ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವೈಶಾಖ ಶುದ್ಧ ಪಂಚಮಿಯ ಇಂದು ಶಂಕರಾಚಾರ್ಯರು ಭುವಿಯಲ್ಲಿ ಅವತರಿಸಿದ ಪುಣ್ಯದಿನ ತನ್ನಿಮಿತ್ತ ಸಾಂದರ್ಭಿಕ ನುಡಿನಮನ
ಭಾರತದ ಹಿರಿಯ ಧರ್ಮಗುರುಗಳಲ್ಲಿ ವಿಭೂತಿ ಪುರುಷರಲ್ಲಿ ಮತ್ತು ತತ್ವಶಾಸ್ತ್ರಜ್ಞರಲ್ಲಿ ಶಂಕರಾಚಾರ್ಯರು ಅಗ್ರಗಣ್ಯರು. ಇಂಥ ಮಹಾಮಹಿರಾಮರಾದ ತಾತ್ವಿಕರ ಜೀವನದ ವಿಚಾರವಾಗಿ ನಮಗೆ ತಿಳಿದಿರುವ ಅಂಶಗಳು ಅತ್ಯಲ್ಪ.
ಬೌದ್ಧರೊಂದು ಕಡೆ ಮತ್ತು ಜೈನರು ಮತ್ತೊಂದು ಕಡೆಯಿಂದ ಶೃತಿಯಲ್ಲಿ ಉಕ್ತವಾದ ಕ್ರಿಯಾಕಲಾಪಗಳ ಮೇಲೆ ಆಕ್ರಮಣ ನಡೆಸಿರುವಾಗ ವೈದಿಕ ಧರ್ಮವನ್ನು ಪುನಃ ಊರ್ಜಿತಗೊಳಿಸುವುದಕ್ಕಾಗಿ ಶೃತಿಯ ಯಥಾರ್ಥವಾದ ಅರ್ಥವನ್ನು ಜನಗಳಿಗೆ ಸುಗಮ ಮಾರ್ಗದಲ್ಲಿ ತಿಳಿಸಲು ಶ್ರೀಶಂಕರರು, ಅವೈದಿಕ ದರ್ಶನಗಳನ್ನು ಯುಕ್ತಯುಕ್ತಾವಾಗಿ ಖಂಡಿಸಿ ಉಪನಿಷತ್ತುಗಳಲ್ಲಿ ಪ್ರತಿಪಾದಿಸಿರುವ ಆಧ್ಯಾತ್ಮಿಕ ಅದ್ವೈತ ತತ್ವದ ಪ್ರತಿಪಾದನೆ ಮಾಡಲು ಪರಮೇಶ್ವರನ ಅವತಾರಿಗಳಾಗಿ ಜನಿಸಿದರು. ಕ್ರಿ.ಶ.788ರಲ್ಲಿ ವೈಶಾಖ ಶುಕ್ಲ ಪಂಚಮಿಯಲ್ಲಿ ಆರಿದ್ರಾ ನಕ್ಷತ್ರ ಮಿಥುನರಾಶಿಯಲ್ಲಿ ಚಂದ್ರನಿರುವಾಗ ಈ ದೇದೀಪ್ಯಮಾನ ಪ್ರತಿಭೆ ಕೇರಳ ರಾಜ್ಯದ ಕಾಲಟೀ ಎಂಬ ಗ್ರಾಮದಲ್ಲಿ ಉತ್ತಮ ವೈದಿಕ ಸಂಪ್ರದಾಯದ ನಂಬೂದರಿ ಮನೆತನದ, ತಿರುಶಿವಪೆರುರು ಎಂಬ ಹಿರಿಯರ ಹಿತವಚನವನ್ನು ಪಾಲಿಸುತ್ತಾ ತ್ರಿಚೂರಿನ ವೃಷಾಚಲೇಶ್ವರನ ಅಖಂಡ ಸೇವೆಯಲ್ಲಿ ಭಕ್ತಿ ಪುರಸ್ಸರವಾಗಿ ಸೇವೆ ಸಲ್ಲಿಸುತ್ತಿದ್ದ ಆರ್ಯಾಂಬೆ, ಶಿವಗುರು ದಂಪತಿಗಳಿಗೆ ಸುಪುತ್ರನಾಗಿ ಮೂಡಿತು.
ಮೂರು ವರ್ಷ ತುಂಬುವುದರೊಳಗೆ ತಂದೆಯನ್ನು ಕಳೆದುಕೊಂಡು ತಾಯಿಯ ಮಮತಾಪಾಶದಲ್ಲಿ ಬೆಳೆಯುತ್ತಾ ಐದನೆಯ ವರ್ಷದಲ್ಲಿನ ಉಪನಯನ ವಿಧಿಗಳ ನಂತರ ತಾಯಿಯ ಮನವನ್ನು ಒಲಿಸಿ ಶಂಕರರು ಒಬ್ಬ ಯೋಗ್ಯ ಗುರುವನ್ನು ಹುಡುಕಿಕೊಂಡು ಹೊರಟರು. ನರ್ಮದಾ ತೀರದಲ್ಲಿ ಪ್ರಸಿದ್ಧ ಸನ್ಯಾಸಿಗಳಾದ ಗೋವಿಂದ ಭಗವತ್ಪಾದರ ಶಿಷ್ಯರಾಗಿ ಸಮಸ್ತ ವಿದ್ಯೆಯನ್ನು ಕಲಿತರು.
