ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ತುಳುನಾಡಿನ ದಕ್ಷಿಣ ಕನ್ನಡ ಜಿಲ್ಲೆಯ ಪೆರಾರದ ಪುಣ್ಯ ಮಣ್ಣಿನಲ್ಲಿ ನಾರಾಯಣ ಪೂಜಾರಿ ಹಾಗೂ ಲಲಿತಾ ನಾರಾಯಣ ಪೂಜಾರಿ ದಂಪತಿಗಳ ಸುಪುತ್ರನಾಗಿ ಜನಿಸುತ್ತಾರೆ ನವೀನ್ ಕುಮಾರ್ ಪೆರಾರ.
ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಪದವಿಯ ಮೊದಲನೆಯ ವರ್ಷದಲ್ಲಿ ಓದುತ್ತಿರುವಾಗಲೇ ತುಳು ಭಾಷೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಸಣ್ಣದಾದೊಂದು ಪ್ರಯತ್ನದ ರೂಪದಲ್ಲಿ ಪೆರಾರದ ಕುರಿತಾಗಿ ತುಳು ಲೇಖನವನ್ನು ಬರೆಯುತ್ತಾ ಬರಹ ಲೋಕದ ಯಾತ್ರೆಗೆ ಮೊದಲ ಹೆಜ್ಜೆಯನ್ನಿಡುತ್ತಾ ತನ್ನ ವಿದ್ಯಾಭ್ಯಾಸದೊಂದಿಗೆ ಇನ್ನಿತರ ಬರಹಗಳನ್ನು ಬರೆಯುತ್ತಿದ್ದರು.
ಚಿಕ್ಕಂದಿನಿಂದಲೇ ತುಳುನಾಡಿನ ಸಂಸ್ಕೃತಿ ಹಾಗೂ ತುಳು ಭಾಷೆಯ ಮೇಲೆ ಅತೀವ ಅಕ್ಕರೆ ಅಭಿಮಾನವನ್ನು ಹೊಂದಿದ್ದ ಇವರು ಬರೆದ ಮೊದಲನೆಯ ತುಳು ನಾಟಕದ ಹೆಸರು ’ಬರೆದಾತ್ತ್‌ಂಡ್ ಒಚ್ಚೆರಾಪುಜಿ’ ಕುಸಾಲ್ದ ಕಲಾವಿದೆರ್ ಸುಂಕದಕಟ್ಟೆ ನಾಟಕ ಬಳಗದ ಕಲಾವಿದರು ಈ ನಾಟಕವನ್ನು ಮುಂಬಯಿ, ಕೇರಳ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಪ್ಪತೈದು ಪ್ರದರ್ಶನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಮುರುಘೇಂದ್ರ ಬಂಟ್ವಾಳ ಇವರ ಮುತುವರ್ಜಿಯಲ್ಲಿ ನಡೆದ ’ತುಳು ನಾಟಕ ಸ್ಪರ್ಧೆ 2019’ಗೆ ಆಯ್ಕೆಯಾಗಿ ತೀರ್ಪುಗಾರರ ಮೆಚ್ಚುಗೆ ಪ್ರಶಸ್ತಿಯ ಹೆಗ್ಗಳಿಕೆಯನ್ನೂ ಸಹ ಪಡೆದಿದೆ. ಇವರು ರಚಿಸಿದ ಎರಡನೇ ನಾಟಕ ’ಬದುಕುನು ಎಂಚ!?ಮೂರನೆ ನಾಟಕ ’ಕಥೆ ಬೇತೆನೇ!’ ಕುಸಾಲ್ದ ಕಲಾವಿದೆರ್ ಸುಂಕದಕಟ್ಟೆ ನಾಟಕ ಬಳಗದ ಕಲಾವಿದರಿಂದ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಶ್ರೀಯುತ ನವೀನ್ ಕುಮಾರ್ ಪೆರಾರ ನಾಟಕ ರಚನೆಕಾರರು ಮಾತ್ರವಲ್ಲದೆ ಸ್ವತಃ ಮುಖಕ್ಕೆ ಬಣ್ಣ ಹಚ್ಚಿ ಸುಮಾರು ನಲ್ವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ ಅನುಭವವನ್ನೂ ಹೊಂದಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಆಯೋಜಿಸಿದ್ದ ’ತುಳುನಾಡ್’ದ ಕ್ಷೇತ್ರ ಪರಿಚಯ’ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನದೊಂದಿಗೆ ಗಣ್ಯರ ಸಮ್ಮುಖದಲ್ಲಿ ಪುರಸ್ಕರಿಸಲ್ಪಟ್ಟಿದ್ದಾರೆ ಎನ್ನುವುದು ನಮಗೆಲ್ಲರಿಗೂ ತುಂಬಾ ಹೆಮ್ಮೆಯ ವಿಷಯ. ತುಳು ಭಾಷಣ,ಕಾಂತಬಾರೆ ಬೂದಬಾರೆ, ಮಾಯಂದಲ್, ಕಲ್ಲುರ್ಟಿ ಕಲ್ಕುಡ ತುಳುನಾಡಿನ ದೈವದೇವರಿನ ಕುರಿತಾದ ತುಳು ಚಾರಿತ್ರಿಕ ಪ್ರಹಸನ, ಪೆರಾರದ ಜಾತ್ರೆಯ ವೈವಿಧ್ಯಮ ವರ್ಣನೆಯನ್ನು ವರ್ಣಿಸಿ ಇವರು ರಚಿಸಿದ ಪದ್ಯ ’ಯುಟ್ಯೂಬ್’ನಲ್ಲಿ ಪ್ರಸಾರವಾಗಿ ಜನಮನ ಗೆದ್ದಿದೆ. ಹಲವಾರು ಕಾರ್ಯಕ್ರಮಗಳ ಸವಿವರದ ವಿಮರ್ಶಾತ್ಮಕ ಬರಹಗಳು ಇವರ ಲೇಖನಿಯಲ್ಲಿ ಮೂಡಿ ಬಂದಿವೆ.
ಜನ ಜಾಗೃತಿ, ಸಮಾಜಕ್ಕೆ ಸಕಾರಾತ್ಮಕವಾದ ಸಂದೇಶಗಳನ್ನು ತಲುಪಿಸಿ ತಿಳಿ ಹೇಳುವಂತಹ ತುಳುನಾಡಿನ ಸಂಸ್ಕೃತಿ ತುಳು ಭಾಷೆಯನ್ನು ಉಳಿಸಿ ಬೆಳೆಸಲು ಪ್ರೇರಾತ್ಮಕವಾದ ಸುಮಾರು ನೂರ ಐವತ್ತು ತುಳು ಕವನಗಳನ್ನು ರಚಿಸಿ ಜಾಲಾತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸಮಾಜದಲ್ಲಿರುವ ಹೊಸ ಪ್ರತಿಭೆಗಳನ್ನು ಸಮಾಜಮುಖಕ್ಕೆ ಗುರುತಿಸುವಂತಹ ಇವರ ಪರಿಚಯ ಲೇಖನಗಳು ವಿಜಯವಾಣಿ, ಟೈಮ್ಸ್ ಆಫ್ ಕುಡ್ಲ ಹಾಗೂ ಉಡಲ್ ತುಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ತುಳು ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ತುಳು ಪ್ರಶ್ನೋತ್ತರ ಕಾರ್ಯಕ್ರಮಗಳನ್ನು ರಚಿಸಿ ಪ್ರೌಢಶಾಲೆ ಹಾಗೂ ಕಾಲೇಜು ಮಟ್ಟದಲ್ಲಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ತುಳುನಾಡಿನ ಸಂಸ್ಕೃತಿ ಹಾಗೂ ದೈವಾರಾಧನೆಯ ವಿಷಯದಲ್ಲಿ ಮೂಡುಬಿದಿರೆಯ ಶ್ರೀ ಧವಳಾ ಕಾಲೇಜಿನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ತುಳುನಾಡಿನ ದೈವದೇವರಿನ ಚರಿತ್ರೆಯ ಕುರಿತಾಗಿ ಅಧ್ಯಯನ, ದೈವದೇವರ ಪೂಜೆ ಸೇವಾಕಾರ್ಯಗಳನ್ನು ಮಾಡುತ್ತಾ ತನಗೆ ತಿಳಿದಷ್ಟು ದೈವಾರಾಧನೆಯ ಮಾಹಿತಿಗಳನ್ನು ಇತರರಲ್ಲಿ ಹಂಚಿಕೊಳ್ಳುತ್ತಾ ತನಗೆ ಸ್ವಂತ ಗೆದ್ದೆ ಇಲ್ಲದಿದ್ದರೂ ಭತ್ತದ ಬೇಸಾಯಕ್ಕಾಗಿ ಬೇರೆಯವರ ಗೆದ್ದೆಯನ್ನು ಗೇಣಿಯ ಸ್ವರೂಪದಲ್ಲಿ ಪಡೆದುಕೊಂಡು ತಾನೇ ಸ್ವತಃ ಬೆವರು ಸುರಿಸಿ ಗೆದ್ದೆಯಲ್ಲಿ ದುಡಿದು ವರ್ಷ ಇಡೀ ಸಾಕಾಗುವಷ್ಟು ಭತ್ತದ ಕೃಷಿಯನ್ನು ಬೆಳೆಸಿದ ಹೆಮ್ಮೆ ಇವರಿಗಿದೆ.
ಇವರ ಸಾಧನೆಯನ್ನು ಗುರುತಿಸಿ ಗೌರವಿಸಿದ ಸಂಘ ಸಂಸ್ಥೆಗಳನ್ನು ನೆನಪಿಸಿಕೊಳ್ಳುತ್ತಾ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ತುಳುನಾಡಿನ ಸರ್ವ ಕ್ಷೇತ್ರಗಳಿಗೆ ತನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಮನೋಭಾವನೆಯನ್ನು ಹೊಂದಿದ ಯಕ್ಷಪ್ರೇಮಿಯಾದ ಇವರಿಗೆ ಒಂದು ಯಕ್ಷಗಾನ ಪ್ರಸಂಗ ಹಾಗೂ ಚಲನಚಿತ್ರ ಕಥೆಯನ್ನು ಬರೆಯಬೇಕೆಂಬ ಮಹದಾಸೆಯಿದೆ.
ತುಳುನಾಡಿನ ಸಂಸ್ಕೃತಿ ತುಳು ಭಾಷೆಯ ಮೇಲೆ ಅತೀವ ಅಕ್ಕರೆ ಅಭಿಮಾನದಿಂದ ತುಳು ಸಾಹಿತ್ಯ ದುಡಿಮೆಯಲ್ಲಿ ತನ್ನನ್ನು ತೊಡಗಿಸಿಕೊಂಡು ನಿಸ್ವಾರ್ಥ ಮನೋಭಾವನೆಯಿಂದ ಕಲಾ ಸಾಹಿತ್ಯ ಸೇವೆಗೈಯುತ್ತಿರುವ ಇವರು ಪ್ರಸ್ತುತವಾಗಿ ’ದೈವ ನಿರೆಲ್’ ಎಂಬ ತುಳು ಧಾರವಾಹಿಯನ್ನು ಬರೆಯುತ್ತಿದ್ದಾರೆ. ಇವರ ಲೇಖನಿಯಿಂದ ಇನ್ನಷ್ಟು ಬರಹಗಳು ಮೂಡಿಬಂದು ಲೋಕಪ್ರಸಿದ್ದಿಯನ್ನು ಪಡೆದು ಇವರ ಕಲಾ ಸಾಹಿತ್ಯ ಕೃಷಿಗೆ ಸಾಲು ಸಾಲಾಗಿ ಗೌರವ ಪ್ರಶಸ್ತಿಗಳು ಬಂದೊರಗಲಿ ಎಂದು ಶುಭ ಹಾರೈಸುತ್ತೇವೆ.
Get In Touch With Us info@kalpa.news Whatsapp: 9481252093
Discussion about this post