ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮಂತ್ರಾಲಯ #Mantralayam ಪ್ರಭು, ಕಲಿಯುಗದ ಕಾಮಧೇನು ಎಂದೇ ಖ್ಯಾತರಾದ ಶ್ರೀ ರಾಘವೇಂದ್ರ ಸ್ವಾಮಿಗಳ #RaghavendraSwamy ಆರಾಧನೆ ಉತ್ಸವದ ಅಂಗವಾಗಿ ಪೂರ್ವಾರಾಧನೆ ನಗರದ ವಿವಿಧ ರಾಯರ ಕ್ಷೇತ್ರಗಳಲ್ಲಿ ಭಕ್ತಿ, ಭಾವದಿಂದ ನೆರವೇರಿತು.
ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿರುವ ಶ್ರೀ ಉಡುಪಿ ಭಂಡಾರಕೇರಿ ಮಠದಲ್ಲಿ #BhandarakeriMatha ಮಂಗಳವಾರ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 353ನೇ ಪೂರ್ವಾರಾಧನೆ ಮಹೋತ್ಸವ ವೈಭವದಿಂದ ನೆರವೇರಿತು.
ಶ್ರೀನಿವಾಸ ದೇವರು ಮತ್ತು ರಾಯರ ಮೃತ್ತಿಕಾ ವೃಂದಾವನ ಸನ್ನಿಧಿಗೆ ಮಂಗಳವಾರ ಬೆಳಗ್ಗೆ 7ಕ್ಕೆ ಅಷ್ಟೋತ್ತರ ಪಾರಾಯಣ, ಫಲ ಪಂಚಾಮೃತ ಅಭಿಷೇಕ, ಪೂಜಾದಿಗಳು ಪ್ರಧಾನ ಅರ್ಚಕ ರಾಘವೇಂದ್ರ ಆಚಾರ್ಯರ ನೇತೃತ್ವದಲ್ಲಿ ಸಂಪನ್ನಗೊಂಡಿತು.
ವೃಂದಾವನ ವಿಶೇಷ ಹೂವುಗಳ ಅಲಂಕಾರದಿಂದ ಕಂಗೊಳಿಸಿತು. ನೂರಾರು ಭಕ್ತರ ಸಮ್ಮುಖ ನೆರವೇರಿದ ರಾಯರ ಮತ್ತು ಪ್ರಹ್ಲಾದ ರಾಜರ ರಥೋತ್ಸವ ಕಳೆಗಟ್ಟಿತ್ತು. ಶ್ರೀ ಸತ್ಯಧ್ಯಾನ ಭಜನಾ ಮಂಡಳಿಯ 30ಕ್ಕೂ ಹೆಚ್ಚು ಮಾತೆಯರು ದೇವರ ನಾಮಗಳನ್ನು ಹಾಡಿದರು. ನಂತರ ನೂರಾರು ಜನರಿಗೆ ಪ್ರಸಾದ, ಅನ್ನದಾನ ಮಾಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ: ರಾಯರ ಸನ್ನಿಧಿಯಲ್ಲಿ ಮಂಗಳವಾರ ಸಂಜೆ ಕೌಸಲ್ಯಾ ಮತ್ತು ಸಂಗಡಿಗರಿಂದ ದಾಸರ ಪದಗಳ ಗಾಯನ ಸೇವೆ ಗಮನ ಸೆಳೆಯಿತು. ಮೃದಂಗ ಪಕ್ಕವಾದ್ಯದಲ್ಲಿ ಯುವ ಕಲಾವಿದರಾದ ಪ್ರಮಥ್ ರವಿಶಂಕರ್, ಪಿಟೀಲಿನಲ್ಲಿ ಶ್ರೀಲಲಿತಾ ರಾಮಕೃಷ್ಣ ಸಹಕಾರ ನೀಡಿದ್ದು ವಿಶೇಷವಾಗಿತ್ತು. ನಂತರ ಪ್ರಾಕಾರ ಉತ್ಸವ, ಅಷ್ಟಾವಧಾನ ಸೇವೆ ಮತ್ತು ರಂಗಪೂಜೆ ಮಹಾಮಂಗಳಾರತಿ ಸಂಪನ್ನಗೊಂಡಿತು. ಕ್ಷೇತ್ರದಲ್ಲಿ ಬುಧವಾರ ರಾಯರ ಮಧ್ಯಾರಾಧನೆ ನೆರವೇರಲಿದೆ.
ಸುಬ್ಬರಾಯನಕೆರೆ ಮಠದಲ್ಲಿ
ನಗರದ ಹೃದಯಭಾಗದಲ್ಲಿರುವ ನಾರಾಯಣಶಾಸ್ತ್ರಿ ರಸ್ತೆಯ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ರಾಯರ ಆರಾಧನೆ ಭಕ್ತಿ ಭಾವದಿಂದ ನೆರವೇರಿತು.
ಬೆಳಗ್ಗೆ 7ಕ್ಕೆ ರಾಯರ ಪಾದುಕೆಗಳ ಪಾದಪೂಜೆ, ವೃಂದಾವನಕ್ಕೆ ವಿಶೇಷ ಅಲಂಕಾರ, ಪಂಚಾಮೃತ ಅಭಿಷೇಕ ಮಾಡಲಾಯಿತು. ಪಂಡಿತರಿಂದ ಉಪನ್ಯಾಸ, ಪ್ರಾಕಾರ ಉತ್ಸವ, ನಂತರ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಿಮಿತ್ತ ಗಾಯನ, ನರ್ತನ ಸೇವೆ ಭಕ್ತಗಣ ರಂಜಿಸಿತು. ವ್ಯವಸ್ಥಾಪಕ ರಾಘವೇಂದ್ರ ಕುಲಕರ್ಣಿ ನೇತೃತ್ವದಲ್ಲಿ ಧಾರ್ಮಿಕ ವಿಧಿ, ವಿಧಾನಗಳು ನೆರವೇರಿದವು.
ನಗರದ ನಗರದ ಜಯಲಕ್ಷ್ಮೀಪುರಂ, ಕುವೆಂಪುನಗರದ ನವಿಲುರಸ್ತೆ ರಾಯರ ಮಠ, ಟಿಕೆ ಬಡಾವಣೆ, ಅಗ್ರಹಾರದ ದೇವೇಂದ್ರತೀರ್ಥರ ರಾಯರ ಮಠದಲ್ಲೂ ಉತ್ತರ ಆರಾಧನೆ ವೈಭವದ ನಿಮಿತ್ತ ಪೂಜೆ, ಅಲಂಕಾರ ಸೇವೆ, ಅನ್ನದಾನ ನೆರವೇರಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post