ಪವಾಡಗಳಂತಹ ಧಿಃಶಕ್ತಿ
ಅಲ್ಲಿ ತುಂಬಿ ಹರಿಯುತ್ತಿದ್ದ ನರ್ಮದಾ ನದಿಯ ನೀರನ್ನು ತಮ್ಮ ಸತ್ ಪ್ರಖರತೆಯಿಂದ ಕಮಂಡಲದಲ್ಲಿ ಸೆರೆ ಹಿಡಿದು ಮುಳುಗಿ ಹೋಗುತ್ತಿದ್ದ ಹಳ್ಳಿಗಳನ್ನು ಉಳಿಸಿ ರೈತರ ಅಪದ್ಭಾಂಧವರಾದರು.
ಶ್ರೀ ಭಗವತ್ಪಾದರು ಬಾಲಯೋಗಿ, ಅಪ್ರತಿಮ ಪ್ರತಿಭೆಯ ಎಳೆಯ ಬಾಲನಾಗಿ ಮಾಣಿಕ್ಯ ಮಂಗಳ ಕಾತ್ಯಾಯಿನಿ ಭಗವತಿಗೆ ಹಾಲನ್ನು ಸ್ವೀಕರಿಸುವಂತೆ ಮಾಡಿದುದಲ್ಲದೆ ಪ್ರಸಾದದ ರೂಪದಲ್ಲಿ ಬಟ್ಟಲಲ್ಲಿ ಮತ್ತೇ ಹಾಲನ್ನು ತುಂಬಿಸಿ ಕೊಡುವಷ್ಟು ಮಟ್ಟಿಗೆ ದೇವಿಯನ್ನು ಸಾಕ್ಷಾತ್ಕರಿಸಿಕೊಂಡು ನಲಿದರು. ಇನ್ನೊಮ್ಮೆ ಭಿಕ್ಷಾಟನೆಗೆ ಹೋದಾಗ ಕಡುಬಡವಳ ಮನೆಯಲ್ಲಿ ಭಿಕ್ಷೆ ನೀಡಿದ ನೆಲ್ಲಿಕಾಯಿಗೆ ಪ್ರತಿಯಾಗಿ 21 ಶ್ಲೋಕಗಳ ಕನಕಧಾರ ಸ್ತುತಿಯನ್ನು ಸ್ತುತಿಸುವುದರ ಮೂಲಕ ಆ ಮಹಾಲಕ್ಷ್ಮಿಯನ್ನೇ ಒಲಿಸಿಕೊಂಡು ಆ ಮನೆಯಲ್ಲಿ ಬಂಗಾರದ ನೆಲ್ಲಿಕಾಯಿಗಳ ಸುರಿಮಳೆ ಆಗುವಂತೆ ಮಾಡಿದರು.
ಮತ್ತೊಮ್ಮೆ ದಿನನಿತ್ಯದಂತೆ ತುಂಬು ಪ್ರವಾಹದ ನಿಮಿತ್ತ ಶ್ರೀಬಾಲಕೃಷ್ಣನ ದೇವಾಲಯವನ್ನು ಅರ್ಚಿಸಲಾಗದ ತನ್ನ ತಾಯಿಗೆ ತಮ್ಮ ಯೋಗಶಕ್ತಿಯ ಪ್ರಭಾವದಿಂದ ಆ ನದಿಯ ನೀರು ತಮ್ಮ ಮನೆಯ ಬಾಗಿಲಿಗೆ ಹರಿದು ಬರುವಂತೆ ಮಾಡಿ ಶ್ರೀ ಬಾಲಕೃಷ್ಣನ ಪುಟ್ಟಗುಡಿಯನ್ನು ನಿರ್ಮಿಸಿಕೊಟ್ಟರು. ಶ್ರೀ ಆಚಾರ‌್ಯರು ಉಗ್ರಕಾಳಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ವಾಮಾಚಾರ ಪದ್ಧತಿಗಳನ್ನು ತೊಡೆದು ಹಾಕಿ ವೈದಿಕ ಪದ್ಧತಿಯಿಂದ ದೇವಿಯು ಪ್ರಸನ್ನಗೊಳಿಸಿದ ಆ ಭಗವತಿಯನ್ನು ಸಾಕ್ಷಾತ್ಕರಿಸಿಕೊಂಡರು.
ಹೀಗಿರುವಾಗ ಒಂದು ದಿನ ಗಂಗಾನದಿಗೆ ಸ್ನಾನಕ್ಕೆಂದು ಹೊರಟಿರುವಾಗ ಚಂಡಾಲನೋರ್ವನು ತನ್ನ ನಾಲ್ಕು ನಾಯಿಗಳೊಂದಿಗೆ ಎದುರಾದರು. ಆಗ ಅತನನ್ನು ಉದ್ದೇಶಿಸಿ ಶ್ರೀಗಳವರ ಶಿಷ್ಯನೋರ್ವನು ‘‘ಏ ತೊಲಗಾಚೆ’’ ಎಂದು ಗದರಿಸಿದನು. ಆಗ ಆತನು ಅವನನ್ನು ಉದ್ದೇಶಿಸಿ ‘‘ನೀನು ಹೇಳಿದ ಈ ಮಾತು ದೇಹಕ್ಕೋ, ಇಲ್ಲ ಆತ್ಮಕ್ಕೋ?’’ ಎಂದು ಮರು ಪ್ರಶ್ನಿಸಿದನು. ಮಹಾನ್ ಶಕ್ತಿ ದೇದೀಪ್ಯಮಾನ ಪ್ರತಿಭೆಯ ಶ್ರೀ ಶಂಕರರಿಗೆ ಸತ್ಯಾಸತ್ಯತೆಯ ಅರಿವಾಗಿ, ಆತನೇ ಶಂಕರನೆಂಬ ಸತ್ಯವನ್ನು ಅರಿತು ಆತನ ಪಾದಕ್ಕೆರಗಿದರು. ಆಗ ಈಶ್ವರನ ಸಾಕ್ಷಾತ್ಕಾರವಾಯಿತು. ಪರಶಿವನು ವೈದಿಕಧರ್ಮದ ಪುನರುಜ್ಜೀವನವು ನಿನ್ನಿಂದ ಆಗಲಿ ಎಂದು ಹರಸಿ ಅದೃಶ್ಯನಾದನು. ಪವಾಡಗಳಂತೆನಿಸಿದರೂ ಈ ಘಟನೆಗಳಲ್ಲಿನ ಸಾಧನೆಗಳೆಲ್ಲವೂ ಶಂಕರರ ಧಿಃಶಕ್ರಿಯ ಪ್ರತಿರೂಪಗಳೇ ಆಗಿವೆ.
