ಕಲ್ಪ ಮೀಡಿಯಾ ಹೌಸ್ | ಮೈಸೂರು |
ಭಾಗವತ ಶ್ರವಣದಿಂದ ಸಕಲ ಪಾಪಗಳೂ ನಿವೃತ್ತಿಯಾಗಿ ಆತ್ಮೋದ್ಧಾರಕ್ಕೆ ರಹದಾರಿ ದೊರಕುತ್ತದೆ ಎಂದು ಪಂಡಿತ ಬಾದರಾಯಣಾಚಾರ್ಯ ಹೇಳಿದರು.
ಅವರು ಚಾಮರಾಜ ಜೋಡಿ ರಸ್ತೆಯ ವೆಂಕಟಾಚಲಧಾಮ ಆವರಣದ `ಪೂರ್ಣಪ್ರಜ್ಞ’ ದಲ್ಲಿ ಶನಿವಾರ ಭಾಗವತ ಪ್ರವಚನ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಗವಂತನಿಗೆ ಅತ್ಯಂತ ಪ್ರಿಯವಾದ ಗ್ರಂಥ ಭಾಗವತ. ಪದ್ಮಪುರಾಣದಲ್ಲೂ ಇದರ ಮಹತ್ವ ಹೇಳಲಾಗಿದೆ. ಈ ಗ್ರಂಥದ ಪ್ರತಿ ಪದವೂ ಭಗವಂತನ ಸಂಕೀರ್ತನೆಯನ್ನು ಮಾಡಿದೆ ಎಂದು ಅವರು ಹೇಳಿದರು.
ನಾವು ನಿತ್ಯವೂ ನಮ್ಮ ಮನೆಯನ್ನು ಶುದ್ಧಿ ಮಾಡುತ್ತೇವೆ. ಆದರೆ ಅನೇಕ ಬಾರಿ ಮನಶುದ್ಧಿ ಮಾಡಿರುವುದಿಲ್ಲ. ನಿತ್ಯವೂ ಸಲ್ಪ ಭಾಗವಾದರೂ ಭಾಗವತ ಶ್ರವಣ ಮಾಡಿದರೆ ಮನಸ್ಸು ಶುದ್ಧಿಯಾಗಿ ಆತ್ಮಸಾಧನೆಗೆ ಮಹಾಮಾರ್ಗ ದೊರಕುತ್ತದೆ ಎಂದರು.
ಭೂಮಿಯ ಮೇಲೆ ಕೋಟ್ಯಂತರ ಜನರಿದ್ದಾರೆ. ಆದರೆ ಕೆಲವರಿಗೆ ಮಾತ್ರ ಭಾಗವತ ಕೇಳುವ, ಹೇಳುವ ಯೋಗ ದೊರೆತಿರುತ್ತದೆ. ಜನ್ಮಾಂತರಗಳಲ್ಲಿ ಪುಣ್ಯ ಮಾಡಿದ್ದರೆ, ದೇವರ ಕಾರುಣ್ಯ ಇದ್ದರೆ ಮಾತ್ರ ಈ ಭಾಗ್ಯ ದೊರಕಲು ಸಾಧ್ಯ ಎಂದು ಬಾದರಾಯಣಾಚಾರ್ಯ ನುಡಿದರು. ಭಾಗವತದ ಒಂದೊಂದು ಪದವೂ ಸಾಲಿಗ್ರಾಮಕ್ಕಿಂತಾ ಉನ್ನತವಾದದ್ದು. ಅಮೃತಕ್ಕಿಂತಾ ಶ್ರೇಷ್ಠವಾದದ್ದು ಎಂದು ಇಂದ್ರದೇವನೇ ಹೇಳಿದ್ದಾನೆ. ಇದರಲ್ಲಿರುವ 14 ಸಾವಿರ ಶ್ಲೋಕಗಳು ನಮ್ಮ ಆತ್ಮೋದ್ಧಾರಕ್ಕಾಗಿಯೇ ಇವೆ ಎಂದು ವಿವರಿಸಿದರು.
ಕಲಿಗಾಲದಲ್ಲಿ ಭಕ್ತಿ ಇದೆ. ಆದರೆ ಜ್ಞಾನ ಮತ್ತು ವೈರಾಗ್ಯಕ್ಕೆ ಕಡಿಮೆ ಆದ್ಯತೆ. ಭಾಗವತ ಅವಲೋಕನದಿಂದ ಜ್ಞಾನ, ಭಕ್ತಿ ಮತ್ತು ವೈರಾಗ್ಯಗಳನ್ನು ವೃದ್ಧಿಸಿಕೊಳ್ಳಬಹುದು. ಅನೇಕ ಜನ್ಮಗಳಲ್ಲಿ ಮಾಡಿದ ಪಾಪ ಕರ್ಮಗಳಿಂದ ನಮಗೆ ರೋಗಗಳು ಬಾಧಿಸುತ್ತವೆ. ಇವುಗಳಿಂದ ಮುಕ್ತಿ ಪಡೆಯಲು ಭಾಗವತದ ಮೊರೆಹೋಗಬೇಕು ಎಂದವರು ತಿಳಿಸಿದರು.
ಯಾವುದೇ ಧರ್ಮಗ್ರಂಥಗಳನ್ನು ಎಷ್ಟು ಶ್ರವಣ ಮಾಡಿದ್ದೇವೆ ಎಂಬುದಕ್ಕಿಂತಾ ಹೇಗೆ ಶ್ರವಣ ಮಾಡಿದ್ದೇವೆ, ಅದು ಮನನವಾಗಿ ನಮ್ಮ ಅಭ್ಯುದಯಕ್ಕೆ ಹೇಗೆ ಪೂರಕವಾಗಿದೆ ಎಂಬುದು ಬಹಳ ಮುಖ್ಯ. ಒಂದು ಮಹಾನ್ ಕೃತಿಯನ್ನು ಸಂಪೂರ್ಣ ನಮ್ಮದಾಗಿಸಿಕೊಳ್ಳಬೇಕು ಎಂದರೆ ಅದರ ವಿಷಯ, ಪ್ರಯೋಜನ, ಅಧಿಕಾರಿ ಮತ್ತು ಸಂಬಂಧಗಳನ್ನು ಮೊದಲು ಅರಿತುಕೊಳ್ಳಬೇಕು. ಪ್ರಾಚೀನ ಭಾರತೀಯ ಶಾಸ್ತ್ರಗ್ರಂಥಗಳು ದೇವರ ಅನಂತ ರೂಪಗಳ ಚಿಂತನೆಗೆ, ಧ್ಯಾನಕ್ಕೆ ನಮ್ಮನ್ನು ಪ್ರೇರೇಪಿಸಿ ಅಧ್ಯಾತ್ಮಿಕ ಸಾಧನೆಯನ್ನು ಮಾಡಿಸುತ್ತವೆ ಎಂಬುದನ್ನು ಅರ್ಥಮಾಡಿಕೊಂಡರೆ ಮುಂದಿನ ಪೀಳಿಗೆಯೂ ಸಂಸ್ಕಾರವಂತವಾಗುತ್ತದೆ ಎಂದರು.
ಬ್ರಹ್ಮಸೂತ್ರಗಳ ಸರಳ ಅರ್ಥ ಮತ್ತು ಗಾಯತ್ರಿ ಮಂತ್ರದ ಭಾಷ್ಯವಾಗಿರುವ ಭಾಗವತವು ವೇದಕ್ಕೆ ಸಮನಾಗಿದೆ. ಶಾಶ್ವತವಾದ ಫಲಗಳನ್ನು ನೀಡುವುದಾಗಿದೆ ಎಂದವರು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post