ಕಲ್ಪ ಮೀಡಿಯಾ ಹೌಸ್ | ಮೈಸೂರು |
ಭಾರತೀಯ ಸನಾತನ ಧರ್ಮ, ಸಂಸ್ಕೃತಿ ಮತ್ತು ಯತಿ ಪರಂಪರೆಗೆ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮೀಜಿಯವರ ಕೊಡುಗೆ ಅನನ್ಯ ಎಂದು ಎಂದು ಶೃಂಗೇರಿಯ ಪರಮಪೂಜ್ಯ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ #VidhushekharaBharatiSwamiji ಹೇಳಿದರು.
ಶತಮಾನೋತ್ಸವದ ಸವಿ ನೆನಪಿಗಾಗಿ ನೂತನವಾಗಿ ನಿರ್ಮಿಸಿರುವ ‘ಶ್ರೀ ಸಚ್ಚಿದಾನಂದ ವಿಲಾಸ’ ಗುರುಭವನದಲ್ಲಿ ಪಾದಪೂಜೆ, ಭಿಕ್ಷಾ ವಂದನೆ ಸ್ವೀಕರಿಸಿ ಅವರು ಅನುಗ್ರಹ ಸಂದೇಶ ನೀಡಿದರು.
ನಮ್ಮ ಶಾರದಾ ಪೀಠದ 33ನೇ ಯತಿಗಳಾಗಿದ್ದ ನೃಸಿಂಹ ಭಾರತೀ ಸ್ವಾಮೀಜಿಯವರು ಮಹಾ ತಪಸ್ವಿಗಳು. ಅಖಂಡ ಭಾರತವನ್ನು ಸಂಚರಿಸಿದ ಅವರು, ವಿಸ್ತಾರವಾಗಿ ಧರ್ಮ ಪ್ರಚಾರ ಮಾಡಿದರು. ಸನಾತನ ಧರ್ಮದ ಉಳಿವಿಗೆ ಅವಿರತವಾಗಿ ಶ್ರಮಿಸಿದರು. ಅವರಿಗೆ ಇದ್ದ ವಿಶಾಲ ದೃಷ್ಟಿಯಿಂದಲೇ ದೇಶದ ಅನೇಕ ಕಡೆ ಸಂಸ್ಕೃತ, ವೈದಿಕ ವಿದ್ಯಾಶಾಲೆಗಳು ಆರಂಭಗೊಂಡವು. ಅಂಥವರ ಸ್ಮರಣೆಯಿಂದಲೇ ನಮ್ಮೆಲ್ಲರ ಬದುಕು ಪಾವನವಾಗುತ್ತದೆ ಎಂದರು.
ನಿರಂತರ ಚಟುವಟಿಕೆ
ಶತಮಾನೋತ್ಸವ ಅಂಗವಾಗಿ ನಿರ್ಮಿಸಿರುವ ‘ಶ್ರೀ ಸಚ್ಚಿದಾನಂದ ವಿಲಾಸ’ ಗುರುಭವನದಲ್ಲಿ ಇನ್ನು ಮುಂದೆಯೂ ನಿರಂತರವಾಗಿ ವಿದ್ವಾಂಸರ ವಿಚಾರಧಾರೆ ಪ್ರಸಾರವಾಗಲಿದೆ. ವೇದ ಸತ್ರ, ಜ್ಞಾನ ಸತ್ರ, ಗೋಷ್ಠಿ ಮತ್ತು ಸಮ್ಮೇಳನಗಳು, ಗುರುಗಳ ಜಯಂತ್ಯುತ್ಸವಗಳು ನಡೆಯಲಿವೆ. ಅದಕ್ಕೆ ಬೇಕಾದ ಸಕಲ ಸೌಲಭ್ಯವನ್ನೂ ಮಠ ಕಲ್ಪಿಸಲಿದೆ ಎಂದು ಜಗದ್ಗುರುಗಳು ಭರವಸೆ ಇತ್ತರು.
ಮಠದ ಪರಂಪರಾಗತ ಶಿಷ್ಯರು ಸಂಭ್ರಮದಿಂದ ಶತಮಾನ ಉತ್ಸವ ಆಚರಣೆಯಲ್ಲಿ ಭಾಗವಹಿಸಿದ್ದಾರೆ. ಸದ್ಯ ಪೀಠದಲ್ಲಿ ವಿರಾಜಮಾನರಾಗಿರುವ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ #BharatiThirthaSwamiji ಅವರು ಸನ್ಯಾಸ ಸ್ವೀಕಾರ ಮಾಡಿದ 50ನೇ ವರ್ಷಾಚರಣೆ ನಡೆಯುತ್ತಿದೆ. ಎಲ್ಲ ಯೋಗಾಯೋಗಗಳೂ ನಮಗೆ ಒಟ್ಟಿಗೆ ಪ್ರಾಪ್ತಿಯಾಗಿರುವುದು ದೊಡ್ಡ ಪುಣ್ಯ. ಗುರು ಸ್ಮರಣೆಯಿಂದಲೇ ಜೀವನ ಪಾವನವಾಗಲಿ. ಎಲ್ಲರಿಗೂ ಶ್ರೀಶಾರದಾ, ಚಂದ್ರಮೌಳೇಶ್ವರರ, ಗುರುಗಳ ಅನುಗ್ರಹ ಸದಾ ಇರಲಿ ಎಂದು ಶ್ರೀಗಳು ಹೇಳಿದರು. ನೂರಾರು ಭಕ್ತರು ಉಪಸ್ಥಿತರಿದ್ದರು.