ಸರ್ವವೂ ಏಕವೇ
‘‘ಅದ್ವೈತ’’ ಎಂದರೆ ಪ್ರಪಂಚದಲ್ಲಿ ಎರಡಿಲ್ಲ, ಎಲ್ಲವೂ ಒಂದೇ, ಎಲ್ಲವೂ ಬ್ರಹ್ಮ; ಬ್ರಹ್ಮನು ಬೇರೆ ನಾವು ಬೇರೆ ಅಲ್ಲ ಎಂಬ ತತ್ವ. ಪಾರಮಾರ್ಥಿಕವಾಗಿ ಮೇಲುಕೀಳು ಎನ್ನುವುದಿಲ್ಲ. ಎಲ್ಲವೂ ಬ್ರಹ್ಮ. ಎಲ್ಲವೂ ಪೂಜನೀಯ ಎಂದು ಹೇಳಿ, ಮನುಷ್ಯರಾದ ನಮ್ಮಲ್ಲಿ ಮೇಳುಕೀಳು ಭಾವನೆ ಇರಬಾರದು. ನಾವೆಲ್ಲರೂ ಒಂದೇ ಎನ್ನುವುದನ್ನು ಸಾರಿದರು.
ಶಂಕರಾಚಾರ್ಯರು ಸನ್ಯಾಸಿಯಾದ ಮೇಲೂ ತಮ್ಮ ತಾಯಿಯನ್ನು ಮರೆಯಲಿಲ್ಲ. ತಾಯಿಗೆ ಆರೋಗ್ಯ ಕೆಟ್ಟಿದೆ ಎಂದು ತಿಳಿದಾಗ ಕಾಲಟಿಗೆ ಮರಳಿದರು. ಅಲ್ಲಿ ಆಕೆ ಕಾಲವಾದಳು. ಸನ್ಯಾಸಿಗಳಾದರೂ ತಮ್ಮ ತಾಯಿಯ ಅಂತ್ಯಕ್ರಿಯೆ ನಡೆಸಿ ಸಂಪ್ರದಾಯದ ನಿಷ್ಕರ ನಿಷ್ಠುರಕ್ಕೆ ಪಾತ್ರರಾದರು. ಶುದ್ಧವಾದ ಅದ್ವೈತ ಸಂಪ್ರದಾಯವನ್ನು ಎತ್ತಿ ಹಿಡಿದರು ಕ್ಷೀಣಿಸುತ್ತಿದ್ದ ವೈದಿಕ ಧರ್ಮಕ್ಕೆ ನವಚೈತನ್ಯವನ್ನಿತ್ತು ಅದನ್ನು ಭದ್ರವಾದ ತಳಹದಿಯ ಮೇಲೆ ಮತ್ತೆ ಸ್ಥಾಪಿಸಿವುದು ಆಚಾರ‌್ಯರ ಉದ್ದೇಶವಾಗಿತ್ತು. ಸಾಂಖ್ಯ, ವೈಶೇಷಿಕ, ತಾಂತ್ರಿಕಾದಿ ಮತಗಳ ಖಂಡಿಸಿ, ಅವುಗಳಲ್ಲಿದ್ದ ದೋಷಗಳನ್ನು ತೋರಿಸಿದರೇ ಹೊರತು ಹೊಸದಾಗಿ ಯಾವ ಮತವನ್ನೂ ಸ್ಥಾಪಿಸಲಿಲ್ಲ. ಯಾವ ಮತೀಯ ಚಿಹ್ನೆಯನ್ನೂ ಶಂಕರಾಚಾರ‌್ಯರು ಪ್ರತಿಪಾದಿಸಲಿಲ್ಲ.
ಜಗದೀಶ್ವರನಾದ ಭಗವಂತನು ಒಬ್ಬನೇ. ನಾಮರೂಪಗಳೆಲ್ಲವೂ ಭಕ್ತರ ಇಚ್ಛಾನುಗುಣವಾಗಿ ಕಲ್ಪಿತವಾದವು. ಶಿವ, ವಿಷ್ಣು, ಶಕ್ತಿ, ಗಣಪತಿ ಮುಂತಾದ ಯಾವ ದೇವತೆಯನ್ನಾದರೂ ಭಕ್ತಿಯಿಂದ ಪೂಜಿಸಬಹುದು. ಅದ್ವೈತವು ಪರಮಾರ್ಥವಾದರೂ ವ್ಯವಹಾರದಲ್ಲಿ ದೈತವೇ ಇರಬೇಕು. ಆದ್ದರಿಂದ ಕರ್ಮಾನುಷ್ಠಾನ, ದೇವತಾ ಭಕ್ತಿ ಮೊದಲಾದ ದ್ವೈತ ಮಾರ್ಗವೇ ಸಾಧಕನಿಗೆ ವಿಹಿತವಾಗಿದೆ ಎಂಬುದು ಆಚಾರ‌್ಯರ ನಿಲುವು. ಪಂಚಾಯತನ ಪೂಜಾ ಪದ್ಧತಿಯನ್ನು ತಿಳಿಸಿ ಸರ್ವಮತ ಸಮನ್ವಯವನ್ನು ಮಾಡಿದರು ಶ್ರೀ ಶಂಕರರು. ಅವರ ಅಸಾಧಾರಣ ಪರಿಶ್ರಮದಿಂದ ಈ ಭರತಖಂಡದಲ್ಲಿ ವೈದಿಕ ಮಾರ್ಗವು ಉಳಿದುಕೊಂಡಿತು.
