ಕಲ್ಪ ಮೀಡಿಯಾ ಹೌಸ್
ಮೈಸೂರು: ರಾಜ್ಯ ಸರ್ಕಾರ ಅತ್ಯಂತ ಸೂಕ್ತವಾದ ಕೋವಿಡ್ ಮಾರ್ಗಸೂಚಿ ರೂಪಿಸಿದೆ. ಆದರೆ ಇದು ಏಕಾಏಕಿಯಾದ ನಿರ್ಧಾರವಲ್ಲ. ನಿಯಮಪಾಲನೆಗೆ ಜನರು ಸಹಕರಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.
ಜಿಲ್ಲೆಯಲ್ಲಿ ಕೋವಿಡ್ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸರ್ಕಾರಕ್ಕೆ ಜೀವನಕ್ಕಿಂತ ಜೀವ ಮುಖ್ಯ ಎಂಬ ಚಿಂತನೆ ಇದೆ. ಕೂಲಿ ಕಾರ್ಮಿಕರು, ಕೃಷಿ ಚಟುವಟಿಕೆ, ಕೈಗಾರಿಕೆ, ಕಚೇರಿಯಲ್ಲಿ ಕೆಲಸ ಮಾಡುವವರಿಗೆ ತೊಂದರೆ ಮಾಡಿಲ್ಲ. ಗುಂಪುಗೂಡುವುದನ್ನು ಹಾಗೂ ಸಾಂಕ್ರಾಮಿಕ ಹರಡಲು ಕಾರಣವಾಗುವ ಚಟುವಟಿಕೆಗಳನ್ನು ಮಾತ್ರ ನಿರ್ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಏಪ್ರಿಲ್ 1 ರಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಿದೆ. ಪರೀಕ್ಷೆ, ಸಂಪರ್ಕ ಪತ್ತೆ, ಲಸಿಕೆ ಅಭಿಯಾನ ಉತ್ತಮವಾಗಿ ನಡೆಯುತ್ತಿದೆ. ಈವರೆಗೆ 7 ಲಕ್ಷ ಜನರಿಗೆ ಲಸಿಕೆ ನೀಡಿದ್ದು, ಇನ್ನೂ ಹೆಚ್ಚಿನವರಿಗೆ ನೀಡಲು ಸೂಚಿಸಲಾಗಿದೆ. ಔಷಧ ಲಭ್ಯತೆ, ಆಕ್ಸಿಜನ್ ಕೊರತೆ ನೀಗಿಸಲು ಡ್ರಗ್ ಕಂಟ್ರೋಲರ್ ಕಚೇರಿಯಿಂದ ಸಹಾಯವಾಣಿ, ವಾರ್ ರೂಮ್ ನಿಂದ ಹಾಸಿಗೆ ಲಭ್ಯತೆ ಬಗ್ಗೆ ರಿಯಲ್ ಟೈಮ್ ಮಾಹಿತಿ, ಆಯಾ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಕೋವಿಡ್ ಅರಿವು ಮೂಡಿಸಲು ತೀರ್ಮಾನಿಸಲಾಗಿದೆ ಎಂದರು.
ಮೈಸೂರಿನಲ್ಲಿ ಮರಣ ಪ್ರಮಾಣ ಶೇ.4 ರಷ್ಟಿದೆ. ಬಹುಪಾಲು ಮರಣಗಳು, ರೋಗಿಗಳು ತಡವಾಗಿ ಆಸ್ಪತ್ರೆಗೆ ಬಂದಿರುವುದರಿಂದ ಸಂಭವಿಸಿದೆ. ಹೃದಯ ಸಮಸ್ಯೆ ಮೊದಲಾದ ಬೇರೆ ಸಮಸ್ಯೆಗಳಿಂದಲೂ ಸಾವಾಗಿದೆ. ಸಾವಿನ ಆಡಿಟ್ ಮಾಡುತ್ತಿದ್ದು, ನಿಖರ ಕಾರಣದ ಬಗ್ಗೆ ವರದಿಯನ್ನು ಬಂದಿದೆ. ಮೈಸೂರಿನಲ್ಲಿ ಆರೋಗ್ಯ ಸೌಲಭ್ಯಗಳು ಉತ್ತಮವಾಗಿದ್ದು, ಮರಣ ಪ್ರಮಾಣ ನಿಯಂತ್ರಿಸಬೇಕಿದೆ ಎಂದರು.
ಜಿಲ್ಲೆಯಲ್ಲಿ ಒಂದೆರಡು ಆಸ್ಪತ್ರೆಗಳು ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ ನಡಿ ಇರಲಿಲ್ಲ. ಈಗ ಮತ್ತೆ ಆಸ್ಪತ್ರೆಗಳು ನೋಂದಾಯಿಸಿಕೊಂಡಿವೆ. ಇನ್ನು ಶೇ.50 ರಷ್ಟು ಹಾಸಿಗೆ ಕೋವಿಡ್‍ಗೆ ಮೀಸಲಿಡಲಾಗುತ್ತದೆ. ಆಸ್ಪತ್ರೆಗಳು ಕೊಡದಿದ್ದರೆ ಸರ್ಕಾರವೇ ಪಡೆಯಲಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news










Discussion about this post