ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವರ್ಷವಿಡೀ ಲೌಕಿಕ ಜಂಜಾಟದಲ್ಲಿ ಉದರಂಭರಿಗಳಾಗಿ ತಾನು ತನ್ನವರ ಕೇಂದ್ರಿತವಾದ ಬದುಕು ಅನಿವಾರ್ಯವಾದರೂ ಒಂದು ಕಡೆಯಿಂದ ಈ ಪ್ರವೃತ್ತಿ ಎಲ್ಲರನ್ನೂ ಜರ್ಝರಿತರನ್ನಾಗಿಸುತ್ತಿರುವುದು ತಿಳಿದ ವಿಷಯ. ಆರೋಗ್ಯದ ಸೌಭಾಗ್ಯದಿಂದ ಭಗವಂತನ ಚಿಂತನೆಯಿಂದ ನಮ್ಮೀ ನಡೆಗಳು ವಂಚಿತರನ್ನಾಗಿಸುತ್ತಿದೆ ಎಂಬುದರಲ್ಲಿ ಸಂಶಯವಿಲ್ಲ. ಚಾತುರ್ಮಾಸ್ಯ ವ್ರತವು ಈ ಎಲ್ಲ ಕೊರತೆಗಳನ್ನು ನೀಗಿಸುವಲ್ಲಿ ರಾಮಬಾಣವೆನಿಸಿದೆ. ಜಪ-ತಪ ನಾಮಸ್ಮರಣೆಗಳ ಆವೃತ್ತಿಯ ಮೂಲಕ ನಡೆಸುವ ಭಗವಂತನ ಚಿಂತನೆ ಇವೆಲ್ಲವೂ ಸಂಸಾರ ಬೆಂದ ಜೀವನಿಗೆ ಭಗವಂತನ ಸ್ಪರ್ಶ ನೀಡುವಲ್ಲಿ ಸಂಪೂರ್ಣ ಯಶಸ್ವಿ ಎನಿಸಿದೆ.
ಏಕಾದಶಿ ಚಾತುರ್ಮಾಸ್ಯ ಮೊದಲಾದ ವ್ರತ ನಿಯಮಗಳನ್ನು ಆಚಾರ ಸಂಹಿತೆಗಳನ್ನು ಹಾಕಿಕೊಟ್ಟಿರುವ ಋಷಿಮುನಿಗಳು ದೇವದೇವತೆಗಳು ಆ ಸಂಹಿತೆಗಳ ಹಿಂದೆ ಸಾಧಕರ ಹಾಗೂ ಸಮಾಜದ ಸಮ್ಯಕ್ ಹಿತವನ್ನು ಪರಿಗಣಿಸಿದ್ದು ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕಗಳಾದ ಯಾವ ಸಾತ್ವಿಕ ವ್ರತ ನಿಯಮಗಳೂ ಅರ್ಥಹೀನಗಳಲ್ಲ. ಜಡ್ಡುಗಳಲ್ಲ. ಅಹಿತಕಾರಿಗಳಲ್ಲ. ಮಾತ್ರವಲ್ಲ ಅದರ ಹಿನ್ನೆಲೆಯಲ್ಲಿರುವುದು ಒಂದೇ ಅರ್ಥವಲ್ಲ. ಒಂದೇ ದೃಷ್ಟಿಯಲ್ಲಿ, ಕಿಂತು ಅವುಗಳೆಲ್ಲವೂ ಬಹ್ವರ್ಥ ಬೃಂಹಿತಗಳೇ ಆಗಿವೆ. ವಿಶ್ವತೋಮುಖಗಳಾಗಿವೆ.