ನವಗ್ರಹ ಪ್ರತಿಷ್ಠಾಂಗ ಹೋಮ
ಶೃಂಗೇರಿಯ #Sringeri ವಿದ್ವಾನ್ ನರಹರಿ ಭಟ್ ನೇತೃತ್ವದಲ್ಲಿ ಶತ ಚಂಡಿ ಪಾರಾಯಣ, ನವಗ್ರಹ ಪ್ರತಿಷ್ಠಾಂಗ ಹೋಮ 3 ತಾಸುಗಳ ಕಾಲ ನೆರವೇರಿತು.
ನೂರಾರು ಋತ್ವಿಜರು, ಪಂಡಿತರು, ಅದ್ವೈತ ವಿದ್ವಾಂಸರು, ಸುಮಂಗಲಿಯರ ಸಮ್ಮುಖ ಪೂರ್ಣಾಹುತಿ ಸಮರ್ಪಣೆ ನೆರವೇರಿತು. ಸಂಜೆ ನಗರದ ವಿವಿಧ ದೇವಾಲಯಗಳಿಗೆ ಜಗದ್ಗುರುಗಳು ಭೇಟಿ ನೀಡಿದರು. ರಾತ್ರಿ 8. 30ಕ್ಕೆ ಶ್ರೀ ಮಠದಲ್ಲಿ ಚಂದ್ರಮೌಳೇಶ್ವರ ಪೂಜೆ ನೆರವೇರಿಸಿದರು. ಸಂಜೆ 7ಕ್ಕೆ ಮಠದ ಆವರಣದಲ್ಲಿ ವಿದ್ವಾನ್ ಕೃಷ್ಣಮೂರ್ತಿ ತಂಡದವರು ನಾಗಸ್ವರ ಕಛೇರಿ ನೀಡಿ ರಂಜಿಸಿತು.
ಬಂಗಾರ ಲೇಪಿತ ಕಂಚಿನ ಕಳಸ ಸಿದ್ಧ
ಏ.5ರ ಬೆಳಗ್ಗೆ 8ಕ್ಕೆ ಶ್ರೀ ಶಾರದಾಂಬಾ ಹಾಗೂ ಶ್ರೀ ನೃಸಿಂಹ ಭಾರತೀ ಶ್ರೀಗಳ ಸನ್ನಿಧಿಗೆ ಶಿಖರ ಕುಂಭಾಭಿಷೇಕ ಆಯೋಜನೆ ಗೊಂಡಿದೆ. ಇದೇ ಸಂದರ್ಭ ದೇಗುಲಕ್ಕೆ ನೂತನ ಕಳಸ ಪ್ರತಿಷ್ಠಾಪನೆ ನೆರವೇರಲಿದೆ. ಅದಕ್ಕಾಗಿ 7 ಅಡಿ ಎತ್ತರದ ಬಂಗಾರ ಲೇಪಿತ ಕಂಚಿನ ಕಳಸ ಈಗಾಗಲೇ ಸಿದ್ಧಗೊಂಡಿದೆ.
ವಿಶ್ವೇಶ್ವರ ದೇವಸ್ಥಾನದಲ್ಲಿ ಕುಂಭಾಭಿಷೇಕ ಇಂದು
ಏ. 3ರ ಬೆಳಗ್ಗೆ 9ಕ್ಕೆ ನಗರದ ಗೀತಾ ರಸ್ತೆಯ ಶ್ರೀ ಪ್ರಸನ್ನ ವಿಶ್ವೇಶ್ವರ ದೇವಸ್ಥಾನದಲ್ಲಿ ಆಯೋಜನೆ ಗೊಂಡಿರುವ ಕುಂಭಾಭಿಷೇಕದ ಸಾನ್ನಿಧ್ಯವನ್ನು ಶ್ರೀ ಜಗದ್ಗುರುಗಳು ವಹಿಸಲಿದ್ದಾರೆ. ಪಾದಪೂಜೆ ಮತ್ತು ಭಿಕ್ಷಾವಂದನೆಯನ್ನು ಜಗದ್ಗುರುಗಳು ಸ್ವೀಕರಿಸಲಿರುವುದು ವಿಶೇಷ. ಸಂಜೆ 4.30 ರಿಂದ 7 ರವರೆಗೆ ನಗರದ ವಿವಿಧ ದೇವಾಲಯ ಹಾಗೂ ಸಂಘ-ಸಂಸ್ಥೆಗಳಿಗೆ ಪೂಜ್ಯರು ಭೇಟಿ ನೀಡಿ ಭಕ್ತರನ್ನು ಅನುಗ್ರಹಿಸಲಿದ್ದಾರೆ.
ದ್ವಂದ್ವ ಗಾಯನ
ಏ. 3 ರಂದು ಸಂಜೆ 7ಕ್ಕೆ ಮಠದ ಆವರಣದಲ್ಲಿ ವಿದ್ವಾನ್ ಶ್ರೀನಾಥ ಮತ್ತು ಅಮೋಘ ಅವರ ದ್ವಂದ್ವ ಶಾಸ್ತ್ರೀಯ ಗಾಯನವಿದೆ. ವಿದ್ವಾನ್ ಶ್ರೀಧರ (ಮೃದಂಗ) ಮತ್ತು ರಮೇಶ್ (ಘಟ) ಪಕ್ಕವಾದ್ಯ ಸಹಕಾರ ವಿಜೃಂಭಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post