ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಿಗದಿತ ಗುರಿ ಮುಟ್ಟಲೇ ಬೇಕು ಎಂದು ಸಾಧನೆ ಮಾಡುವವರು ಮಾತ್ರ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ ಎಂದು ಕ್ಲಿಕ್ ಕ್ಯಾಂಪಸ್ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಟಿ. ಅರಸು ಹೇಳಿದರು.
ಅವರು ಮೈಸೂರು ವಿಶ್ವವಿದ್ಯಾನಿಲಯದ #MysoreUniversity ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ಸಂಯುಕ್ತವಾಗಿ ಕೆ.ಎಸ್. ರಂಗಪ್ಪ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಎರಡನೇ ಹಂತದ ಪರಿಚಯಾತ್ಮಕ ಕಾರ್ಯಕ್ರಮದ ಸಮಾರೋಪದಲ್ಲಿ `ಉನ್ನತ ಕಂಪನಿಗಳಲ್ಲಿ ಉದ್ಯೋಗ ಗಳಿಸುವುದು ಹೇಗೆ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳಲ್ಲಿ ಸಾಧನೆಯ ಶಿಸ್ತು, ಸಹಜ ಬದುಕು ಬಹಳ ಮುಖ್ಯ. ಭರವಸೆಯೇ ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ ಎಂಬ ಸತ್ಯದ ಅರಿವು ಸದಾ ಇರಬೇಕು. ನಾಟಕೀಯತೆ ತೊರೆದು ಜೀವನ ಹೇಗೆ ಬರುವುದೋ ಹಾಗೆ ಅದನ್ನು ಸ್ವೀಕಾರ ಮಾಡುವ ದೊಡ್ಡ ಮನಸ್ಸು ಇರಬೇಕು. ಅಂಥವರು ಮಾತ್ರ ಖ್ಯಾತಿ ಗಳಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಪದವಿ ಹಂತದ ಶಿಕ್ಷಣದಲ್ಲಿ ಪರೀಕ್ಷೆಗಳನ್ನು ಹೆಚ್ಚು ಅಂಕದೊಅದಿಗೆ ಪಾಸ್ ಮಾಡುವುದೇ ಮುಖ್ಯವಲ್ಲ. ಕ್ರಿಯಾಶೀಲತೆಯನ್ನು ರೂಢಿಸಿಕೊಳ್ಳುವುದು ಬಹಳ ಪ್ರಮುಖ. ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಕೌಶಲವನ್ನು ತಮ್ಮದಾಗಿಸಿಕೊಂಡು ಹೊಸತನ್ನು ಸಂಶೋಧಿಸುವತ್ತ ಗಮನ ಹರಿಸಬೇಕು. ಹಾಗಿದ್ದಾಗ ಮಾತ್ರ ಜಾಗತಿಕ ಮಟ್ಟದ ಸಂಸ್ಥೆ, ಕಂಪನಿಗಳು ಕರೆದು ಉದ್ಯೋಗ ಕೊಡುತ್ತವೆ ಎಂದು ಅರಸು ಹೇಳಿದರು.
ಅವರಸರ ಬದುಕಿನಲ್ಲಿ ನಮಗೆ ಯಾರನ್ನು ಜೀವನಾದರ್ಶವಾಗಿ ಇಟ್ಟುಕೊಳ್ಳಬೇಕು ಎಂಬ ಅರಿವು ಇಲ್ಲದಾಗಿದೆ. ಕ್ರೀಡಾ ಮತ್ತು ಸಿನಿಮಾ ರಂಗದ ತಾರೆಯರು ನಮಗೆಂದೂ ಆದರ್ಶ ಅಲ್ಲ. ನಮಗಾಗಿ ಹಗಲು, ರಾತ್ರಿ ಶ್ರಮ ಪಡುತ್ತಿರುವ ಅಪ್ಪ- ಅಮ್ಮನೇ ನಮಗೆ ಹೀರೋಗಳಾಗಬೇಕು. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವ ವಿನೀತ ಭಾವ ನಮ್ಮಲ್ಲಿದ್ದಾಗ ಎತ್ತರದ ಸ್ಥಾನಕ್ಕೆ ಏರಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಹೇಳಿದರು.
ಧ್ಯೇಯೋದ್ಧೇಶ- ಸ್ವಭಾವಗಳಿಗೆ ಸಾಮ್ಯತೆ ಇರಲಿ
ನಮ್ಮ ಧ್ಯೇಯೋದ್ಧೇಶಗಳು ಮತ್ತು ಗುಣಸ್ವಭಾವಗಳಿಗೆ ಸಾಮ್ಯತೆ ಇರಬೇಕು. ಸಮೂಹದಲ್ಲಿ ಹೇಗೆ ಇರುತ್ತೇವೆಯೋ ಹಾಗೆಯೇ ಏಕಾಂಗಿಯಾಗಿದ್ದಾಗಲೂ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಬಹುತೇಕ ದೌರ್ಬಲ್ಯಗಳು ಏಕಾಂಗಿಯಾಗಿದ್ದಾಗ ಪ್ರಕಟಗೊಳ್ಳುತ್ತವೆ. ಅವುಗಳ ಮೇಲೆ ನಿಯಂತ್ರಣ ಇಟ್ಟುಕೊಂಡವ ಮಾತ್ರ ಸಾಧನೆ ಮಾಡುತ್ತಾನೆ. ಅವಮಾನ ಆದಾಗ ಬದುಕು ದೊಡ್ಡ ಪಾಠ ಕಲಿಸುತ್ತದೆ. ಭರವಸೆಯೇ ಬದುಕಿಗೆ ದಾರಿದೀಪವಾದಾಗ ಸಂಕಲ್ಪಿತ ಧ್ಯೇಯೋದ್ಧೇಶ ಈಡೇರಿಸಿಕೊಂಡು ಜೀವನವನ್ನು ಸುಖಮಯ ಮಾಡಿಕೊಳ್ಳಬಹುದು ಎಂದು ಅರಸು ವಿವರಿಸಿದರು.
ತಾಂತ್ರಿಕ ಶಾಲೆ ನಿರ್ದೇಶಕ ಪ್ರೊ. ಟಿ. ಅನಂತ ಪದ್ಮನಾಭ ಸಮಾರೋಪ ಭಾಷಣ ಮಾಡಿ, ವಿದ್ಯಾರ್ಥಿಗಳಿಗೆ ಶ್ರೇಷ್ಠ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಪ್ಲೇಸ್ಮೆಂಟ್ ಬಗ್ಗೆಯೂ ಸಾಕಷ್ಟು ಶ್ರಮ ವಹಿಸಲಾಗುತ್ತಿದೆ. ತಾಂತ್ರಿಕ ಶಾಲೆಯಲ್ಲಿ ವಿದ್ಯಾರ್ಥಿಪರ ಚಿಂತನೆ ಮತ್ತು ಘನ ಧ್ಯೇಯೋದ್ಧೇಶಗಳಿವೆ. ಇದನ್ನು ಅರ್ಥ ಮಾಡಿಕೊಂಡು ಜ್ಞಾನಾರ್ಜನೆ ಮಾಡಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭ ವಿವಿಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿವಿಧ ವಿಭಾಗ ಮುಖಸ್ಥರಾದ ಸಂತೋಷ್, ಸಚಿನ್, ನಿತಿನ್, ರಾಕೇಶ್ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post