ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಆಲೋಚನೆ, ಆರಾಧನೆ ಎಲ್ಲನಿಂದೇನೆ…!
ಆಲಾಪನೆ, ಆಕರ್ಷಣೆ ಎಲ್ಲ ನೀನೇನೆ…!
ನಾವಿಬ್ಬರು ಒಂದಾದರೆ ಕಂಡಿತಾ…!
ಈ ಜೀವನ ಅಲ್ಲಿಂದಲೇ ಅದ್ಭುತಾ…!
ಕನಸಿಗಿಂತ ಸೊಗಸು ನಿನ್ನ ಸನಿಹಾ..!
ಯಾರೊ ನನಗೆ ನೀನು..?
ನನ್ನವನ ನಗು ಡಿಂಪಲ್ ರಚಿತಗಿಂತಲೂ ಸೋ ಕ್ಯೂಟ್. ನನ್ನವನ ಕೆನ್ನೆ ಶೈನ್ ಶೆಟ್ಟಿಗಿಂತಲು ಸೋ ಶೈನ್, ಅವನ ನಗು ಮುಗುಳುನಗೆ ಗಣಿಗಿಂತಲು ಸೋ ನಾಟಿ. ಬಹುಷ ಆತನ ನಗುವೇ ಹಾಗೇ ಅನಿಸುತ್ತದೆ. ಅವತ್ತು ಅವನ ನಗುವಿಗೆ ಬಿದ್ದವಳು ಇಂದಿಗೂ ಸಹ ಆ ಮುದ್ದಾದ ನಗುವಿನಿಂದ ಹೊರಬರಲು ಸಾಧ್ಯವಾಗಿಲ್ಲ. ಪ್ರಾಯಶಃ ನಾ ಮುದುಕಿಯಾಗಿ ತೀರಿದರು ಸ್ವರ್ಗದಲ್ಲೂ ಅವನ ನಗು ಹೀಗೆಯೆ ಇರುತ್ತದೆ ಅನಿಸುತ್ತದೆ.
ಬಿಇಡಿ ದಿನಗಳವು ಎಲ್ಲ ಹುಡುಗರನ್ನು ಅಣ್ಣ ತಮ್ಮರಂತೆ ಕಾಣಬೇಕೆಂಬ ಮಂತ್ರದೊಂದಿಗೆ ಕಾಲೇಜು ಮೆಟ್ಟಿಲು ಏರಿದವಳು ನಾನು. ಊರು ಅಂದ ಮೇಲೆ ಬ್ಯೂಟಿ ಪಾರ್ಲರ್ ಇರಲೇಬೇಕು, ಹುಡುಗಿ ಅಂದಮೇಲೆ ಲವ್ವಲ್ಲಿ ಬೀಳಲೆಬೇಕು ಅನ್ನುವಂತೆ ದುಂಡುಕೆನ್ನೆಯ ಕುರುಚುಲ ಗಡ್ಡದ ರೂವಾರಿಗೆ ನಾ ಆಗಲೇ ಮನಸೋತಿದ್ದೆ. ಹೋಗುವಾಗ ಬರುವಾಗ ಕದ್ದು ನೋಡುತ್ತಿದ್ದ ಆ ಇಣುಕು ನೋಟಕ್ಕೆ ನಾ ಅಷ್ಟೆ ಅಲ್ಲ ನಮ್ಮಪ್ಪನು ಮನ ಸೋತಿದ್ದರು. ಆದ್ರೆ ಪ್ರೇಮ ನಿವೇದನೆ ಅವನಿಂದಲೇ ಬರಲಿ ಎನ್ನುವ ಹಂಬಲ ನನ್ನದಾಗಿತ್ತು.
