ನವದೆಹಲಿ: ದೇಶದ ಸಾರ್ವಜನಿಕ ಚುನಾವಣೆಗೆ ಇನ್ನು ಏಳು ತಿಂಗಳು ಬಾಕಿ ಉಳಿದಿರುವ ಬೆನ್ನಲ್ಲೇ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ/ಎನ್‌ಡಿಎ ಈ ಬಾರಿಯೂ ಸಹ ದಿಗ್ವಿಜಯ ಬಾರಿಸಲಿದೆ ಎಂದು ವರದಿಯೊಂದು ಹೇಳಿದೆ.
ಈ ಕುರಿತಂತೆ ಎಬಿಪಿ, ಸಿ ವೋಟರ್ ಸಮೀಕ್ಷಾ ವರದಿ ಬಹಿರಂಗಗೊಂಡಿದ್ದು, ಇದರಂತೆ ಬಿಜೆಪಿ 276 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರದ ಗದ್ದುಗೆಯೇರಲಿದ್ದು, 112 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಯುಪಿಎ ಮತ್ತೆ ಪ್ರತಿಪಕ್ಷದಲ್ಲೇ ಕೂರಲಿದೆ.
ಈ ವರದಿಯಂತೆ ಮುಂದಿನ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಸಮೀಕ್ಷೆಯ ಫಲಿತಾಂಶಗಳಿಂದ ನಿಚ್ಚಳವಾಗಿದೆ.
ಇನ್ನು ಯುಪಿಎ ಹಿಂದಿನ ಚುನಾವಣೆಗಿಂತ ಸುಧಾರಣೆ ಕಾಣಲಿದ್ದು 115 ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ. ಆದರೆ ಯುಪಿಎಗಿಂತ ಇತರರು 151 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಯುಪಿಎಗಿಂತಲೂ ಹೆಚ್ಚು ಬಲಾಢ್ಯರಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಪ್ರಮುಖವಾಗಿ, ಕರ್ನಾಟಕದಲ್ಲಿ ಬಿಜೆಪಿ 2014ರ ಚುನಾವಣೆಗಿಂತ ಒಂದು ಹೆಚ್ಚು ಸ್ಥಾನದಲ್ಲಿ ಗೆಲ್ಲಲಿದೆ. 18 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಅಲ್ಲದೆ, ಮತ ಹಂಚಿಕೆ ಕೂಡ ಶೇ.43 ರಿಂದ ಶೇ.46ಕ್ಕೆ ಏರಿಕೆಯಾಗಲಿದೆ.
ಕಾಂಗ್ರೆಸ್ ಹಿಂದಿಗಿಂತ 2 ಕಡಿಮೆ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ಅಂದರೆ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು, ಜೆಡಿಎಸ್ ಹೆಚ್ಚುವರಿ ಒಂದು ಕ್ಷೇತ್ರದಲ್ಲಿ ಗೆಲ್ಲಲಿದೆ. ಅಂದರೆ 3 ಕಡೆ ಜೆಡಿಎಸ್ ಗೆಲುವು ಸಾಧಿಸಲಿದೆ. ಕಾಂಗ್ರೆಸ್ನ ಮತ ಹಂಚಿಕೆ ಶೇ. 40 ರಿಂದ ಶೇ. 37.1 ಕ್ಕೆ ಕುಸಿದರೆ, ಜೆಡಿಎಸ್‌ನ ಮತ ಹಂಚಿಕೆ ಶೇ. 11 ರಿಂದ ಶೇ.13.4ಕ್ಕೆ ಏರಲಿದೆ ಎಂದು ಸಮೀಕ್ಷೆ ಹೇಳಿದೆ.
Discussion about this post