ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರಾಜ್ಯ ಕಾಂಗ್ರೆಸ್ ಸರ್ಕಾರ, ಹಾಲು-ಮೊಸರಷ್ಟೇ ಅಲ್ಲ; ಈಗ ಮನೆಯ ಕಸಕ್ಕೂ ಕನಿಷ್ಠ ₹ 400 ವರೆಗೆ ಶುಲ್ಕ ವಿಧಿಸಿ ಗ್ಯಾರೆಂಟಿ “ಶುಲ್ಕ ವಸೂಲಿಗಾರ ಸರ್ಕಾರʼ ಆಗಿದ್ದು, ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯವನ್ನು ದಿವಾಳಿ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ #Pralhad Joshi ಕಿಡಿ ಕಾರಿದರು.
ದೆಹಲಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗಾಗಿ ಆಸ್ತಿ ತೆರಿಗೆಯಲ್ಲೇ #Property Tax ಅಡಕವಾಗಿದ್ದ ಕಡಿಮೆ ಉಪಕರದ ಬದಲು ಇದೀಗ ಕಟ್ಟಡದ ವಿಸ್ತೀರ್ಣದ ಮೇಲೆ ಸಾವಿರಾರು ರೂಪಾಯಿ ಶುಲ್ಕ ನಿಗದಿಪಡಿಸಿ ಜನಪರ ಬದಲು “ಜನ-ಕರʼ ವಸೂಲಿಗಾರ ಸರ್ಕಾರ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
600 ಚದರ ಅಡಿ ನಿವೇಶನದಲ್ಲಿನ ವಸತಿ ಕಟ್ಟಡದ ಪ್ರತಿ ಮನೆಗೆ ಮಾಸಿಕ ₹120ವರೆಗೆ ಶುಲ್ಕ ವಿಧಿಸುತ್ತಿದೆ. ಆಸ್ತಿ ವಿಸ್ತೀರ್ಣ ಹೆಚ್ಚಿದಂತೆ ಬಳಕೆದಾರರ ಶುಲ್ಕವನ್ನೂ ಹೆಚ್ಚಿಸಲಾಗಿದೆ. 4 ಸಾವಿರ ಚದರಡಿ ಮತ್ತು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಪ್ರತಿ ಮನೆಗೆ ಮಾಸಿಕ ತಲಾ ₹400ರಂತೆ ವಾರ್ಷಿಕ ₹4,800 ಶುಲ್ಕ ವಿಧಿಸುತ್ತಿರುವ ಸರ್ಕಾರದ ಕ್ರಮ ಅಕ್ಷಮ್ಯ ಎಂದು ಖಂಡಿಸಿದರು.
ಅಲ್ಲದೆ ಕಟ್ಟಡಗಳಿಗೆ ಪ್ರತಿ ವರ್ಷವೂ ಶೇ.5ರಷ್ಟು ಶುಲ್ಕ ಹೆಚ್ಚಳ ಮಾಡಿದೆ. ಸಾಲದ್ದಕ್ಕೆ ಲಿಫ್ಟ್, ಜನರೇಟರ್ ಪರಿಶೀಲನೆ ಮತ್ತು ರಿನಿವಲ್‌ಗೆ ₹800 ಇದ್ದ ದರ ಇದೀಗ ಏಕಾಏಕಿ ₹ 5,000 ದಿಂದ ₹8,000 ವರೆಗೆ ಏರಿಸಿ ಜನ-ಕರ ವಸೂಲಿ ಸರ್ಕಾರವಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಹಾಲು ಉತ್ಪಾದಕರಿಗೆ ಇದ್ದ ಬೆಲೆಯೂ ಕಡಿತ: ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ 20 ತಿಂಗಳಲ್ಲಿ ಹಾಲು ಉತ್ಪಾದಕರಿಗೆ ಎನ್ನುತ್ತ ಮೂರು ಬಾರಿ ಹಾಲಿನ ದರ ಏರಿಸಿದೆ. ಈ ಸಲ ಅತಿ ಹೆಚ್ಚು ₹4 ಹೆಚ್ಚಿಸಿದೆ. ಆದರೆ, ಇತ್ತ ರೈತರಿಗೆ ಹಾಲಿನ ದರವನ್ನು ಏರಿಸಿಲ್ಲ, ಪ್ರೋತ್ಸಾಹ ಧನವನ್ನೂ ಕೊಟ್ಟಿಲ್ಲ ಬದಲಿಗೆ ಹೈನುಗಾರರಿಗೆ ₹ 3.50 ಕಡಿತ ಮಾಡಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಮುಸ್ಲಿಂ ಏರಿಯಾವೇ ವಕ್ಫ್ ಪಾಲು: ರಾಜ್ಯದಲ್ಲಿ ಚಾಲುಕ್ಯರ ಆಡಳಿತದಲ್ಲಿ ಇದ್ದಂತಹ ಮಂದಿರಗಳೂ ವಕ್ಫ್ ಆಸ್ತಿ ಎಂದಾಗಿದೆ. ಇನ್ನು, ಹುಬ್ಬಳ್ಳಿಯಲ್ಲಿ ಮುಸಲ್ಮಾನರು ನೆಲೆಸಿರುವ ಇಡೀ ಒಂದು ಪ್ರದೇಶವೇ ವಕ್ಫ್ ಆಸ್ತಿ ಎಂದಾಗಿದೆ. ಈ ಅನ್ಯಾಯದ ವಿರುದ್ಧ ಆಸ್ತಿ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ವಕ್ಫ್‌ನ ಇಂಥ ಭೂ ಕಬಳಿಕೆ ವಿರುದ್ಧ ಬಿಜೆಪಿ ಹೋರಾಡುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಸ್ಪಷ್ಪಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post