ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಾವು ನಿತ್ಯ ಮಾಡುವ ದೇವರ ಪೂಜೆಯ ಸಂದರ್ಭ ಅನುಸಂಧಾನ ಬಹಳ ಮುಖ್ಯ ಎಂದು ಸೋಸಲೆ ಶ್ರೀ ವ್ಯಾಸರಾಜರ ಮಠದ #VyasarajaMutt ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಹೇಳಿದರು.
ನಗರದ ಕೃಷ್ಣಮೂರ್ತಿಪುರಂನ ಸೋಸಲೆ #Sosale ಸಂಸ್ಥಾನದ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಬುಧವಾರ ಶ್ರೀ ರಾಮ ನವಮಿ #Ramanavami ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಪೂಜೆ ನಂತರ ಅವರು ಹಿರಿಯ ಲೇಖಕ ಡಾ. ಕೆ. ರಾಘವೇಂದ್ರ ರಾವ್ ಅವರ ‘ವರ್ಣಗಳ ಮೂಲಕ ಪರಮಾತ್ಮನ ಚಿಂತನೆ’ ಕೃತಿ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.
ದೇವತಾರಾಧನೆಗೂ ಮುನ್ನ ವಿವಿಧ ರೀತಿಯ ಅನುಷ್ಠಾನಗಳನ್ನು ಮಾಡಿಕೊಳ್ಳುವುದು ನಮ್ಮ ಸನಾತನ ಸಂಪ್ರದಾಯವೇ ಆಗಿದೆ. ದ್ವೈತ ಮತ ಪ್ರತಿಪಾದಕರಾದ ಶ್ರೀ ಆಚಾರ್ಯ ಮಧ್ವರು ಸಾಧಕನ ಮಾರ್ಗ ಸುಲಭವಾಗಲೆಂದು ವಿವಿಧ ಮಂತ್ರಗಳನ್ನು ಒಳಗೊಂಡ ತಂತ್ರಸಾರ ಎಂಬ ಗ್ರಂಥ ರಚನೆ ಮಾಡಿದ್ದಾರೆ. ಬ್ರಹ್ಮಸೂತ್ರ ಭಾಷ್ಯಾದಿ ಅನೇಕ ಮಹತ್ತರ ಕೃತಿಗಳಲ್ಲಿ ಅಪೂರ್ವ ಪ್ರಮೇಯಗಳನ್ನು ಪ್ರತಿಪಾದಿಸಿದ್ದಾರೆ ಎಂದರು.
ಅಲ್ಲಿರುವ ಒಂದೊಂದು ಪದಗಳೂ ಭಗವಂತನ ಗುಣಗಳನ್ನು ವರ್ಣಿಸಿವೆ. ನಮ್ಮ ದೇಹದ ವಿವಿಧ ಭಾಗಗಳಲ್ಲಿ ಇರುವ ಪರಮಾತ್ಮನ ಸ್ವರೂಪಾದಿ ಚಿಂತನೆಗಳು ಅಲ್ಲಿ ಅಡಗಿವೆ. ಅದೆಲ್ಲವನ್ನೂ ಬಹು ವರ್ಷಗಳ ಅಧ್ಯಯನದಿಂದ ಸರಳ ಕನ್ನಡದಲ್ಲಿ ರಾಘವೇಂದ್ರ ರಾವ್ ಅವರು ಸಂಗ್ರಹಿಸಿ ಕೃತಿ ರೂಪದಲ್ಲಿ ಹೊರ ತಂದಿದ್ದಾರೆ. ಸನಾತನ ಧರ್ಮ, ಶಾಸ್ತ್ರ ಮತ್ತು ಸಂಪ್ರದಾಯಗಳನ್ನು, ತಂತ್ರಸಾರೋಕ್ತ ಪೂಜಾ ಪದ್ಧತಿ ಅನುಸರಿಸುವ ಜಿಜ್ಞಾಸುಗಳಿಗೆ ಇದು ಕಣ್ಣು ತೆರೆಸುವ ಕೃತಿಯಾಗಿದೆ. ಕೈ ಹಿಡಿದು ನಡೆಸುವ ಮಾರ್ಗದರ್ಶಿಯಾಗಿದೆ ಎಂದು ಸ್ವಾಮೀಜಿ ಪ್ರಶಂಸಿಸಿದರು.
ಶಾಸ್ತ್ರಪಾಠ ಕಲಿತವರು
ವಯೋವೃದ್ಧರೂ, ಜ್ಞಾನವೃದ್ಧರೂ ಆಗಿರುವ ರಾಘವೇಂದ್ರ ರಾವ್ ಅವರು ಈ ಹಿಂದೆ ಫಲಿಮಾರು ಮಠದ ಶ್ರೀ ವಿದ್ಯಾಮಾನ್ಯ ತೀರ್ಥರು, ಪೇಜಾವರ ಶ್ರೀ ವಿಶ್ವೇಶತೀರ್ಥರು ಸೇರಿದಂತೆ ಹಲವಾರು ವಿದ್ವಾಂಸರ ಬಳಿ ಶಾಸ್ತ್ರಪಾಠ ಕಲಿತವರು. ಅವರ ಅನುಭವ ಮತ್ತು ಜ್ಞಾನವು ಸಾತ್ವಿಕರಿಗೆ ಕೃತಿರೂಪದಲ್ಲಿ ಬೆಳಕು ತೋರಲಿದೆ ಎಂದು ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಹೇಳಿದರು.
ಕೃತಿಕಾರ ಡಾ. ಕೆ. ರಾಘವೇಂದ್ರ ರಾವ್, ವಿಜಯಲಕ್ಷ್ಮೀ ರಾಘವೇಂದ್ರ, ಮುರಳೀಧರ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post