ಯುಗ ಪುರುಷ ಶಂಕರಾಚಾರ್ಯ
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ್ಯಗಳು ಅರಿಷಡ್ವರ್ಗಗಳು ಎನಿಸಿವೆ. ಈ ಆರೂ ಮಾನವನಿಗೆ ಶತ್ರುಗಳು. ಅವು ನಿಶಾಚಾರರಾದ ಗೂಬೆ ಬಾವಲಿಗಳಂತಹವು. ಬೆಳಕನ್ನು ಸಹಿಸದು. ಮಾನವನ ಮನಸ್ಸು ಅಜ್ಞಾನವೆನ್ನುವ ಅಂಧಕಾರದಿಂದ ತುಂಬಿದೆ. ಆದ್ದರಿಂದ ಆ ಆರು ಶತ್ರುಗಳು ಅದರಲ್ಲಿ ಪ್ರವೇಶಿಸುವರು. ಈ ಅಂಧಕಾರವು ಕಲ್ಲುಬೀಸಿದರೆ ಓಡಿಹೋಗದು; ಕತ್ತಿಯಿಂದ ಇರಿದರೂ, ತುಪಾಕಿಯಿಂದ ಸುಟ್ಟರೂ ಅಂತ್ಯವಾಗುವುದಿಲ್ಲ. ದೀಪವನ್ನು ಬೆಳಗಿಸಿದರೆ ಮಾತ್ರ ಅದು ನಾಶವಾಗುವುದು. ಸಾಮಾನ್ಯವಾದ ಈ ಸತ್ಯವು ಶಂಕರರು ಬೋಧಿಸುವವರೆಗೂ ಕೆಲವರಿಗೆ ತಿಳಿಯಲೇ ಇಲ್ಲ. ಈ ದೇಶದ ಪ್ರಜೆಗಳ ದೃಷ್ಟಿ ಅಂಧಕಾರದಿಂದ ಆವೃತ್ತವಾಗಿದ್ದರಿಂದ ದಾರಿತಪ್ಪಿ ಏನೇನೋ ಲಕ್ಷದಲ್ಲಿಟ್ಟುಕೊಂಡು, ಅವುಗಳನ್ನು ಅನ್ವೇಷಿಸುವುದರಲ್ಲಿ ಮಗ್ನರಾಗಿ ಮುಖ್ಯ ಲಕ್ಷ್ಯವನ್ನೇ ಸೇರಲಾರದವರಾಗಿದ್ದಾರೆ. ಅಂಥವರಿಗೆ ಶಂಕರರು ಅದ್ವೈತವನ್ನು ಬೋಧಿಸಿ, ವೇದ, ಉಪನಿಷತ್ತು, ಶಾಸ್ತ್ರಗಳನ್ನು ಏಕಗ್ರೀವವಾಗಿ ಅಂಗೀಕರಿಸಿದರೆ ಅದೊಂದೇ ಸರಿಯಾದ ಮಾರ್ಗವೆಂದು ತಿಳಿಸಿ ಹೇಳಿದರು. ಜೀವನ, ಈಶ್ವರನು ಒಂದೇ, ಒಬ್ಬರೇ ವಿನಾ ಇಬ್ಬರಲ್ಲ ಎಂದು ಹೇಳುವ ಮತವೇ ಅದ್ವೈತ ಮತ.
ಶಂಕರರು ಚಿಕ್ಕಂದಿನಲ್ಲಿಯೇ ವಿಗ್ರಹಾರಾಧನೆಯನ್ನು ಮಾಡಿ, ಸಗುಣೋಪಾಸನೆಯ ಮಹಿಮೆಯನ್ನು ತಿಳಿದುಕೊಂಡಿದ್ದವರು. ಆದ್ದರಿಂದಲೇ ತಮ್ಮ ಜೀವಿತದ ಚರಮ ಭಾಗದಲ್ಲಿ ಸಗುಣೋಪಾಸನೆಯನ್ನು ಕೆಲವರಿಗೆ ಉಪದೇಶಿಸಿದರು. ಚಿಕ್ಕ ಮಕ್ಕಳಿಗೆ ಓದು ಕಲಿಸುವಾಗ, ಅಯಾ ರೂಪಗಳನ್ನು ಬರೆದು ತೋರಿಸಲು ಸ್ಲೇಟು, ಬಳಪಗಳನ್ನು ಉಪಯೋಗಿಸುವರು. ಅದೇ ರೀತಿ ಆಧ್ಯಾತ್ಮಿಕ ವಿದ್ಯೆ ಅಭ್ಯಸಿಸುವವರಿಗೆ, ಚಿಕ್ಕ ಮಕ್ಕಳಿಗೆ, ದೇವಾಲಯಗಳು, ವಿಗ್ರಹಗಳು, ದೇವತೆಗಳ ಚಿತ್ರಪಟಗಳು ಮೊದಲಾದುವಾಗಿವೆ. ಕಪ್ಪು ಹಲಗೆಮ ಬೋರ್ಡ್‌ಗಳು, ಆನೆಯ ರೂಪವಿರುವ ಪುಸ್ತಕಗಳು ಮೊದಲಾದ ಆಟದ ಸಾಮಾನುಗಳೊಂದಿಗೆ ಎಷ್ಟು ದಿನಗಳು ಆಡಿಕೊಂಡರೂ ನಿಜವಾದ ಆನೆಯ ರೂಪ ಸ್ವಭಾವಗಳು ನಿಮಗೆ ತಿಳಿಯದು. ಅವುಗಳಿಗೆ ಸಂಬಂಧಿಸಿದ ಅನುಭವವೂ ನಿಮಗೆ ಲಭಿಸದು. ನಿಜವಾದ ಆನೆಯನ್ನು ನೋಡಿದಾಗ ಅವು ನಿಮಗೆ ಲಭಿಸುವುವು. ಆದರೆ, ಭಗವತ್ ತತ್ವಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಅದು ನಿರ್ಗುಣ, ನೀವು ಗುಣಾತೀತರಾದಾಗ ಮಾತ್ರವೇ ಆ ನಿರ್ಗುಣ ತತ್ವವನ್ನು ಅರಿಯಬಲ್ಲಿರಿ.
