ಕಲ್ಪ ಮೀಡಿಯಾ ಹೌಸ್ | ಮೈಸೂರು |
ಸಕಲ ಕಾರ್ಯಕ್ಕೂ ಶ್ರೀಕೃಷ್ಣನೇ #SriKrishna ಪ್ರೇರಕ ಶಕ್ತಿಯಾಗಿದ್ದಾನೆ ಎಂದು ಸೋಸಲೆ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಹೇಳಿದರು.
ಸೋಸಲೆ ಗ್ರಾಮದಲ್ಲಿ 8ನೇ ಚಾತುರ್ಮಾಸ್ಯ ವ್ರತದಲ್ಲಿರುವ ಅವರು ಜನ್ಮಾಷ್ಟಮಿ #KrishnaJanmashtami ಸಂದರ್ಭದಲ್ಲಿ ಸೋಮವಾರ ವಿಶೇಷ ಅನುಗ್ರಹ ಸಂದೇಶ ನೀಡಿದರು.
ಸಕಲ ಕಾರ್ಯಕ್ಕೆ ಪ್ರೇರಕ ಅವನೇ ಆಗಿದ್ದಾನೆ. ಇಡೀ ಲೋಕವೇ ಅವನ ಅಧೀನವಾಗಿದೆ. ಹಾಗಾಗಿ ಸಕಲ ವೇದ, ಉಪನಿಷತ್ತುಗಳು, ಭಾಗವತಾದಿ ಪುರಾಣಗಳು ಅವನನ್ನು ಅನಂತಕೋಟಿ ಬ್ರಹ್ಮಾಂಡ ನಾಯಕ ಎಂದು ವರ್ಣಿಸಿವೆ ಎಂದರು.
ದೇವರ ಅಸಾದೃಶ ಅವತಾರವಾದ ಶ್ರೀಕೃಷ್ಣ ನಿತ್ಯವೂ ನಮ್ಮೆಲ್ಲರ ಹೃದಯದಲ್ಲಿ ನೆಲೆ ನಿಂತು ಉತ್ತಮೋತ್ತಮ ಕಾರ್ಯಗಳಿಗೆ ಪ್ರೇರಣೆ ನೀಡಲಿ ಎಂದರು.
ದಶಾವತಾರಗಳಲ್ಲಿ #Dashavatara ಶ್ರೀ ಕೃಷ್ಣಾವತಾರ ಬಹು ವಿಶೇಷ. ಅವನನ್ನು ಸಂಪೂರ್ಣ ಅರಿತವರು ಯಾರೂ ಇಲ್ಲ. ಆತನನ್ನು ಸೆರೆ ಹಿಡಿಯುವ ಸಾಮರ್ಥ್ಯ ಯಾರಿಗೂ ಬರಲೇ ಇಲ್ಲ. ಹಾಗಾಗಿ ಕೃಷ್ಣನನ್ನು ನಮ್ಮ ನಮ್ಮ ಜ್ಞಾನ, ಅರಿವು ಮತ್ತು ಅಧ್ಯಯನದ ಯೋಗ್ಯತಾನುಸಾರ ತಿಳಿದುಕೊಳ್ಳಲು ಪ್ರಯತ್ನ ಮಾಡಬೇಕು. ಅಲ್ಲಿ ನಮ್ಮ ನಮ್ಮ ಜವಾಬ್ದಾರಿ, ಕರ್ತವ್ಯ ಮತ್ತು ನಾಡಿಗೆ ಸೇವೆ ಸಲ್ಲಿಸಲು ಕಂಕಣಬದ್ಧರಾಗಬೇಕು. ಈ ಪ್ರವೃತ್ತಿಗಳೇ ಇಂದು ಸಮಾಜಕ್ಕೆ ಅತಿ ಮುಖ್ಯವಾಗಿ ಬೇಕಾಗಿರುವುದು ಎಂದು ಶ್ರೀಗಳು ಹೇಳಿದರು.
Also read: ಶಿಮುಲ್ ಚುನಾವಣೆ | ಅಧ್ಯಕ್ಷರಾಗಿ ವಿದ್ಯಾಧರ್, ಉಪಾಧ್ಯಕ್ಷರಾಗಿ ಚೇತನ್ ಆಯ್ಕೆ
ಸಾಮಾನ್ಯ ಗೊಲ್ಲರ ನಡುವೆಯೇ ಗೋಪಾಲಕನಾಗಿ ಬದುಕಿ ತೋರಿಸಿದ ಕೃಷ್ಣ ಅಸಾಮಾನ್ಯ ಶಕ್ತಿಯ ದರ್ಶನವನ್ನೂ ಮಾಡಿಸಿದ. ಸಾಮಾನ್ಯರ ಕರೆಗೆ ಓಗೊಟ್ಟು ಓಡಿ ಬಂದ ಆತ ಒಂದೂ ಶಸ್ತ್ರ ಹಿಡಿಯದೇ ಮಹಾಭಾರತ ಯುದ್ಧದ ಸೂತ್ರಧಾರನಾದ. ಯುದ್ಧ ಭೂಮಿಯಲ್ಲೇ ಭಗವದ್ಗೀತೆ #Bhagavadgeeta ಬೋಧನೆ ಮಾಡಿದ. ಸಂಕಷ್ಟಗಳ ಸಾಗರದ ನಡುವೆಯೇ ನಾವು ಕೊಂಚ ವಿರಾಮ ಪಡೆದು ಸಮಸ್ಯೆಗಳನ್ನು ಯುಕ್ತಿಯಿಂದ ಜಯಿಸಬೇಕು ಎಂಬ ಸಂದೇಶ ಸಾರಿದ್ದಾನೆ ಎಂದು ಸ್ವಾಮೀಜಿ ಹೇಳಿದರು.