ವ್ರತ ನಿಯಮಗಳ ಹಿಂದೆ ಪ್ರಧಾನವಾಗಿ ಪುಣ್ಯಪ್ರಾಪ್ತಿ ಮೋಕ್ಷ ಪ್ರಾಪ್ತಿಯ ಚಿಂತನೆಯಿದ್ದರೆ ಪೂರಕಗಳಾಗಿ ಆರೋಗ್ಯ ದೃಷ್ಟಿ, ಮಾನಸಿಕ ಪ್ರಸನ್ನತೆ, ಸಾಧನೆಯ ದೃಷ್ಟಿ, ಸಾಮಾಜಿಕ, ಸಾಂಸ್ಕೃತಿಕ ದೃಷ್ಟಿ ಸಾಮರಸ್ಯದ ದೃಷ್ಟಿ ಇತ್ಯಾದಿ ಸಮಷ್ಟಿದೃಷ್ಟಿಗಳು ತುಂಬಿ ತುಳುಕುತ್ತಿದ್ದು ಆಳಚಿಂತಕರಿಗೆ ಮಾತ್ರ ಇವು ಮನೋ ಲಭ್ಯವಾಗಿದೆ. ಅಲ್ಲದೆ ಮುಖ್ಯವಾಗಿ ಅವು ಅತ್ಯಂತ ವ್ಯವಹಾರ್ಯವಾಗಿ ಪ್ರಾಯೋಗಿಕವಾಗಿ ಶಕ್ಯ ಸಾಧ್ಯಗಳೂ ಆಗಿ ಕಾಣಸಿಗುತ್ತದೆ.
ಆಧ್ಯಾತ್ಮಿಕ ಸಾಧನೆಯೇ ಜೀವನ
ಸಾಂಪ್ರತ ಚಾತುರ್ಮಾಸ್ಯ ವ್ರತವು ಮಳೆಗಾಲದಲ್ಲಿ ಮನುಷ್ಯ ಕಾಲು ತುಳಿತದಿಂದಾಗುವ ಅನೇಕ ಹುಳಹುಪ್ಪಟಗಳ ಕ್ರಿಮಿ ಕೀಟಗಳ ಸಾಧನಾ ಶರೀರದ ನಾಶವನ್ನು ಪ್ರತಿಬಂಧಿಸುವ ದೃಷ್ಟಿಯಿಂದ ಬಂದದ್ದಾಗಿದ್ದು ಆಧ್ಯಾತ್ಮಿಕ ಸಾಧನೆಯೇ ಜೀವನದ ಪ್ರಧಾನ ಉದ್ದೇಶವುಳ್ಳ ಪರಿವ್ರಾಜಕರಿಗೂ ವೇದಾಧಿಕಾರಿಗಳಿಗೂ ಗೃಹಸ್ಥರಿಗೂ ಅವಶ್ಯಕವಾಗಿ ಪರಿಗಣಿತವಾಗಿದ್ದರೂ ಇದರಲ್ಲಿ ಸಾಧಕರು ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳುವ ಉದ್ದೇಶ ರಸನೇಂದ್ರೀಯಗಳ ಸಂಯಮದ ಉದ್ದೇಶ. ಹೆಚ್ಚಿನ ಸಾಧನೆಗೆ ಹೆಚ್ಚಿನ ಸಮಯಾವಕಾಶದ ಉದ್ದೇಶ ಅಂತರ್ಮುಖಿತನದ ಸಾಧನೆಯ ಉದ್ದೇಶ ಇತ್ಯಾದಿ ಬಹುದೃಷ್ಟಿ ಇದರಲ್ಲಿ ಅಡಕವಾಗಿದೆ.
ಚಾತುರ್ಮಾಸ್ಯ ವ್ರತದ ಪರ್ವ
ಸಾಮಾಜಿಕವಾಗಿಯೂ ಯತಿಗಳೆಲ್ಲರೂ ಸರ್ವದಾ ಸಂಚಾರದಲ್ಲಿದ್ದರೆ ಭಕ್ತಾದಿಗಳಿಗೂ ಹೊರೆ ಎನಿಸಬಹುದಾಗಿದ್ದು ಪರಿವ್ರಾಜಕರ ಬಗ್ಗೆನೇ ಉಪೇಕ್ಷೆ ಬರುವ ಅಪಾಯವಿದ್ದು ಆ ದೃಷ್ಟಿಯೂ ಚಾತುರ್ಮಾಸ್ಯ ದೀಕ್ಷೆಯ ಅಡಿಯಲ್ಲಿ ನಿಹಿತವಾಗಿರುತ್ತದೆ.
