ಕಲ್ಪ ಮೀಡಿಯಾ ಹೌಸ್ | ಮೈಸೂರು |
ಸಂಸ್ಕೃತ #Sanskrit ಭಾಷಾ ಕಲಿಕೆಯು ಮನುಷ್ಯನನ್ನು ಸುಸಂಸ್ಕೃತನನ್ನಾಗಿಸುತ್ತದೆ ಎಂದು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಸೋಸಲೆ #Sosale ವ್ಯಾಸರಾಜರ ಮಠಾಧೀಶ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಹೇಳಿದರು.
ಸಂಸ್ಕೃತ ಮಾಸಾಚರಣೆ ಅಂಗವಾಗಿ ಸೋಸಲೆ ವ್ಯಾಸರಾಜ ಮಠ ಮತ್ತು ತಿ. ನರಸೀಪುರದ ವಿಶ್ವಚೇತನ ಸಂಸ್ಕೃತ ಪಾಠಶಾಲೆ ಸಂಯುಕ್ತವಾಗಿ ಸೋಸಲೆ ಗ್ರಾಮದ ಶ್ರೀಮಠದಲ್ಲಿ ‘ಅಸ್ಮಾಕಂ ಸಂಸ್ಕೃತಂ’ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಸಂಸ್ಕೃತೋತ್ಸವ ಹಾಗೂ ಶ್ರೀ ಕೃಷ್ಣ ಜಯಂತ್ಯುತ್ಸವ #KrishnaJayanthi ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಂಸ್ಕೃತ ಅತ್ಯಂತ ಸಮೃದ್ಧವಾದ ಭಾಷೆ. ಅದರ ಆಳವಾದ ಅಧ್ಯಯನದಿಂದ ನಮ್ಮ ಜ್ಞಾನ ವಿಸ್ತಾರವಾಗುತ್ತದೆ. ವಿಶ್ವದ ಬಹುತೇಕ ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಲು ಪೂರಕವಾಗುತ್ತದೆ. ಇದರಿಂದ ವ್ಯಕ್ತಿತ್ವಕ್ಕೆ ಶೋಭೆ ಬರುತ್ತದೆ ಎಂದವರು ಅಭಿಪ್ರಾಯಪಟ್ಟರು.
ಕೃಷ್ಣ ಭಕ್ತಿ ಜಾಗೃತವಾಗಬೇಕು
ಶ್ರೀ ಕೃಷ್ಣ ಸಜ್ಜನರನ್ನ ರಕ್ಷಿಸಿ, ದುರ್ಜನರನ್ನು ಸಂಹಾರ ಮಾಡಲು ದ್ವಾಪರಯುಗದಲ್ಲಿ ಅವತಾರ ತಾಳಿದ. ಇಂದು ಅಂದರೆ ಕಲಿಗಾಲದಲ್ಲಿ ನಮ್ಮ ಹೃದಯದಲ್ಲೇ ಇರುವ ದುಷ್ಟತನವನ್ನು ನಿವಾರಿಸಿಕೊಳ್ಳುವುದು, ದೈವಿಕ ಶಕ್ತಿಗಳನ್ನು ಜಾಗೃತಗೊಳಿಸಿಕೊಳ್ಳುವ ಕಾರ್ಯ ಸಾಧನೆ ಆಗಬೇಕು. ಅದಕ್ಕಾಗಿ ನಮ್ಮಲ್ಲಿ ಕೃಷ್ಣ ಭಕ್ತಿ ಜಾಗೃತವಾಗಬೇಕು. ಇದು ಅತ್ಯಂತ ಪ್ರಮುಖವಾಗಿ ಕಾರ್ಯರೂಪಕ್ಕೆ ಬಂದರೆ ಮಾತ್ರ ಸುಖೀ ಸಮಾಜವನ್ನು, ಸಮೃದ್ಧ ಭಾರತವನ್ನು ನಾವು ನೋಡಲು ಸಾಧ್ಯವಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ಶಿವಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಆಗ ಕಲಿಕೆ ಮತ್ತು ಬೆಳವಣಿಗೆ ಎರಡೂ ಏಕ ಕಾಲದಲ್ಲಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಿಜಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವೀರಭದ್ರ ಸ್ವಾಮಿ ಮಾತನಾಡಿ, ಸಂಸ್ಕೃತ ಕಲಿಕೆ ಮತ್ತು ಕೃಷ್ಣ ಭಕ್ತಿ ಎರಡೂ ನಮ್ಮೆಲ್ಲರಿಗೆ ಪ್ರಮಖ ಧ್ಯೇಯ ಆಗಬೇಕು. ಆಗ ಬದುಕು ನಂದನವನ ಆಗುತ್ತದೆ. ವಿದ್ಯಾರ್ಥಿ ದಿಸೆಯಲ್ಲಿಯೇ ಈ ರೀತಿಯ ಸಂಸ್ಕಾರ ರೂಢಿಸಿಕೊಂಡರೆ ಮಕ್ಕಳು ಜವಾಬ್ದಾರಿಯುತ ಪ್ರಜೆಗಳಾಗಲು ಮತ್ತು ಸಾಂಸ್ಕೃತಿಕ ರಾಯಭಾರಿಗಳಾಗಲು ನೆರವಾಗುತ್ತದೆ ಎಂದರು.
