ಕಲ್ಪ ಮೀಡಿಯಾ ಹೌಸ್ | ಮೈಸೂರು |
ಸನಾತನ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕೃತ ಭಾಷೆಯ ರಕ್ಷಣೆ ಎಲ್ಲರ ಹೊಣೆಯಾಗಬೇಕು ಎಂದು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಸೋಸಲೆ ಶ್ರೀ ವ್ಯಾಸರಾಜರ ಮಠದ ಪೀಠಾಧೀಶ ಡಾ. ಶ್ರೀ ವಿದ್ಯಾಶ್ರೀಶತೀರ್ಥ ಸ್ವಾಮೀಜಿ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಶ್ರೀ ವ್ಯಾಸತೀರ್ಥ ಸಂಶೋಧನಾ ಪ್ರತಿಷ್ಠಾನ ಸಂಯುಕ್ತವಾಗಿ ನಗರದ ವಿಜ್ಞಾನ ಭವನದಲ್ಲಿ ಹಮ್ಮಿಕೊಂಡಿದ್ದ `ಕಾಳಿದಾಸ ಕೃತಿ ಸಮೀಕ್ಷಾ’ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣಕ್ಕೆ ಮಂಗಳವಾರ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಸರ್ಕಾರ ಮತ್ತು ಜಾಗತಿಕ ಮಟ್ಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಇಂದು ಅತಿ ಹೆಚ್ಚಿನ ಪ್ರೋತ್ಸಾಹ, ಅನುದಾನ ಮತ್ತು ಮಾನ್ಯತೆ ದೊರಕುತ್ತಿದೆ. ಇದು ಶ್ಲಾಘನೀಯವೇ. ಆದರೆ ಇದರೊಂದಿಗೆ ನಮ್ಮ ನೆಲದ ಮಹತ್ವಕ್ಕೆ ವಿಶ್ವಮಟ್ಟದಲ್ಲಿ ಮನ್ನಣೆ ತಂದುಕೊಡಲು ಕಾರಣವಾದ ಸಂಸ್ಕೃತ ಸಾಹಿತ್ಯದ ರಕ್ಷಣೆಗೂ ಆದ್ಯತೆ ಲಭ್ಯವಾಗಬೇಕು. ಒಂದು ಅಣು ಅಂಶದಷ್ಟು ಅನುದಾನಗಳನ್ನು ನೀಡುವ ನಿಟ್ಟಿನಲ್ಲಿ ಸರ್ಕಾರ ಮತ್ತು ವಿವಿಗಳು ಮುಂದಾಗಬೇಕು ಎಂದು ಅವರು ಆಶಿಸಿದರು.
ಪ್ರಾಚೀನ ವಿದ್ಯೆಗಳ ರಕ್ಷಣೆ, ತಾಳೆಗರಿ ಗ್ರಂಥಗಳ ಸಂರಕ್ಷಣೆಗಾಗಿ 123ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದ ಸೇವೆಯನ್ನು ಶ್ಲಾಘಿಸಿದ ಸ್ವಾಮೀಜಿ, ಪ್ರಸ್ತುತ ಭಾರತೀಯ ಮಹಾಕಾವ್ಯಗಳ ಓದುವಿಕೆ ಮತ್ತು ರಸಾಸ್ವಾದನೆ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ನೀಡಿದ ಕೊಡುಗೆಗಳನ್ನು ಸ್ವೀಕರಿಸಲೇಬೇಕು. ಅದರೊಂದಿಗೆ ಪ್ರಾಚೀನ ಜ್ಞಾನ ಸಂಪತ್ತುಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವುದು ನಮ್ಮ ಗುರುತರ ಜವಾಬ್ದಾರಿಯಾಗಬೇಕು ಎಂದರು.
ಗೋಷ್ಠಿಗಳನ್ನು ಆಯೋಜಿಸಿ
ಕಾಳಿದಾಸ ವಿಶ್ವಮಾನ್ಯ ಕವಿ. ಆತನಿಗೆ ಸರಿಸಾಟಿ ಯಾರೂ ಇಲ್ಲ. ಜಡವನ್ನು ಚೇತನ ಮಾಡುವ, ಚೇತನವನ್ನು ಮಹಾ ಚೈತನ್ಯಗೊಳಿಸುವ ಕಾವ್ಯಶಕ್ತಿ ಆತನಿಗೆ ಇದೆ. ಕಾಳಿದಾಸನ ಕಾವ್ಯಗಳ ಬಗ್ಗೆ ಆಧುನಿಕ ದೃಷ್ಟಿಕೋನದಿಂದಲೂ ನೋಡುವ, ಹೊಸ ಹೊಸ ಅಂಶಗಳತ್ತ ಬೆಳಕುಚೆಲ್ಲುವ ಕೆಲಸ ಯುವ ವಿದ್ವಾಂಸರಿಂದ ಆಗಬೇಕು. ಕಾವ್ಯರಸ ಆಸ್ವಾದಿಸುವವರ ಸಂಖ್ಯೆ ಹೆಚ್ಚಾಗಬೇಕು. ನಮ್ಮ ಪರಂಪರೆಗೆ ಮೈಸೂರಿನ ಕೊಡುಗೆ ಅನನ್ಯವಾಗಿದೆ. ಇಂತಹಾ ಸಾಂಸ್ಕೃತಿಕ ರಾಜಧಾನಿಯಲ್ಲಿ ಕಾವ್ಯಾಸಕ್ತರು ಕೇವಲ ವಿಚಾರಸಂಕಿರಣಗಳಿಗಾಗಿ ನಿರೀಕ್ಷೆ ಮಾಡದೇ ಪ್ರತಿ ತಿಂಗಳೂ ಒಂದೆಡೆ ಸೇರಿ ಒಂದು ಆಪ್ತ ಸಂವಾದ, ಗೋಷ್ಠಿಗಳನ್ನು ಆಯೋಜನೆ ಮಾಡಬೇಕು. ಇದಕ್ಕೆ ಬೇಕಾದ ಕನಿಷ್ಠ ಆರ್ಥಿಕ ಸಂಪನ್ಮೂಲವನ್ನು ಶ್ರೀವ್ಯಾಸತೀರ್ಥ ವಿದ್ಯಾಪೀಠ ನೀಡಲಿದೆ ಎಂದವರು ಭರವಸೆ ನೀಡಿದರು.
