ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಹಾಲು ಮತ್ತು ವಿದ್ಯುತ್ ದರ ಏರಿಕೆ #Milk and Electricity Price Hike ಮಾಡಿರುವ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ #H D Kumaraswamy ಅವರು; ಕರ್ನಾಟಕ ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಕಪಿಮುಷ್ಟಿಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು; ಎರಡು ವರ್ಷಗಳ ಸರಣಿ ಸುಲಿಗೆ! ಯುಗಾದಿ ಹಬ್ಬಕ್ಕೆ ಬೆಲೆ ‘ಏರಿಕೆ ಹೋಳಿಗೆ!!’ ಎಂದು ಟಾಂಗ್ ನೀಡಿದ್ದಾರೆ.
ರಾಜ್ಯದಲ್ಲಿ ಹಾಲಿನ ಹಾಲಾಹಲ ಶುರುವಾಗಿದೆ. 3ನೇ ಸಲ ದರ ಏರಿಕೆ ಮಾಡಲಾಗಿದೆ. 2023 ಆಗಸ್ಟ್ ತಿಂಗಳಲ್ಲಿ ₹3, 2024 ಜೂನ್ ತಿಂಗಳಿನಲ್ಲಿ ₹2 ಹಾಗೂ 2025 ಮಾರ್ಚ್, ಅಂದರೆ ಈಗ ₹4 ಏರಿಕೆ ಮಾಡಲಾಗಿದೆ. ಹಾಗೆಯೇ ವಿದ್ಯುತ್ ಕೂಡ ದುಬಾರಿ ಆಗಿದೆ. ಜನರಿಗೆ ವಿದ್ಯುತ್ ಶಾಕ್ ನೀಡಿದ್ದಾರೆ. ಈಗ ಎಲ್ಲರಿಗೂ ಪ್ರತೀ ಯೂನಿಟ್ಟಿಗೆ ₹36 ಪೈಸೆ ಬರೆ. ಮಹಾದೇವಪ್ಪನಿಗೂ ಶಾಕು! ಕಾಕಾ ಪಾಟೀಲಗೂ ಶಾಕು!! ಎಂದು ರಾಜ್ಯ ಸರ್ಕಾರದ ಬಗ್ಗೆ ಕೇಂದ್ರ ಸಚಿವರು ಲೇವಡಿ ಮಾಡಿದ್ದಾರೆ.
Also read: ವೃತ್ತಿಪರತೆ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಪತ್ರಕರ್ತೆಯರ ಪಾತ್ರ ದೊಡ್ಡದು: ಕೆ.ವಿ. ಪ್ರಭಾಕರ್
ಒಂದು ಕೈಯಲ್ಲಿ ಕೊಟ್ಟು ಹತ್ತು ಕೈಗಳಲ್ಲಿ ಕಿತ್ತುಕೊಳ್ಳುವ ದಶಾವತಾರಿ ರಾವಣರೂಪಿ ಸುಲಿಗೆ ಪ್ರವೃತ್ತಿ ಕನ್ನಡಿಗರ ಪಾಲಿಗೆ ಮರಣಶಾಸನ. ಹಾಲು, ವಿದ್ಯುತ್ ದರ ಏರಿಕೆ ಖಂಡನೀಯ. ನೆಪ ರೈತರದು, ಲಾಭ ಕೆಎಂಎಫ್ ಗೆ! ಕಂಪನಿ ಆಡಳಿತ ನಡೆಸುತ್ತಿದೆ ಸರಕಾರ! ಮೊಸರು ದರ ₹4 ಏರಿಕೆ ಮಾಡಿದ್ದೀರಿ. ಈ ಹಣ ಏನು ಮಾಡುತ್ತೀರಿ? ರೈತರಿಗೆ ವರ್ಗಾಯಿಸುತ್ತೀರೋ ಅಥವಾ ಕೆಎಂಎಫ್ ತಾನೇ ಉಳಿಸಿಕೊಳ್ಳಲಿದೆಯೋ? ಸ್ಪಷ್ಟಪಡಿಸಿ ಎಂದು ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.
ಇದು ಪ್ರಜಾಪ್ರಭುತ್ವ ಸರಕಾರವಲ್ಲ
ದರ ಏರಿಕೆ, ತೆರಿಗೆ ಹೇರಿಕೆ ಸರಕಾರ! ಇದು ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ! ಸುಲಿಗೆಯಷ್ಟೇ ನಿತ್ಯಕೃತ್ಯ. ಕರ್ನಾಟಕ ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಕಪಿಮುಷ್ಟಿಯಲ್ಲಿದೆ. ಈಸ್ಟ್ ಇಂಡಿಯಾ ಕಾಂಗ್ರೆಸ್!! ಎಂದು ಅವರು ಕಿಡಿ ಕಾರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post