ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿಯುಳ್ಳ ವೆಬ್‍ಸೈಟ್‍ನ್ನು ಸರ್ಕಾರದ ಜಾಲತಾಣದೊಂದಿಗೆ ಜೋಡಣೆ ಮಾಡಿ , ಜನರ ಮತ್ತು ಸರ್ಕಾರದ ನಡುವಿನ ಸಂವಹನಕ್ಕೆ ಸೇತುವೆಯಾಗಿ ಕಾರ್ಯನಿರ್ವಹಿಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.ಅವರು ಇಂದು ಮೈಸೂರಿನ ಬೃಹತ್ ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ ಹಾಗೂ ಉದ್ಯೋಗ ನೋಂದಣಿ ಕಾರ್ಯಕ್ರಮದ ಮಾಹಿತಿಯನ್ನೊಳಗೊಂಡ ಪುಸ್ತಕ ಸಮರ್ಪಣೆ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿಯನ್ನೊಳಗೊಂಡ ವೆಬ್‍ಸೈಟ್‍ಗೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿಯನ್ನೊಳಗೊಂಡ ವೆಬ್‍ಸೈಟಿನಿಂದ ಸರ್ಕಾರಿ ಕಾರ್ಯಕ್ರಮಗಳ ಉದ್ದೇಶ, ಮಾಹಿತಿ ಹಾಗೂ ಪ್ರಯೋಜನಗಳ ಬಗ್ಗೆ ಜನರಿಗೆ ಸ್ಪಷ್ಟವಾದ ಮಾಹಿತಿ ದೊರಕಲಿದೆ ಎಂದು ತಿಳಿಸಿದರು.ಸಮಾಜದ ವಿವಿಧ ಸ್ತರಗಳಲ್ಲಿ ಜನೋಪಯೋಗಿ ಕಾರ್ಯಕ್ರಮಗಳು ಒಂದೇ ಸೂರಿನಡಿ ಲಭ್ಯವಾಗಿಸುವುದು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಚಿಂತನೆ. ಜನರ ಒಳಿತಿಗಾಗಿ ಇರುವ ಕಾರ್ಯಕ್ರಮಗಳ ಮಾಹಿತಿ ಹಾಗೂ ಅದರ ಲಾಭವನ್ನು ಪಡೆದುಕೊಳ್ಳಲು ಮಾರ್ಗಸೂಚಿಗಳು ಈ ಪುಸ್ತಕದಲ್ಲಿ ಲಭ್ಯವಿದೆ. ರಾಜ್ಯದ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಿಸುವಲ್ಲಿ ಈ ಪುಸ್ತಕ ವಿಶ್ವಕೋಶದಂತೆ ಕೆಲಸ ಮಾಡಲಿದ್ದು, ಆಡಳಿತಗಾರರಿಗೆ ಹಾಗೂ ಜನರಿಗೆ ಉತ್ತಮ ಮಾರ್ಗದರ್ಶಕವಾಗಿದೆ ಎಂದು ತಿಳಿಸಿದರು.
ಸರ್ಕಾರದ ವಿವಿಧ ಯೋಜನೆ ಸವಲತ್ತುಗಳು ಹಾಗೂ ಅದನ್ನು ಪಡೆಯುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಮಾರ್ಗದರ್ಶನ ನೀಡುವ ಸಾರ್ಥಕತೆಯ ಧ್ಯೇಯದೊಂದಿಗೆ ಪುಸ್ತಕವನ್ನು ಹೊರತರಲಾಗಿದ್ದು, ಈ ಉತ್ತಮ ಕಾರ್ಯವನ್ನು ಆಗಮಾಡಿಸಿದ ಶಾಸಕ ಶ್ರೀ ರಾಮದಾಸ್ ಅವರನ್ನು ಅಭಿನಂದಿಸಿದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post