ಕಲ್ಪ ಮೀಡಿಯಾ ಹೌಸ್ | ನಂಜನಗೂಡು |
ಒಂದು ತಿಂಗಳ ಅವಧಿಯಲ್ಲಿ ಮೂವರನ್ನು ಕೊಂದು ತಿಂದಿದ್ದ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ನಂಜನಗೂಡು ತಾಲೂಕು ಬಳ್ಳೂರುಹುಂಡಿ ಗ್ರಾಮದ ಬಳಿ ಕಲ್ಲಹಾರ ಕಂಡಿ ಎಂಬ ಸ್ಥಳದಲ್ಲಿ ಸುಮಾರು 10 ವರ್ಷದ ಗಂಡು ಹುಲಿಯನ್ನು ನಿನ್ನೆ ತಡರಾತ್ರಿ 1.40ರ ವೇಳೆಗೆ ಸೆರೆ ಹಿಡಿದಿದ್ದಾರೆ.
ಈ ಭಾಗದಲ್ಲಿ ಹಲವರನ್ನು ಬಲಿ ಪಡೆದಿದ್ದ ಈ ಹುಲಿ ಮಹದೇವ ನಗರದಲ್ಲಿ ಓರ್ವ ದನಗಾಹಿಯನ್ನು, ಬಳ್ಳೂರು ಹುಂಡಿಯಲ್ಲಿ ರತ್ನಮ್ಮ ಎನ್ನುವವರನ್ನು ಕೊಂದು ತಿಂದಿತ್ತು. ಈ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದ ಈ ಭಾಗದ ಜನರು ಹುಲಿಯನ್ನು ಸೆರೆ ಹಿಡಿಯವಂತೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
Also read: ರೇಡಿಯೋ ಶಿವಮೊಗ್ಗ ಕನ್ನಡ ರಸಪ್ರಶ್ನೆಯ ವಿಜೇತರ ಹೆಸರು ಪ್ರಕಟ
ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಎಚ್ಚೆತ್ತ ಅರಣ್ಯ ಇಲಾಖೆ ಹುಲಿಯನ್ನು ಹಿಡಿಯಲು ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಿ, ಬೋನು ಇರಿಸಿತ್ತು. ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ನಿನ್ನೆ ರಾತ್ರಿ 1.40ರ ವೇಳೆಗೆ ಹುಲಿ ಸೆರೆ ಸಿಕ್ಕಿದ್ದು, ನರಭಕ್ಷಕ ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡಲಾಗಿದೆ. ಸೆರೆ ಸಿಕ್ಕ ಹುಲಿಯನ್ನು ಮೈಸೂರಿನ ಕೂರ್ಗಳ್ಳಿ ಬಳಿ ಇರುವ ಹುಲಿಗಳ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ.
ಬಂಡಿಪುರ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕ ರಮೇಶ್ ಕುಮಾರ್ ಹಾಗೂ ಹೆಡಿಯಾಲ ಎಸಿಎಫ್ ಪರಮೇಶ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆ ನಡೆಸಿದ್ದರು.
ಈ ಭಾಗದಲ್ಲಿ ಇನ್ನೂ ಹಲವು ಹುಲಿಗಳಿವೆ ಎಂದು ಹೇಳಲಾಗಿದ್ದು, ಅರಣ್ಯ ಇಲಾಖೆ ಕಾರ್ಯಚರಣೆ ಮುಂದುವರೆಸಲಿದೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post