ಶಯನೀ ಏಕಾದಶಿಯಿಂದ ಆರಂಭಗೊಂಡು ಉತ್ಥಾನ ದ್ವಾದಶಿಯವರೆಗಿನ ನಾಲ್ಕು ತಿಂಗಳುಗಳ ಕಾಲ ಚಾತುರ್ಮಾಸ್ಯ ವ್ರತದ ಪರ್ವ ಸಮಯವೆನಿಸಿದ್ದು ಈ ಸಮಯದಲ್ಲಿ ಭಗವಂತನ ಯೋಗನಿದ್ರಯಲ್ಲಿ ವ್ರತನಾಗಿರುವನೆಂದು ಶಾಸ್ತ್ರಗಳಲ್ಲಿ ಪರಿಗಣಿಸಲ್ಪಟ್ಟಿದೆ. ಈ ಪ್ರಯುಕ್ತ ಭಗವಂತನ ಆಯುಧಗಳಾದ ಶಂಖಚಕ್ರಗಳನ್ನು ಬಾಹುಮೂಲಗಳಲ್ಲಿ ಧರಿಸಿ ಭಗವತ್ಪ್ರಜ್ಞೆಯನ್ನು ಸದಾ ಜಾಗೃತಗೊಳಿಸಿಕೊಳ್ಳಬೇಕು. ಈ ನಾಲ್ಕು ತಿಂಗಳುಗಳಲ್ಲಿ ವಿಶೇಷ ಆಹಾರ ನಿಯಮಗಳನ್ನು ಪಾಲಿಸಬೇಕು. ಶಾಕವ್ರತ, ದಧಿವ್ರತ, ಕ್ಷೀರವ್ರತ, ದ್ವಿದಳವ್ರತಗಳನ್ನು ಕ್ರಮವಾಗಿ ಆಚರಿಸುವಂತೆ ಪುರಾಣಗಳಲ್ಲಿ ಉಲ್ಲೇಖವಿದೆ. ಶ್ರಾವಣ ಮಾಸದಲ್ಲಿ ಶಾಖವ್ರತವನ್ನು ನಡೆಸಬೇಕು. ಈ ಸಂದರ್ಭದಲ್ಲಿ ಹತ್ತು ಬಗೆಯ ಶಾಖಗಳನ್ನು ತ್ಯಜಿಸಬೇಕು. ಭಾದ್ರಪದ ಮಾಸದಲ್ಲಿ ದಧಿವ್ರತ. ಇದನ್ನು ಮೊಸರನ್ನು ಸೇವಿಸದೆ ನಡೆಸಬೇಕು. ಆಶ್ವಯುಜ ಮಾಸದಲ್ಲಿ ಕ್ಷೀರವ್ರತದ ಪ್ರಯುಕ್ತ ಹಾಲು ವರ್ಜ್ಯ. ಕಾರ್ತಿಕ ಮಾಸದಲ್ಲಿ ದ್ವಿದಳ ಧಾನ್ಯಗಳನ್ನು ಬಳಸುವಂತಿಲ್ಲ.
ಹೀಗೆ ಈ ನಾಲ್ಕು ಮಾಸಗಳಲ್ಲಿ ಯೋಗನಿದ್ರೆಯಲ್ಲಿ ಪವಡಿಸಿದ ಭಗವಂತ ಮಹಾವಿಷ್ಣುವಿನ ಮೂಲ ಚಿಂತನೆಯಲ್ಲಿ ಕ್ರಮವಾಗಿ ಶ್ರೀಧರ, ಹೃಷಿಕೇಶ, ಪದ್ಮನಾಭ, ಮತ್ತು ದಾಮೋದರ ರೂಪಗಳ ಉಪಾಸನೆಯನ್ನು ಸಾಧಕರು ನಡೆಸಬೇಕು. ಸದಾ ಸಂಚರಣಶೀಲರಾದ ಪರಿವ್ರಾಜಕರಾದ ಸಂನ್ಯಾಸಿಗಳು ಈ ನಾಲ್ಕು ತಿಂಗಳುಗಳ ಕಾಲ ಒಂದೆಡೆ ದೀಕ್ಷಿತರಾಗಿ ಕುಳಿತು ಜಪತಪಾನುಷ್ಠಾನ ಪಾಠಪ್ರವಚನಗಳನ್ನು ನಡೆಸುತ್ತಾರೆ.