ಶಂಕರರು ಲೋಕಕ್ಕೆ ವೈರಾಗ್ಯವನ್ನು ಬೋಧಿಸಲೆಳಿಸಿ, ಅದಕ್ಕೆ ಅರ್ಹತೆಯನ್ನುಗಳಿಸಲು ತಾವು ಸನ್ಯಾಸವನ್ನು ಸ್ವೀಕರಿಸಬೇಕೆಂದು ನಿಶ್ವಯಿಸಿಕೊಂಡರು. ಸನ್ಯಾಸ ಸ್ವೀಕಾರಕ್ಕೆ ತಾಯಿಯ ಅನುಮತಿ ಬೇಕು. ತನ್ನ ತಾಯಿಗೆ ತಾನೊಬ್ಬನೇ ಮಗನಾದ್ದರಿಂದ ಆಕೆ ಏಕಪುತ್ರ ಪ್ರೇಮಾತಿಶಯದಿಂದ ಸಮ್ಮತಿಸಲಾರಳೆಂದುಕೊಂಡು ಒಂದು ಉಪಾಯವನ್ನು ಮಾಡಿದರು. ಒಂದು ದಿನ ತಮ್ಮ ಮನೆಯ ಪಕ್ಕದಲ್ಲೆ ಇದ್ದ ಪೂರ್ಣಾ ನದಿಯಲ್ಲಿ ಸ್ನಾನ ಮಾಡುತ್ತಾ, ‘‘ಅಮ್ಮಾ! ನನ್ನ ಕಾಲನ್ನು ಮೊಸಳೆ ಹಿಡಿದುಕೊಂಡಿದೆ’’ ಎಂದು ಜೋರಾಗಿ ಕಿರುಚಿದರು. ಅದು ನಿಜವೇ, ಪೂರ್ವದಲ್ಲಿ ಗಜೇಂದ್ರನ ಕಾಲನ್ನು ಹಿಡಿದುಕೊಂಡಿತು. ಆದರೆ ತನ್ನನ್ನು ನಿಜವಾಗಿ ಹಿಡಿದುಕೊಂಡಿದ್ದು ವಿಷಯಗಳ ಆಸೆಯನ್ನೇ ಹೊರತು ಮೊಸಳೆಯಲ್ಲ. ಅದನ್ನು ಶಂಕರರು ಆ ವಿಧವಾಗಿ ಕಾಣುವಂತೆ ಮಾಡಿದರು. ಕುಮರನ ಕೂಗನ್ನು ಕೇಳಿ ತಾಯಿ ಓಡಿ ಬಂದು ತನ್ನ ಮಗನಿಗೆ ಸಂಭವಿಸಿರುವ ವಿಪತ್ತನ್ನು ನೋಡಿ ಅಳತೊಡಗಿದಳು. ಆಗ ಶಂಕರರು, ‘‘ಅಮ್ಮಾ! ನಾನು ಸನ್ಯಾಸ ದೀಕ್ಷೆ ವಹಿಸಲು ನೀನು ಅನುಮತಿ ಕೊಟ್ಟ ಹೊರತು ಈ ಮೊಸಳೆ ನನ್ನ ಕಾಲು ಬಿಡುವುದಿಲ್ಲ’’ ಎಂದರು. ಅದೂ ನಿಜವೇ. ಪ್ರಪಂಚ ಸಂಬಂಧವನ್ನು ಬಿಡಿಸಿಕೊಳ್ಳುವುದು, ಬಂಧನದಿಂದ ತನ್ನನ್ನೂ ತಾನು ಮುಕ್ತಿಗೊಳಿಸಿಕೊಳ್ಳುವುದು, ಸನ್ಯಾಸಿಯಾಗಿಯಾದರೂ ಸರಿ, ತನ್ನ ಮಗನು ಜೀವಂತವಾಗಿದ್ದರೆ ಸಾಕು ಎಂದು ಶಂಕರರ ತಾಯಿ ಅನುಮತಿ ಇತ್ತಳು. ತಕ್ಷಣವೇ ಮೊಸಳೆ ಹಿಡಿತವನ್ನು ಬಿಟ್ಟು ಅಂತರ್ಧಾನವಾಇತು. ಶಂಕರರು ಮೋಕ್ಷ ರಹಸ್ಯವನ್ನು ತಿಳಿಸುವ ಗುರುವನ್ನು ಹುಡುಕಿಕೊಂಡು ಆ ನದಿಯ ದಡದಿಂದ ಹಾಗೇ ಹೊರಟು ಹೋದರು. ಶಂಕರರು ಜೀವಿಸಿದ್ದು ಮೂವತ್ತೆರಡು ವರ್ಷಗಳು ಮಾತ್ರವಾದರೂ ಆ ಸ್ವಲ್ಪ ಕಾಲದಲ್ಲಿಯೇ ಅವರು, ಅಂದು ಬಹು ವಿಧಗಳಲ್ಲಿ ನಡೆಯುತ್ತಿದ್ದ ಆರಾಧನೆಯ ವಿಧಾನವನ್ನು ಸಂಸ್ಕರಿಸಿ ಸಮೀಕರಣ ಮಾಡಿ ಎಲ್ಲವನ್ನೂ ವೇದಾಂತ ತತ್ವದ ಏಕಸಿದ್ಧಾಂತವಾದ ಅದ್ವೈತದ ಒಳಗೆ ಅಳವಡಿಸಿದರು.
