಾವು ಬೇಕು. ಆದರೆ ದೆಹಲಿಗೆ ಕನ್ನಡವೇ ಬೇಕಾಗುತ್ತಿಲ್ಲ. ಇದಕ್ಕೆ ತಲೆ ಕೆಡಿಸಿಕೊಳ್ಳೋದು ಬೇಡ. ನಾವು ಕನ್ನಡವನ್ನು ಜಗತ್ತಿನಲ್ಲಿ ಮೆರೆಸಬೇಕಿದೆ. ಕರ್ನಾಟಕದ #Karnataka ಶಾಂತಿ ಸಮೃದ್ಧಿ ಕನ್ನಡಿಗರ ಮಂತ್ರ ಆಗಬೇಕು ಎಂದರು.
414ನೆಯ ದಸರಾಗೆ ಚಾಲನೆ
ವಿಶ್ವವಿಖ್ಯಾತ 414ನೇ ಮೈಸೂರು ದಸರಾ ಮಹೋತ್ಸವಕ್ಕೆ ಭಾನುವಾರ ಅದ್ಧೂರಿ ಚಾಲನೆ ಸಿಕ್ಕಿದೆ.
ಬೆಳಗ್ಗೆ 10:15ರಿಂದ 10.36ರವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನಾಡದೇವಿ ತಾಯಿ ಚಾಮುಂಡೇಶ್ವರಿಗೆ #SriChamundeshwari ಪೂಜೆ ಸಲ್ಲಿಸುವ ಮೂಲಕ ಸಂಗೀತ ನಿರ್ದೇಶಕ ಹಂಸಲೇಖ ಚಾಲನೆ ನೀಡಿದರು.
ದಸರಾ ಉದ್ಘಾಟಕ ನಾದಬ್ರಹ್ಮ ಹಂಸಲೇಖ ಅವರಿಗೆ ವೀಣಾಧಾರಿಯಾದ ಸರಸ್ವತಿಯ ಗಂಧದ ವಿಗ್ರಹ ನೀಡಿ ಗೌರವ ಸಲ್ಲಿಸಲಾಯಿತು.
ಇದಕ್ಕೂ ಮೊದಲು ಹಂಸಲೇಖ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವಾರು ಗಣ್ಯರು ಅಲಂಕೃತ ಬೆಳ್ಳಿ ರಥದಲ್ಲಿ ಆಸೀನಳಾಗಿದ್ದ ಪಂಚಲೋಹದ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿದರು.
(ವರದಿ: ಡಿ.ಎಲ್. ಹರೀಶ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post