ಭಾಷೆಗೆ ಸೀಮಿತ ಚೌಕಟ್ಟು ಇಲ್ಲ
ಕಾರ್ಯಕ್ರಮದ ಪ್ರಧಾನ ಸಂಯೋಜಕ ಡಾ. ಸಿ.ಎಚ್. ಗುರುರಾಜ ರಾವ್ ಮಾತನಾಡಿ, ಅಂತರ್ಲೋಕೀಯ ಭಾಷೆಯಾದ ಸಂಸ್ಕೃತವು ಯಾವುದೇ ಒಂದು ಜಾತಿ, ಮತ ಅಥವಾ ಪಂಗಡದ ನುಡಿ ಅಲ್ಲ. ಇದಕ್ಕೆ ಯಾವುದೇ ಪ್ರದೇಶದ ಗಡಿ-ಮಿತಿಗಳು ಇಲ್ಲ. ಸಾರ್ವಕಾಲಿಕ ಮತ್ತು ಸಾರ್ವತ್ರಿಕ ಮಾನ್ಯತೆ ಹೊಂದಿರುವ ಭಾಷೆ ಸಂಸ್ಕೃತ. ಇದನ್ನು ಒಂದು ವರ್ಗದ ಕಲಿಕೆಗೆ ಮಿತಿ ಮಾಡಿ ಇಟ್ಟರೆ ನಮಗೆ ನಾವೇ ಅನ್ಯಾಯ ಮಾಡಿಕೊಂಡಂತೆ. ಅನಗತ್ಯ ಟೀಕೆ, ಸಲ್ಲದ ವಿಚಾರವಂತಿಕೆ ಬಿಟ್ಟು ಪುರಾತನ ಭಾಷಾ ಕಲಿಕೆ ಮೂಲಕ ಜೀವನಾನುಭವ ವಿಸ್ತರಿಸಿಕೊಳ್ಳೋಣ ಎಂದು ಅವರು ಹೇಳಿದರು.
ವಿಶ್ವಚೇತನ ಸಂಸ್ಕೃತ ಪಾಠಶಾಲೆ ಅಧ್ಯಕ್ಷ ಎಂ.ಎಂ. ನಾಗರಾಜು ಅಧ್ಯಕ್ಷತೆ ವಹಿಸಿದ್ದರು.
ಚಿಣ್ಣರಿಂದ ಭಾಷಾ ಜಾಗೃತಿ ಜಾಥಾ
‘ಅಸ್ಮಾಕಂ ಸಂಸ್ಕೃತಂ’ ಎಂಬ ಧ್ಯೇಯ ವಾಕ್ಯದೊಡನೆ ಹಮ್ಮಿಕೊಂಡಿದ್ದ ‘ಸಂಸ್ಕೃತ ವಸ್ತು ಪ್ರದರ್ಶನಿ’ಗೆ ಬಿಇಒ ಸಿ.ಎಸ್. ಶಿವಮೂರ್ತಿ ಚಾಲನೆ ನೀಡಿದರು.
‘ಪಠತ ಸಂಸ್ಕೃತಂ-ವದತ ಸಂಸ್ಕೃತಂ-ಜಯತು ಭಾರತಂ-ಮುಂತಾದ ಘೋಷಣೆಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮಕ್ಕಳು ಭಾಷಾ ಜಾಗೃತಿ ಜಾಥಾ ನಡೆಸಿ ಗಮನ ಸೆಳೆದರು. ವಿವಿಧ ಶಾಲೆಗಳ ಶಿಕ್ಷಕರು, ಪಾಲಕರು, ಗ್ರಾಮಸ್ಥರು ಭಾಗಿಗಳಾಗಿದ್ದರು.
ವಿವಿಧ ಸ್ಪರ್ಧೆ
ಈ ಸಂದರ್ಭದಲ್ಲಿ ಗೀತಾ ಕಂಠಪಾಠ ಸ್ಪರ್ಧೆ, ಕೃಷ್ಣ- ರಾಧೆ ವೇಷಭೂಷಣ ಸ್ಪರ್ಧೆ, ದೇವರನಾಮ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಗಳಲ್ಲಿ ತಿ. ನರಸೀಪುರ ತಾಲೂಕಿನ 52 ಶಾಲೆಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಿಗೆ ಸೋಸಲೆ ಶ್ರೀಗಳು ಬಹುಮಾನ ವಿತರಿಸಿದರು.
ಬಾಗಲಕೋಟೆಯ 9 ವರ್ಷದ ಬಾಲಕ ಸುಧಾಂಶು ಕಟ್ಟಿ ಕೊಳಲು ವಾದನ, ಸುಘೋಷನ ದಾಸವಾಣಿ ಗಮನ ಸೆಳೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post