ವೇದಗಳ ಮಹಾವಾಕ್ಯಗಳು ತಮ್ಮ ಸರಿಯಾದ ನಿಜಾರ್ಥದೊಂದಿಗೆ ಎಲ್ಲರ ಹೃದಯಾಂತರಂಗದೊಳಗೆ ದೃಢವಾಗಿ ನಿಲ್ಲುವಂತೆ ಭಾಷ್ಯಗಳನ್ನು ರಚಿಸಿದರು ಶಂಕರರು. ‘‘ಅಹಂ ಬ್ರಹ್ಮಾಸ್ಮಿ’’, ‘‘ತತ್ವಮಸಿ’’, ‘‘ಪ್ರಜ್ಞಾನಂ ಬ್ರಹ್ಮಾ’’, ‘‘ಆಯಮಾತ್ಮಾ ಬ್ರಹ್ಮಾ’’ ಮೊದಲಾದ ವಾಕ್ಯಗಳೆಲ್ಲಾ ಸುಲಭವಾದ ಭಾಷೆಯಲ್ಲಿ ತರ್ಕಸಮ್ಮತವಾದ ಮಧುರ ಕವಿತಾ ರೂಪದಲ್ಲಿ ಜಿಜ್ಞಾಸುಗಳಿಗೆ ಬೋಧಿಸಲಾಗಿದೆ. ಶಂಕರರ ಅದ್ವೈತವೇ ದೇವಾಂತದಲ್ಲಿ ಕೊನೆ ಸಿದ್ಧಾಂತ. ಅದೇ ಪರಮ ಸತ್ಯ. ಆದ್ದರಿಂದಲೇ ವಿಜ್ಞಾನ ಶಾಸ್ತ್ರವು ಹೊಸದಾಗಿ ಕಂಡು ಹಿಡಿದಿರುವ ಸಿದ್ಧಾಂತಗಳಿಗಾಗಲೀ ಮೇಧಾವಿಗಳ ಹೇತುವಾದಗಳಿಗಾಗಲೀ ಚಲಿಸದೇ ದೃಢವಾಗಿ ಸುಸ್ಥಿರವಾಗಿ ನಿಂತಿದೆ. ಅದ್ವೈತವು ದ್ರವ್ಯಶಕ್ತಿಗಳಿಗೂ ಮಾಯಾವರಣದಿಂದ ಕೂಡಿರುವಂತೆ ಜಗತ್ತಿಗೂ ಇರುವ ಏಕತೆಯನ್ನು ಹೇಳುವುದು. ಆ ಮಾಯೆಯೂ ಸಹ ಆದಿಪುರುಷ ನಿರ್ಮಿತವೇ. ಮಾನವನ ಮಾನಸದಿಂದ ಅಹಂಕಾರವೆನ್ನುವ ದೈತವನ್ನು ತೊಲಗಿಸುವುದಕ್ಕೂ ಅದ್ವೈತ ಭಾವವನ್ನು ಸಿದ್ಧಿಸಿಕೊಳ್ಳುವುದಕ್ಕೂ ತೀವ್ರವಾದ ಸಾಧನೆಯು ಆತ್ಯಾವಶ್ಯವೆಂದು ಶಂಕರರಿಗೆ ತಿಳಿದಿತ್ತು. ಆದ್ದರಿಂದಲೇ ಅದಕ್ಕೆ ಪ್ರಥಮ ಶಿಕ್ಷಣವಾಗಿ ಯೋಗ, ಭಕ್ತಿ, ಕರ್ಮಸೂತ್ರಗಳನ್ನು ಬೋಧಿಸಿದರು. ಆ ಮೂರು ಬುದ್ಧಿಗೆ ವಿಕಾಸವನ್ನುಂಟುಮಾಡಿ, ಭಾವ ವಿಕಾರಗಳನ್ನು ತೊಲಗಿಸಿ ಹೃದಯವನ್ನು ಪರಿಶುದ್ಧಗೊಳಿಸಿ, ವ್ಯಕ್ತಿಗೂ ಜಗತ್ತಿಗೂ ಇರುವ ಸತ್ಯವಾದ ಏಕತೆಯನ್ನು ತಿಳಿಯಪಡಿಸುವುದು. ಲೋಕದಲ್ಲಿರುವ ಪ್ರತಿ ಪ್ರದೇಶದಲ್ಲಿಯೂ ಪ್ರತಿ ಪದಾರ್ಥದಲ್ಲಿಯೂ ಸರ್ವತ್ರ, ಸರ್ವರಲ್ಲಿಯೂ ಭಗವಂತನ ಕರುಣೆ ತುಂಬಿದೆ ಎನ್ನುವ ಜ್ಞಾನದ ಅರಿವೇ ಅದ್ವೈತ.
