ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮೈಸೂರು: ಮೂವರು ಮನೆ ಕಳ್ಳರನ್ನು ಮೈಸೂರಿನ ಕುವೆಂಪು ನಗರ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಭಾರೀ ಪ್ರಮಾಣದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ದಿಲೀಪ್ ಕುಮಾರ್ (38), ಮಂಜು (35), ರಾಜೇಂದ್ರ (29) ಬಂಧಿತ ಆರೋಪಿಗಳು. ಬಂಧಿತರಿಟದ 21,47,500 ರೂ. ಮೌಲ್ಯದ 391 ಗ್ರಾಂ ತೂಕದ ಚಿನ್ನಾಭರಣ, ಒಂದು ಕಾರು ಮತ್ತು ವಿದೇಶಿ ನಿರ್ಮಿತ ರಿವಾಲ್ವರ್ ಜೊತೆ 6 ಸಜೀವ ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಮ್ಮ ಬಳಿ ಇದ್ದ ರಿವಾಲ್ವರ್ ಮಾರಾಟ ಮಾಡುವ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಆರೋಪಿಗಳ ವಿಚಾರಣೆ ಬಳಿಕ ಕಳ್ಳತನ ಪ್ರಕರಣಗಳು ಮನೆ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ. ಮೈಸೂರಿನ ಕುವೆಂಪು ನಗರ, ವಿಜಯನಗರ, ಅಶೋಕಪುರಂ, ಬೆಂಗಳೂರಿನ ಬಾಣಸವಾಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.
ಪೊಲೀಸರು ಖತರ್ನಾಕ್ ಕಳ್ಳರ ಬೇಟೆಗಾಗಿ ಬಲೆ ಬೀಸಿದ್ದರು. ನಿರಂತರವಾಗಿ ಬ್ಲೂಪ್ರಿಂಟ್ ಸಿದ್ಧಪಡಿಸಿ ಚೋರರ ಬಂಧನಕ್ಕೆ ಪೊಲೀಸರು ಸಿದ್ಧತೆ ನಡೆಸಿದ್ದರು. ಇದೀಗ ಪೊಲೀಸರು ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಈ ಮೂವರು ಮನೆಗಳ್ಳರು ಖಾಕಿ ಖೆಡ್ಡಾಗೆ ಬಿದ್ದಿದ್ದಾರೆ. ಆರೋಪಿಗಳನ್ನ ವಿಚಾರಣೆ ನಡೆಸಲಾಗುತ್ತಿದೆ.
ಡಿಸಿಪಿ ಗೀತಾ ಪ್ರಸನ್ನ ಹಾಗೂ ಕೃಷ್ಣರಾಜ ನಗರ ವಿಭಾಗ ಎಸಿಪಿ ಎಂ.ಎಸ್. ಪೂರ್ಣಚಂದ್ರ ತೇಜಸ್ವಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು, ಪತ್ತೆ ಕಾರ್ಯದಲ್ಲಿ ಕುವೆಂಪು ನಗರ ಠಾಣೆ ಇನ್ಸ್ಪೆಕ್ಟರ್ ಜಿ.ಸಿ.ರಾಜು, ಪಿಎಸ್‌ಐ ಮಹಾವೀರ್ ಬೀಳಗಿ, ಎಎಸ್‌ಐ ದೇವಯ್ಯ ಸೇರಿ ಠಾಣಾ ಸಿಬ್ಬಂದಿ ಭಾಗಿಯಾಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post