ನಿಮ್ಮ ನಿಮ್ಮ ಕರ್ಮಗಳನ್ನು ಶ್ರದ್ಧೆಯಿಂದ ಮಾಡಿ. ಫಲದ ಅಪೇಕ್ಷೆ ನನಗೆ ಬಿಟ್ಟುಬಿಡಿ ಎಂದು ಕೃಷ್ಣ ಲೋಕಕ್ಕೆ ಸಂದೇಶ ನೀಡಿದ. ದುಷ್ಟರ ಸಂಹಾರವನ್ನು ಎಳವೆಯಿಂದಲೇ ಮಾಡಿದ ಕೃಷ್ಣ ಧರ್ಮಸಂರಕ್ಷಣೆಯ ಮಹತ್ವವನ್ನು ಲೋಕಕ್ಕೆ ತಿಳಿಸಿದ್ದಾನೆ. ದ್ರೌಪದಿ ದೇವಿಯ ಮಾನ ಸಂರಕ್ಷಿಸುವ ಮೂಲಕ ಸ್ತ್ರೀಯರನ್ನು ಹೇಗೆ ಗೌರವದಿಂದ ಕಾಣಬೇಕು ಎಂಬ ಸಂದೇಶ ನೀಡಿದ್ದಾನೆ. ಇವೆಲ್ಲವೂ ಎಲ್ಲ ದೇಶ- ಕಾಲಗಳಿಗೆ ಇಂದಿಗೂ ಅನ್ವಯ ಎಂಬುದನ್ನು ಮರೆಯಬಾರದು ಎಂದು ಶ್ರೀಗಳು ಹೇಳಿದರು.
ರಾಧೆಯ ಮನದ ರಮಣನಾದ ಕೃಷ್ಣ, ಬಾಲ್ಯದ ಸಖನಾದ ಸುಧಾಮನ ಮಿತ್ರತ್ವಕ್ಕೆ ಮಾನ್ಯತೆ ನೀಡಿದ. ಏನು ಬೇಡದಿದ್ದದರೂ ಸರ್ವವನ್ನೂ ದಯಪಾಲಿಸಿದ. ಒಬ್ಬ ರಾಜತಾಂತ್ರಿಕ ಹೇಗಿರಬೇಕು ಎಂಬ ಪಾಠವನ್ನೂ ವಿಶ್ವಕ್ಕೆ ಹೇಳಿದ ಕೃಷ್ಣ, ಕೇವಲ ಅವತಾರ ಮಾತ್ರವಾಗದೇ ನಿತ್ಯ ನೂತನನಾಗಿದ್ದಾನೆ ಎಂದು ನುಡಿದರು.
ಅಧರ್ಮ, ಅರಾಜಕತೆ, ಅನ್ಯಾಯದ ಆಡಳಿತಗಳು ಇಂದು ಹಲವೆಡೆ ವಿಜೃಂಭಿಸುತ್ತಿವೆ. ಇಂಥ ಕಾಲಘಟ್ಟದಲ್ಲಿ ಭಗವದ್ಗೀತೆ ನಾಡಿಗೆ ಆದರ್ಶವಾದರೆ ಮಾತ್ರ ನಾವು ಸುಭಿಕ್ಷ ರಾಮರಾಜ್ಯವನ್ನು ಕಾಣಲು ಸಾಧ್ಯ. ಯೌವ್ವನ, ಭೋಗ, ಸಂಪತ್ತು, ಅಧಿಕಾರ, ಪ್ರತಿಷ್ಠೆಗಳನ್ನು ಯಾವಾಗ, ಹೇಗೆ, ಎಷ್ಟು ಅನುಭವಿಸಬೇಕು, ಭವದ ಜೀವನ ಹೇಗೆ ದಾಟಬೇಕು, ಪಾರಮಾರ್ಥಿಕ ಹಾದಿಗೆ ಹೇಗೆ ಮುನ್ನುಗ್ಗಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂಬ ಆದರ್ಶ ಕೃಷ್ಣನಲ್ಲಿ ಇದೆ. ಆದ ಕಾರಣ ಅವನು ಲೋಕಗುರು. ಆತನ ಜಯಂತಿ ವಿಶ್ವಕ್ಕೆ ಹಬ್ಬವಾಗಲಿ ಎಂದು ಸ್ವಾಮೀಜಿ ಆಶಿಸಿದರು. ಮಠದ ವಿದ್ವಾಂಸರು, ಪಂಡಿತರು ಹಾಜರಿದ್ದರು.
ನಂತರ ಸಂಸ್ಥಾನ ಪ್ರತಿಮೆಗಳಿಗೆ ಮತ್ತು ಮೂಲ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ, ಮಂಗಳಾರತಿ ಸಮರ್ಪಣೆ ಮಾಡಿದರು. ಕೃಷ್ಣನಿಗೆ ಅರ್ಘ್ಯ ಸಮರ್ಪಣೆ ಮಾಡಿದ್ದು ವಿಶೇಷವಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post