ಶಂಕರರು ಸಾಧನೆಗೆ ಮೊಟ್ಟ ಮೊದಲಿನ ಹಂತವೇ ಸತ್ಸಂಗವೆಂದು ಹೇಳಿರುವುದು. ಸತ್ಸಂಗವನ್ನು ನಿಸ್ಸಂಗತ್ವವನ್ನು ಜೀವನದಲ್ಲಿ ಅಳವಡಿಸಿದರೆ ಮೌನದಲ್ಲಿಯೇ ಏಕಾಂತವಾಸದಲ್ಲಯೂ ಆಸಕ್ತಿ ಹುಟ್ಟಿಸುವುದು. ಅದು ಮೋಹವನ್ನು ದೂರ ಮಾಡುವುದು. ಪ್ರಾರ್ಥನೆಗೆ ಭಗವದ್ಗೀತೆಯನ್ನು ಕೇಳಿದುದರಿಂದ ಇದೇ ಫಲವು ಸಿದ್ಧಿಸಿತು. ಅದು ಲಭಿಸಿದಾಗ ನಿಶ್ವಲ ತತ್ವವು ದೃಢವಾಗುವುದು. ಸ್ಥಿರವಾಗುವುದು. ತತ್ ಅದು ಎಂದರೆ ಪರಮಾತ್ಮ ತ್ವಂ ನೀನು, ಎಂದರೆ ಜೀವಾತ್ಮ ಎನ್ನುವದರ ಪರಮಾರ್ಥ ಎಂದರೆ ಇವೆರಡಕ್ಕೂ ಇರುವ ಏಕತ್ವವನ್ನು ಗುರುತಿಸುವುದೇ ಅರಿಯುವುದೇ, ಮುಕ್ತಿ ಪ್ರಾಪ್ತಿ.
ಶ್ರೀ ಶಂಕರಾಚಾರ್ಯರ ಸಾಧನೆಗಳ ಕಿರು ಮಾಹಿತಿ
ವೈಶಾಖ ಶುದ್ಧ ಪಂಚಮಿಯಂದು ಶ್ರೀ ಶಂಕರ ಜಯಂತಿ ಈ ದಿನವನ್ನು ಭಾರತ ಸರ್ಕಾರ ದಾರ್ಶನಿಕರ ದಿನ ಎಂದು ಘೋಷಿಸಿದೆ
1. ಪರಿಪೂರ್ಣ ನಾಮ- ಶ್ರೀ ಆದಿ ಶಂಕರಾಚಾರ್ಯ ವಿಶ್ವಕರ್ಮ
2. ಕಾಲ: ಕ್ರಿ.ಶ.788-820
3. ತಾಯಿ-ತಂದೆ: ಆರ್ಯಾಂಬಾ ಶಿವಗುರು
4. ಜನ್ಮಸ್ಥಳ: ಕೇರಳದ ಪೂರ್ಣ ನದಿ ತೀರದ ಕಾಲಡಿ
5. ಸನ್ಯಾಸ ಸ್ವೀಕಾರ: ಎಂಟನೆಯ ವರ್ಷ
6. ಗುರುಗಳು: ಶ್ರೀ ಗೋವಿಂದ ಭಗವತ್ಪಾದರು
7. ಪ್ರತಿಪಾದಿಸಿದ ದರ್ಶನ: ಅದ್ವೈತ ಸಿದ್ಧಾಂತ
8. ಪಂಥಗಳು: ಶಿವ,ವೈಷ್ಣವ, ಶಾಕ್ತ, ಸೌರ ಗಾಣಪತ್ಯ, ಕೌಮಾರ.
9. ಪಂಚಾಯತನ ದೇವತೆಗಳು: ಸೂರ್ಯ, ಗಣಪತಿ, ದುರ್ಗೆ, ಶಿವ, ವಿಷ್ಣು
10. ಶಂಕರರ ಮಾತೃಭಾಷೆ : ಮಲಯಾಳಂ
11. ಶಂಕರರ ಸಂಪರ್ಕ ಭಾಷೆ: ಸಂಸ್ಕೃತ
12. ಚಿನ್ನದ ನೆಲ್ಲಿಕಾಯಿ ಮಳೆ ಸುರಿಸಿದ ಸ್ತೋತ್ರ: ಕನಕಧಾರ ಸ್ತೋತ್ರ
13. ನೆಲ್ಲಿಕಾಯಿ ಭಿಕ್ಷೆಯಿತ್ತ ಮನೆಯ ಇಂದಿನ ಹೆಸರು: ಸ್ವರ್ಣತ್ತಿಲ್ಲಂ
14. ಗುರುದ್ರೋಹ: ತುಷಾಗ್ನಿಯಲ್ಲಿ ಆತ್ಮ ಸಮರ್ಪಿಸಿಕೊಂಡವರು, ಕುಮಾರಿಲ ಭಟ್ಟರು (ಕುಮಾರ್ಲ ಭಾಟ್)
15. ಶಂಕರರ ಶಿಷ್ಯಂದಿರು ಮತ್ತು ಪೀಠಗಳ ಪ್ರಥಮಾಚಾರ್ಯರು: ಪದ್ಮಪಾದಚಾರ್ಯ, ಹಸ್ತಾಮಲಕಾಚಾರ್ಯ, ತೋಟಕಾಚಾರ್ಯ, ಸುರೇಶ್ವರಾಚಾರ್ಯ
16. ಪದ್ಮಪಾದಾಚಾರ್ಯರ ಪೂರ್ವನಾಮ: ಸನಂದನ
17. ಸುರೇಶ್ವರಾಚಾರ್ಯರ ಪೂರ್ವನಾಮ: ಮಂಡನ ಮಿಶ್ರ