ಬ್ರಹ್ಮಚಾರಿ, ಗೃಹಸ್ಥ, ವಾನಪ್ರಸ್ಥರೆಲ್ಲರಿಗೂ ಆಹಾರ ನಿಯಮಗಳನ್ನು ಪಾಲಿಸುವಂತೆ ಪುರಾಣಗಳು ಧರ್ಮಶಾಸ್ತ್ರಗಳಯ ಅಭಿಪ್ರಾಯಪಟ್ಟಿವೆ. ಜಾತಿ ಮತ ಲಿಂಗ ಭೇದವಿಲ್ಲದೆ ಎಲ್ಲರೂ ಭಗವಂತನ ಅನುಗ್ರಹವನ್ನು ಪಡೆದು ಪಾಪದೂರರಾಗಿ ಸಾಧನೆಯನ್ನು ನಡೆಸಬೇಕು ಎಂಬ ಹಿನ್ನೆಲೆಯಲ್ಲಿ ಈ ವ್ರತವನ್ನು ಆಚರಿಸುವಂತೆ ಶಾಸ್ತ್ರಗಳು ತಿಳಿಸಿವೆ.
ಚಾತುರ್ಮಾಸ್ಯದ ಪರ್ವಕಾಲದಲ್ಲಿ ಆಹಾರದ ನಿಯಮಗಳ ಮನುಷ್ಯನನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಪಕ್ಷಗೊಳಿಸುತ್ತದೆ. ಮನಸ್ಸು ಹಿಡಿತದಲ್ಲಿ ಬಂದಿದೆ ಎಂದ ಮೇಲೆ ಆಧ್ಯಾತ್ಮ ಸಾಧನೆಗೆ ಅತ್ಯಂತ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಅನೇಕ ವೈಭೋಗಗಳ ತ್ಯಾಗವನ್ನು ಹಿರಿಯರು ತಿಳಿಸಿದ್ದಾರೆ. ಘೃತ, ಲವಣ, ತಾಂಬೂಲ, ಗುಡ ಇತ್ಯಾದಿಗಳ ತ್ಯಾಗದ ಮೂಲಕ ಸಾಧಕರಿಗೆ ಸಾಧನೆಗೆ ವಿಶೇಷ ಅವಕಾಶಗಳಿವೆ. ಅಲ್ಲದೆ ಈ ಪರ್ವಕಾಲದಲ್ಲಿ ಗೋಪದ್ಮ, ಲಕ್ಷಪ್ರದಕ್ಷಿಣ, ಲಕ್ಷನಮಸ್ಕಾರ, ಧಾರಣ-ಪಾರಣ ಮೊದಲಾದ ಕಠಿಣವ್ರತಗಳನ್ನೂ ನಡೆಸಬಹುದು. ಆಯಾಯ ವ್ರತಗಳಿಗೆ ಆಹಾರ ನಿಯಮಗಳಿವೆ ವಿಶೇಷ ವಿವಿಧ ಫಲಗಳೂ ಸಿಗಲಿವೆ.
ಚಾತುರ್ಮಾಸ್ಯ ವ್ರತದ ಕುರಿತಾಗಿ ವಿಶೇಷ ವಿಚಾರಗಳು ಶ್ರೀವೇದವ್ಯಾಸರು ರಚಿಸಿದ ವರಾಹ ಮಹಾಪುರಾಣದಲ್ಲಿ ದೊರೆಯುವುದು. ಈ ವ್ರತವು ಯತಿಗಳಿಗೆ ವಿಶೇಷವಾಗಿದ್ದರೂ ಎಲ್ಲಾ ಆಶ್ರಮದವರೂ ಎಲ್ಲ ವರ್ಣದವರೂ ಆಚರಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಬೇಕು. ಇಹಪರಗಳೆರಡರಲ್ಲೂ ಸಾಧನೀಭೂತವಾದ ಚಾತುರ್ಮಾಸ್ಯ ವ್ರತವನ್ನು ಎಲ್ಲ ಸಾಧಕರು ನಡೆಸುವಂತಾಗಲಿ.
Get In Touch With Us info@kalpa.news Whatsapp: 9481252093
Discussion about this post