ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯ ವಿದ್ಯಾ ಸಂಶೋಧನಾಲಯ (ಓಆರ್‌ಐ) ಮತ್ತು ಶ್ರೀ ವ್ಯಾಸತೀರ್ಥ ಸಂಶೋಧನಾ ಪ್ರತಿಷ್ಠಾನ ಸಂಯುಕ್ತವಾಗಿ ಫೆ.14 ಮತ್ತು 15ರಂದು ಮಹಾಕವಿ `ಕಾಳಿದಾಸ ಕೃತಿ ಸಮೀಕ್ಷಾ’ ಎಂಬ ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಿದೆ.
ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ 14ರ ಬೆಳಗ್ಗೆ 10.30ಕ್ಕೆ ವಿಚಾರ ಸಂಕಿರಣವನ್ನು ಸೋಸಲೆ ಶ್ರೀ ವ್ಯಾಸರಾಜರ ಮಠದ ಪೀಠಾಧೀಶ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಸದ ಪ್ರತಾಪ ಸಿಂಹ ಉದ್ಘಾಟಿಸಲಿದ್ದಾರೆ.

ನಂತರ ವಿಚಾರ ಸಂಕಿರಣದಲ್ಲಿ ನಾಡಿನ ಹಿರಿಯ ಸಂಸ್ಕೃತ ಮತ್ತು ವೇದಾಂತ ವಿದ್ವಾಂಸರುಗಳಾದ ಡಾ. ಜಿ. ಕೃಷ್ಣಪ್ರಸಾದ್, ಡಾ. ಶರತ್‌ಚಂದ್ರ ಸ್ವಾಮಿ, ಡಾ. ಟಿ.ವಿ. ಸತ್ಯನಾರಾಯಣ, ಪ್ರೊ. ತಿರುಮಲಾಚಾರ್ಯ ಕುಲಕರ್ಣಿ, ಡಾ. ಉಮಾಕಾಂತ ಭಟ್, ಡಾ. ಎಚ್.ವಿ. ನಾಗರಾಜರಾವ್ ಪ್ರೌಢ ಉಪನ್ಯಾಸ ನೀಡಲಿದ್ದಾರೆ.

15ರ ಸಂಜೆ 4ಕ್ಕೆ ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ವಿಚಾರ ಸಂಕಿರಣದ ಸಮಾರೋಪ ಭಾಷಣ ಮಾಡಲಿದ್ದಾರೆ. ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಹೇಮಂತ ಕುಮಾರ್, ಪ್ರೊ. ಶ್ರೀನಿವಾಸಮೂರ್ತಿ, ಓಆರ್‌ಐ ಉಪ ನಿರ್ದೇಶಕಿ ಡಾ. ಸಿ. ಪಾರ್ವತಿ ಉಪಸ್ಥಿತರಿರಲಿದ್ದಾರೆ.
ಎರಡೂ ದಿನಗಳ ವಿಚಾರ ಸಂಕಿರಣದಲ್ಲಿ ವೇದಾಂತ, ಸಾಹಿತ್ಯ ಮತ್ತು ಸಂಸ್ಕೃತ ಕ್ಷೇತ್ರದ ತಜ್ಞರಾದ ಡಾ. ಕೆ.ವಿ. ರಾಮಪ್ರಿಯ, ಡಾ. ಸಿ.ಎನ್. ಬಸವರಾಜು, ವಿದ್ವಾನ್ ಪ್ರದೀಪ ಸಿಂಹಾಚಾರ್ಯ, ಡಾ. ಡಿ.ಆರ್. ಮಾಧವಾಚಾರ್ಯ, ವಿದ್ವಾನ್ ಕೆ.ವಿ. ಪ್ರಸನ್ನಾಚಾರ್ಯ, ಡಾ. ಎಂ. ಗೀತಾ, ಪಿ. ಗೌರಿ, ಡಾ. ಶೋಭಾ, ಡಾ. ವಂಶಿ ಕೃಷ್ಣ ಮತ್ತು ಡಾ. ನಾಗಸಂಪಿಗೆ ಕೃಷ್ಣ ಹಾಜರಿದ್ದು, ಸಂವಾದ ಮತ್ತು ಗೋಷ್ಠಿಗಳಿಗೆ ಪ್ರತಿಕ್ರಿಯೆ ನೀಡಲಿದ್ದಾರೆ. ಕಾಳಿದಾಸನ ಕೃತಿಗಳ ಬಗ್ಗೆ ಆಸಕ್ತಿ ಇರುವವರು ಮುಕ್ತವಾಗಿ ಭಾಗವಹಿಸಬಹುದು ಎಂದು ಓಆರ್‌ಐ ನಿರ್ದೇಶಕ ಡಾ. ಡಿ.ಪಿ. ಮಧುಸೂದನಾಚಾರ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post