ಕೊನೆಗೂ ಕಾಲ ಎಂದಾದರೂ ಬರಲೇಬೇಕು ಅನ್ನುವಂತೆ ನಮ್ಮಿಬ್ಬರ ಪ್ರೇಮದ ವಿಚಾರ ಮನೆಯಲ್ಲಿ ಬ್ರೇಕಿಂಗ್ ನ್ಯೂಸ್ ಆಗಿತ್ತು. ಪಠ್ಯಪುಸ್ತಕಗಳಲ್ಲಿ ಆದರೆ ಒಂದು ಅಂಕದ ಪ್ರಶ್ನೆಗೆ ಯೆಸ್ ಆರ್ ನೋ ಪ್ರಶ್ನೆಯನ್ನು ಕೇಳಿರುತ್ತಾರೆ. ಆದರೆ ಈ ವಿಚಾರ ನನ್ನ ಜೀವನದ ತಿರುವಾಗಿತ್ತು. ತಂದೆ ತಾಯಿಯಂತಿರುವ ನನ್ನ ಹೈಕೋರ್ಟ್‌ನಿಂದ ಹಸಿರು ನಿಶಾನೆ ಸಿಗಬಹುದಾ ಅಥವಾ ತಂದೆ ತಾಯಿ ಬೇಕಾದರೆ ಅವನನ್ನು ಮರೆತು ಬಿಡು ಎನ್ನುವ ಅಪಿಲ್ ಕೇಳಬಹುದಾ ಅಂತಾ ಎದೆಗುಂಡಿಗೆ ಮಾತ್ರ ಗಂಟೆಗೆ 170 ಕಿಮೀ ಸ್ಫೀಡ್‌ನಲ್ಲಿ ಬಡಿದುಕೊಳ್ಳುತ್ತಿತ್ತು.
ಒಂದು ವೇಳೆ ನಾನು ಮುಮ್ತಾಜ್, ಅವನು ಶಹಜಾನ್ ಆಗಿದ್ರೆ ಕಡೆ ಪಕ್ಷ ಮೂರನೆಯ ಮಹಾಯುದ್ಧ ಉಂಟಾಗುತ್ತಿತ್ತೇನೊ ಪುಣ್ಯ. ನಾವಿಬ್ರು ಮುಮ್ತಾಜ್, ಶಹಜಾನ್ ಆಗಿರಲಿಲ್ಲ. ಕೊನೆಗೂ ಜನಕ ಜಾನಕಿಯಿರಿಬ್ಬರು ಹುಡುಗನ ಮನಸ್ಸನ್ನು ಸಂಪೂರ್ಣ ಸ್ಟಡಿ ಮಾಡಿದ್ದರಿಂದ ನಮ್ ಜೀವನಕ್ಕೆ ಕೊನೆ ಗಳಿಗೇಲಿ ನೀರುಬಿಟ್ಟಂಗೆ ಒಪ್ಪಿಗೆ ಸಂದೇಶ ಸಿಕ್ಕಿದ್ದೇ ತಡ, ಆ ಟೈಮ್’ಲಿ ನಮ್ಮನ್ನು ಹಿಡಿಯೋರ್ಯಾರು. ಪ್ರೀತಿಯನ್ನು ರವಿಚಂದ್ರನ್ ರೇಂಜಿನಲ್ಲಿದ್ದು ಬಿಟ್ಟಿವಿ ಎನ್ನುತ್ತಾ ಖುಷಿಯಲ್ಲಿ ಹಾರಾಡಿದ್ದೆ ಹಾರಾಡಿದ್ದು. ಅವತ್ತಿನಿಂದಲೂ ನನ್ನ ಮೇಲೆ ಆತನಿಗೆ ಕೊಂಚವು ಪ್ರೀತಿ ಕಡಿಮೆಯಾಗಿಲ್ಲ, ನಾನು ಕೂಡಾ ಪ್ರೀತಿ ವಿಚಾರದಲ್ಲಿ ಮಲತಾಯಿ ಧೋರಣೆ ಮಾಡಿಲ್ಲ. ನೋಡುವ ಸಾರ್ವಜನಿಕರು ಮೇಡ್ ಫಾರ್ ಈಚ್ ಅದರ್ ಎನ್ನುವಂತೆ ಇಂದಿಗೂ ಅದೇ ರೀತಿ ಬಾಳುತ್ತಿದ್ದೇವೆ. ನನ್ನ ಹೃದಯವ ಕದ್ದು ಪ್ರೀತಿಯೆಂಬ ಗೂಡಲ್ಲಿ ಹಕ್ಕಿಗಿಂತಲೂ ಮುದ್ದಾಗಿ ಲಾಲನೆ ಪಾಲನೆ ಮಾಡುತ್ತಿರುವ ನನ್ನ ಹೃದಯದ ರಾಜಕುಮಾರನಿಗೆ ಪ್ರೇಮಿಗಳ ದಿನದ ಹೋಲ್’ಸೇಲ್ ಶುಭಾಶಯಗಳು.
ಇಂತಿ ನೀನೆ ಸಾಕಿದ ಗಿಣಿ-ಸೌಮ್ಯ ಚಂದ್ರಶೇಖರ್ ಶಾಸ್ತ್ರೀ
Get in Touch With Us info@kalpa.news Whatsapp: 9481252093
Discussion about this post