ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರಾಷ್ಟ್ರ ರಾಜಧಾನಿಯಲ್ಲಿ ಜನವರಿ 26ರಂದು ಅದ್ಧೂರಿ ಗಣರಾಜ್ಯೋತ್ಸವ #Republic Day ಆಚರಣೆ ನಡೆಯಲಿದೆ. ಈ ಸಮಾರಂಭದಲ್ಲಿ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಮತ್ತು ಗಗನಯಾತ್ರಿ ಆಗಿರುವ ಶುಭಾಂಶು ಶುಕ್ಲಾ #Shubanshu Shukla ಅವರಿಗೆ ದೇಶದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರ’ವನ್ನು ನೀಡಿ ಗೌರವಿಸಲಾಗುತ್ತದೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯಕ್ಕೆ ಕೀರ್ತಿ ತಂದ ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರನ್ನು ಉತ್ತರ ಪ್ರದೇಶ ಸರ್ಕಾರ ಸನ್ಮಾನಿಸಿದೆ. ‘ಉತ್ತರ ಪ್ರದೇಶ ದಿನ 2026’ ಕಾರ್ಯಕ್ರಮದಲ್ಲಿ ಶುಕ್ಲಾ ಅವರಿಗೆ ಗೌರವ ಸಮ್ಮಾನ್ ಪ್ರಶಸ್ತಿ ನೀಡಲಾಯಿತು. ಲಖನೌ ಮೂಲದ ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರಿಗೆ ಯುಪಿ ಗೌರವ್ ಸಮ್ಮಾನ್ ನೀಡಿ ಗೌರವಿಸಲಾಗಿದೆ.
2025ರ ಜೂನ್ 26ರಂದು ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಟ್ರ್ಯಾಗನ್ ಬಾಹ್ಯಾಕಾಶ ನೌಕೆಯಿಂದ ಉಡಾವಣೆಯಾದ ನಂತರ ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ತಲುಪುವ ಮೂಲಕ ಇತಿಹಾಸ ನಿರ್ಮಿಸಿದರು. ಅವರು ಐಎಸ್‌ಎಸ್‌ಗೆ ಕಾಲಿಟ್ಟ ಮೊದಲ ಭಾರತೀಯ ಗಗನಯಾತ್ರಿ ಎನಿಸಿಕೊಂಡರು. ರಾಕೇಶ್ ಶರ್ಮಾ ನಂತರ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯರು ಇವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಶುಭಾಂಶು ಶುಕ್ಲಾ ಜತೆಗೆ ಅಲಖ್ ಪಾಂಡೆ, ಡಾ ಹರಿಓಂ ಪನ್ವಾರ್, ರಶ್ಮಿ ಆರ್ಯ ಮತ್ತು ಡಾ ಸುಧಾಂಶು ಸಿಂಗ್ ಅವರಿಗೆ ಯುಪಿ ಸರ್ಕಾರ ಪ್ರಶಸ್ತಿ ನೀಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















