ಕಲ್ಪ ಮೀಡಿಯಾ ಹೌಸ್ | ಮೈಸೂರು |
ಉಡುಪಿ ಪೇಜಾವರ ಮಠ #PejawaraMutt ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರ #PejawaraSeer ಆದರ್ಶದಂತೆಯೇ ಸಾಗುತ್ತಿರುವ ಈಗಿನ ಗುರುಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು #VishwaprasannaThirthaSwamiji ಇಂದು ಇಲ್ಲಿನ ದಲಿತರ ಮನೆಗಳಿಗೆ ಭೇಟಿ ನೀಡಿದರು.
ತಮ್ಮ 36ನೆಯ ಚಾತುರ್ಮಾಸ್ಯದ #Chaturmasya ಅಂಗವಾಗಿ ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮ ನಡೆಸುತ್ತಿರುವ ಶ್ರೀಗಳು ಹಿರಿಯ ಗುರುಗಳಂತೆಯೇ ಈ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದ್ದಾರೆ.
ಹಿಂದೂ ಸಮಾಜದಲ್ಲಿ ಆಂತರಿಕವಾಗಿ ಬಾಂಧವ್ಯ ಮತ್ತು ಸಾಮರಸ್ಯವನ್ನು ಸುದೃಡಗೊಳಿಸುವ ಧರ್ಮ ಜಾಗೃತಿಯನ್ನು ಮೂಡಿಸುವ ಸಲುವಾಗಿ ತಮ್ಮ 36 ನೆಯ ಚಾತುರ್ಮಾಸ್ಯದ ಸಂದರ್ಭದಲ್ಲಿ ಹಮ್ಮಿಕೊಂಡ ಹತ್ತಾರು ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯಲ್ಲಿ ದಲಿತರು #Dalit ಮತ್ತು ಹಿಂದುಳಿದ ವರ್ಗಗಳ ಬಡಾವಣೆಗಳಿಗೆ ಸಾಮರಸ್ಯದ ನಡಿಗೆಯನ್ನು ಆದ್ಯತೆಯಲ್ಲಿ ಹಮ್ಮಿಕೊಳ್ಳುವಂತೆ ಚಾತುರ್ಮಾಸ್ಯ ಸಮಿತಿಗೆ ಶ್ರೀಗಳು ಸೂಚಿಸಿದ್ದರು.
ಗುರುಗಳ ಸೂಚನೆಯಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ #RSS ಧರ್ಮ ಜಾಗರಣ ವಿಭಾಗ ಮತ್ತು ಸಾಮರಸ್ಯ ವೇದಿಕೆಗಳ ಜಂಟಿ ಸಂಯೋಜನೆಯಲ್ಲಿ ಈ ಭೇಟಿಯನ್ನು ಆಯೋಜಿಸಲಾಗಿತ್ತು. ಸುಮಾರು ಇನ್ನೂರಕ್ಕೂ ಅಧಿಕ ಮನೆಗಳನ್ನು ಹೊಂದಿರುವ ಬಡಾವಣೆಗೆ ಭೇಟಿ ನೀಡಿದರು.
ಶ್ರೀಗಳ ಭೇಟಿಯ ಹಿನ್ನೆಲೆಯಲ್ಲಿ ಮನೆ ರಸ್ತೆಗಳುದ್ದಕ್ಕೂ ಸಾಲು ಸಾಲು ರಂಗೋಲಿ, ಕೇಸರಿ ಪತಾಕೆ, ತಳಿರು ತೋರಣ ಹೂವಿನ ಮಾಲೆಗಳ ಮೂಲಕ ಇಡಿಯ ಬಡಾವಣೆಯನ್ನು ಅಲಂಕರಿಸಲಾಗಿತ್ತು.
ಇಲ್ಲಿಗೆ ಶ್ರೀಗಳು ಆಗಮಿಸುತ್ತಿದ್ದಂತೆ ಸಂಭ್ರಮ ಮುಗಿಲು ಮುಟ್ಟಿತು. ಆರಂಭದಲ್ಲಿ ಐದು ಮನೆಗಳಿಗೆ ತೆರಳಿ ಮಠದಿಂದ ವಿತರಿಸಿದ್ದ ಹಿತ್ತಾಳೆಯ ಶ್ರೀರಾಮ ದೀಪಗಳನ್ನು ಪ್ರಜ್ವಲಿಸಿ ಮನೆಯ ದೇವರ ಭಾವಚಿತ್ರಗಳಿಗೆ ಹೂವನ್ನು ಏರಿಸಿ ಮಂಗಳಾರತಿ ಬೆಳಗಿದರು.
ಮನೆ ಮಂದಿ ಶ್ರೀಗಳ ಪಾದ ತೊಳೆದು, ಅರಶಿನ ಕುಂಕುಮ, ಓಕುಳಿಯ ಆರತಿಗಳನ್ನು ಮಾಡಿ ಭಕ್ತಿಯಿಂದ ಬರಮಾಡಿಕೊಂಡರು. ಮನೆಗೆ ಬಂದ ಗುರುಗಳಿಗೆ ಫಲವಸ್ತುಗಳನ್ನು ಅರ್ಪಿಸಿದರು.
ವಿಶೇಷವಾಗಿ ತಾವು ತೆರಳಿದ ಪ್ರತೀ ಮನೆಗಳ ಸದಸ್ಯರನ್ನು ಆತ್ಮೀಯವಾಗಿ ಶ್ರೀಗಳು ಪರಿಚಯ ಮಾಡಿಕೊಂಡು ಯೋಗಕ್ಷೇಮ ವಿಚಾರಿಸಿದರು. ಎಲ್ಲ ಮನೆಗಳಿಗೂ ಶ್ರೀ ಕೃಷ್ಣನ ಸಿಹಿತಿಂಡಿ ಪ್ರಸಾದಗಳನ್ನು ವಿತರಿಸಿದರು.


















