ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಸೌರಶಕ್ತಿಯಲ್ಲಿ #Solar Power ಅಸಾಧಾರಣ ಮೈಲಿಗಲ್ಲು ಸಾಧಿಸಿದ ಭಾರತದ ಮೊದಲ ಜಿಲ್ಲೆ ದಿಯು ಆಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ #Pralhad Joshi ಹೇಳಿದರು.
ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದಿಯು ಸೌರಶಕ್ತಿಯಿಂದಲೇ ತನ್ನ ಸಂಪೂರ್ಣ ವಿದ್ಯುತ್ ಬೇಡಿಕೆಯನ್ನು ಪೂರೈಸಿಕೊಳ್ಳುತ್ತಿರುವ ದೇಶದ ಮೊದಲ ಜಿಲ್ಲೆ ಎಂದು ಹೇಳಲು ಹೆಮ್ಮೆ ಎನಿಸುತ್ತಿದೆ ಎಂದರು.
ದಿಯು ಜಿಲ್ಲೆ 9 ಮೆಗಾವ್ಯಾಟ್ ನೆಲ-ಆರೋಹಿತ ಮತ್ತು 2.88 ಮೆಗಾವ್ಯಾಟ್ ಮೇಲ್ಛಾವಣಿ ಸೇರಿದಂತೆ ಒಟ್ಟಾರೆ 11.88 ಮೆಗಾವ್ಯಾಟ್ ಸೌರಶಕ್ತಿ ಸಾಮರ್ಥ್ಯ ಸಾಧಿಸಿ ನವೀಕರಿಸಬಹುದಾದ ಇಂಧನ ಅಳವಡಿಕೆಯಲ್ಲಿ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಫುಡಮ್ ಸೌರ ಉದ್ಯಾನವನ ಪ್ರಸರಣ ಮತ್ತು ವಿತರಣಾ ನಷ್ಟ ಕಡಿಮೆ ಮಾಡಲು ಗಮನಾರ್ಹ ಕೊಡುಗೆ ನೀಡಿದೆ ಅಲ್ಲದೆ, ವಿದ್ಯುತ್ ದರಗಳ ಪರಿಷ್ಕರಣೆ ಸಕ್ರಿಯಗೊಳಿಸಿದ್ದು, ಇದು ಶುದ್ಧ ಇಂಧನ ಬದ್ಧತೆಯನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ನವೀಕರಿಸಬಹುದಾದ ಇಂಧನ ವಲಯದ ಮೂಲಸೌಕರ್ಯಕ್ಕಾಗಿ ದಿಯು ಹೂಡಿದ ಬಂಡವಾಳವನ್ನು ದಿಯು ಜಿಲ್ಲೆ ಈಗಾಗಲೇ ಸೌರಶಕ್ತಿ ಪೂರೈಕೆ ಮತ್ತು ಮಾರಾಟದ ಮೂಲಕ ಮರುಪಡೆದಿದೆ. ಕೇಂದ್ರಾಡಳಿತ ಪ್ರದೇಶದ ನಿವಾಸಿಗಳಿಗೆ ಗರಿಷ್ಠ ಪ್ರಮಾಣದಲ್ಲಿ ಸೌರ ವಿದ್ಯುತ್ ಪ್ರಯೋಜನ ಲಭ್ಯವಾಗಿದೆ ಎಂದರು.
ಸೂರ್ಯ ಘರ್ ತ್ವರಿತ ಅನುಷ್ಠಾನಕ್ಕೆ ಕರೆ: ಸೌರಶಕ್ತಿ ಅಳವಡಿಕೆಯಲ್ಲಿ ದಿಯು ಜಿಲ್ಲೆಯ ಗಮನಾರ್ಹ ಪ್ರಗತಿ ಪರಿಶೀಲಿಸಿದ ಸಚಿವರು, ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯನ್ನು ಇನ್ನಷ್ಟು ವೇಗವಾಗಿ, ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಸಲಹೆ ನೀಡಿದರು.
ಫುಡಮ್‌ನಲ್ಲಿರುವ 9 ಮೆಗಾವ್ಯಾಟ್ ಸೌರ ಉದ್ಯಾನವನ ಸೇರಿದಂತೆ ದಿಯುವಿನ ಪ್ರಮುಖ ಸೌರಶಕ್ತಿ ತಾಣಗಳಿಗೆ ಭೇಟಿ ನೀಡಿ ವೀಕ್ಷಿಸಿ, ಸೌರ ಉದ್ಯಾನವನವು ದಿಯುವಿನ ಸುಸ್ಥಿರ ಪರಿವರ್ತನೆಯ ಸಂಕೇತವಾಗಿದೆ ಮತ್ತು ಕೇಂದ್ರಾಡಳಿತ ಪ್ರದೇಶದ ಶುದ್ಧ ಇಂಧನ ಅವಶ್ಯಕತೆಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಸಭೆಯಲ್ಲಿ ದಾದ್ರಾ-ನಗರ ಹವೇಲಿ, ದಮನ್-ದಿಯು ಕೇಂದ್ರಾಡಳಿತ ಪ್ರದೇಶದ ಇಂಧನ ಕಾರ್ಯದರ್ಶಿ ಟಿ.ಅರುಣ್ ಮಾತನಾಡಿ, ನಮ್ಮ ಸೌರಶಕ್ತಿ ಸ್ಥಾವರಗಳಿಂದಾಗಿ ಕೇಂದ್ರಾಡಳಿತ ಪ್ರದೇಶದಲ್ಲಿ ಹೆಚ್ಚಿನ ಕುಟುಂಬಗಳು ಸೌರ ವಿದ್ಯುತ್ ಪ್ರಯೋಜನ ಪಡೆಯುತ್ತಿವೆ ಎಂದು ವಿವರಿಸಿದರು.
ಸಭೆಯಲ್ಲಿ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ಪ್ರಫುಲ್ ಪಟೇಲ್, ದಿಯು ಕಲೆಕ್ಟರ್ ಡಾ.ವಿವೇಕ್ ಕುಮಾರ್, ಉಪ ಕಲೆಕ್ಟರ್ ಶಿವಂ ಮಿಶ್ರಾ, ಕಾರ್ಯನಿರ್ವಾಹಕ ಎಂಜಿನಿಯರ್ ಯೋಗೇಶ್ ತ್ರಿಪಾಠಿ, ಪರೇಶ್ ಪಟೇಲ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post