ಗಟ್ಟಿತನದ ಕಾವ್ಯ ಬರುತ್ತಿಲ್ಲ
ಮಹಾಕವಿ ಕಾಳಿದಾಸನ ಶಾಕುಂತಲ, ರಘುವಂಶ ಮೊದಲಾದ ಕಾವ್ಯಗಳನ್ನು ಉಲ್ಲೇಖಿಸಿದ ಸ್ವಾಮೀಜಿ, ನಮ್ಮ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳೇ ಕಾವ್ಯಸೃಷ್ಟಿಗೆ ಆಧಾರವಾಗಿತ್ತು. ಪಂಡಿತರು, ಜ್ಞಾನಿಗಳು, ರಸಿಕರು ಇದರಿಂದ ಉತ್ತೇಜನಗೊಂಡು ಮತ್ತಷ್ಟು ಕಾವ್ಯರಚನೆಗೆ ಮುಂದಾಗುತ್ತಿದ್ದರು. ಪಂಪ, ರನ್ನ, ಕುಮಾರವ್ಯಾಸರು ಈ ನಿಟ್ಟಿನಲ್ಲಿ ಅಗ್ರಪಂಕ್ತಿಗೆ ಸೇರಿದವರಾಗುತ್ತಾರೆ. ಆದರೆ ಇಂದು ಈ ಸಂಸ್ಕೃತಿಯೇ ಮಾಯವಾಗುತ್ತಿದೆ. ಬಹುಕಾಲ ಉಳಿಯುವ ಕಾವ್ಯರಚನೆಯೇ ನಿಂತುಹೋಗಿದೆ ಎಂದು ಶ್ರೀ ವಿದ್ಯಾಶ್ರೀಶತೀರ್ಥ ಸ್ವಾಮೀಜಿ ಖೇದ ವ್ಯಕ್ತಪಡಿಸಿದರು.
ಜಾಗತೀಕರಣದ ಭರಾಟೆಯಲ್ಲಿ ಭಾರತೀಯರು ಬರುಬರುತ್ತಾ ವಿಚಿತ್ರ ಮನೋಸ್ಥಿತಿಗೆ ತಲುಪುತ್ತಿದ್ದಾರೆ. ನಮ್ಮ ಸಂಸ್ಕೃತಿಯಿAದ ವಿಮುಖರಾಗುವ ಕಾಲಘಟ್ಟ ಬರುತ್ತಿದೆ. ನಾವು ಈಗಲಾದರೂ ಜಾಗೃತರಾಗಿ ನಮ್ಮತನ ಉಳಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ವಿದ್ವಾನ್ ಡಾ. ಟಿ.ವಿ. ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ವ್ಯಾಸತೀರ್ಥ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಸಿ.ಎಚ್. ಶ್ರೀನಿವಾಸಮೂರ್ತಿ, ಓಆರ್‌ಐ ನಿರ್ದೇಶಕ ಡಾ. ಡಿ.ಪಿ. ಮಧುಸೂದನಾಚಾರ್ಯ ಹಾಜರಿದ್ದರು. ಇದೇ ಸಂದರ್ಭ ಪದ್ಮಶ್ರೀ ಪುರಸ್ಕೃತ ಹಿರಿಯ ಸಂಶೋಧಕ ಎಸ್. ಸುಬ್ಬರಾಮನ್ ಅವರಿಗೆ ಎರಡೂ ಸಂಸ್ಥೆಗಳ ಪರವಾಗಿ ಗೌರವ ಸನ್ಮಾನಿಸಲಾಯಿತು.
ನಂತರ ವಿಚಾರಸಂಕಿರಣದಲ್ಲಿ ನಾಡಿನ ಹಿರಿಯ ಸಂಸ್ಕೃತ ಮತ್ತು ವೇದಾಂತ ವಿದ್ವಾಂಸರುಗಳಾದ ಡಾ. ಜಿ. ಕೃಷ್ಣಪ್ರಸಾದ್, ಡಾ. ಶರತ್‌ಚಂದ್ರ ಸ್ವಾಮಿ, ಡಾ. ಟಿ.ವಿ. ಸತ್ಯನಾರಾಯಣ, ಪ್ರೊ. ತಿರುಮಲಾಚಾರ್ಯ ಕುಲಕರ್ಣಿ, ಡಾ. ಉಮಾಕಾಂತ ಭಟ್, ಡಾ. ಎಚ್.ವಿ. ನಾಗರಾಜರಾವ್ ಪ್ರೌಢ ಉಪನ್ಯಾಸ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