18. ರಚಿಸಿದ ಗ್ರಂಥಗಳು: 54
19. ರಚಿಸಿದ ಕೊನೆಯ ಗ್ರಂಥ: ವಿವೇಕ ಚೂಡಾಮಣಿ
20. ಪ್ರಸ್ಥಾನತ್ರಯಗಳು: ಬ್ರಹ್ಮಸೂತ್ರ, ಭಗವದ್ಗೀತೆ, ಉಪನಿಷತ್ತುಗಳು
21. ಬ್ರಹ್ಮ ಸೂತ್ರ: 555 ಸೂತ್ರಗಳು
22. ಭಗವದ್ಗೀತೆ: 18 ಅಧ್ಯಾಯ (ವ್ಯಾಖ್ಯಾನ) 700 ಶ್ಲೋಕಗಳು
23. ಉಪನಿಷತ್ತುಗಳು: 10
24. ರಚಿಸಿದ ಸ್ತೋತ್ರಗಳು: 72
25. ಕಾಶ್ಮೀರದಲ್ಲಿ ಕುಷ್ಠರೋಗಿಯ ಮೋಕ್ಷಕ್ಕಾಗಿ ಹೇಳಿದ ಸ್ತೋತ್ರ: ಏಕಶ್ಲೋಕಿ (ಕಿಂ ಜ್ಯೋತಿಸ್ತವ)
26. ಕಾಶಿಯಲ್ಲಿ ರಚಿಸಿದ ಸ್ತೋತ್ರಗಳು: 1. ಕಾಲಭೈರವಾಷ್ಟಕ, 2.ಮನೀಷಾ ಪಂಚಕ, 3.ಅನ್ನಪೂರ್ಣ ಸ್ತೋತ್ರ, 4.ಕಾಶಿ ಸ್ತೋತ್ರ
27. ಚತುರಾಮ್ನಾಯ ಪೀಠಗಳು: ಮತ್ತು ಪೀಠಗಳ ಪ್ರಥಮಾಚಾರ್ಯರು:
ಶೃಂಗೇರಿ ಪೀಠ – ಸುರೇಶ್ವರಾಚಾರ್ಯರು – ದಕ್ಷಿಣ
ಜಗನ್ನಾಥ ಪೀಠ – ಪದ್ಮಪಾದಾಚಾರ್ಯರು – ಪೂರ್ವ
ದ್ವಾರಕಾ ಪೀಠ – ಹಸ್ತಾಮಲಕಾಚಾರ್ಯರು – ಪಶ್ಚಿಮ
ಜ್ಯೋತಿಷ್ಮತಿ ಪೀಠ – ತೋಟಕಾಚಾರ್ಯರು – ಉತ್ತರ
29. ಪೀಠಗಳ ದೇವದೇವಿಯರು
1. ಚಂದ್ರಮೌಳೇಶ್ವರ – ಶಾರದ ದೇವಿ
2. ಜಗನ್ನಾಥ – ವಿಮಲಾದೇವಿ
3. ಸಿದ್ದೇಶ್ವರ – ಭದ್ರಕಾಳಿ
4. ನಾರಾಯಣ – ಪೂರ್ಣದೇವಿ
30. ಪವಿತ್ರ ತೀರ್ಥಗಳು – ತುಂಗಾ, ಗೋಮತಿ, ಅಲಕಾನಂದ, ಪೂರ್ವ ಸಮುದ್ರ
31. ಸರ್ವಜ್ಞ ಪೀಠಾರೋಹಣ: ಕಾಶ್ಮೀರದ ಶಂಕರ ಗಿರಿಯಲ್ಲಿರುವ ಶಾರದ ಮಂದಿರ
32. ಶಂಕರರ ಮಹಾ ಸಿದ್ಧಾಂತ: ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ
ಅರ್ಥ: ಬ್ರಹ್ಮವು ಸತ್ಯ, ಜಗತ್ತು ಮಿಥ್ಯಾ ಜೀವವು ಬ್ರಹ್ಮಕ್ಕಿಂತ ಬೇರೆಯಲ್ಲ
33. ಶಂಕರರ ಸಾಧನೆ: 1.ಅಷ್ಟವರ್ಷೇ ಚತುರ್ವೇದಿ – 8 ನೇ ವರ್ಷಕ್ಕೆ 4 ವೇದಗಳ ಅಧ್ಯಯನ
2. ದ್ವಾದಶೇ ಸರ್ವಶಾಸ್ತ್ರವಿತ್ – 12 ನೇ ವರ್ಷಕ್ಕೆ ಸಕಲ ಶಾಸ್ತೃಗಳ ಪಾಂಡಿತ್ಯ
3. ಷೋಡಶೇ ಕೃತವಾನ್ ಭಾಷ್ಯಂ – 16 ನೇ ವರ್ಷಕ್ಕೆ ಭಾಷ್ಯ ರಚನೆ
4. ಮುವತ್ತೆರಡನೆ ವರ್ಷಕ್ಕೆ ದೇಹತ್ಯಾಗ
34. ದೇಹತ್ಯಾಗ ಕೇದಾರನಾಥ – ವೈಶಾಖ ಶುದ್ಧ ದ್ವಾದಶಿ
Get in Touch With Us info@kalpa.news Whatsapp: 9481252093
Discussion about this post