ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ನಕಲಿ ಸುದ್ದಿ ಹರಡಿದಕ್ಕಾಗಿ ಪಾಕಿಸ್ತಾನ ಮೂಲದ 35 ಯೂಟ್ಯೂಬ್ ಚಾನೆಲ್‌ಗಳು ಮತ್ತು 7 ಸಾಮಾಜಿಕ ಮಾಧ್ಯಮದ ಖಾತೆಗಳನ್ನು ಭಾರತ ಸರ್ಕಾರ ನಿಷೇಧಿಸಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಈ ಖಾತೆಗಳು ಪಾಕಿಸ್ತಾನಕ್ಕೆ ಸೇರಿದ್ದು, ನಕಲಿ ಸುದ್ದಿಗಳನ್ನು ಪ್ರಚಾರ ಮಾಡುವುದರ ಜೊತೆಗೆ ಭಾರತದ ಯುದ್ಧಕ್ಕೆ ಸಂಬಂಧಿಸಿದಂತೆ ನಕಲಿ ಅಂಶಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಯೂಟ್ಯೂಬ್ ಚಾನೆಲ್‌ಗಳು ಮತ್ತು ಖಾತೆಗಳಿಂದ ಪೋಸ್ಟ್ ಮಾಡಿದ ವಿಷಯವು ಸುಮಾರು 130 ಕೋಟಿ ವೀಕ್ಷಣೆಗಳನ್ನು ಹೊಂದಿದೆ ಎಂದು ಹೇಳಿದರು.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿಕ್ರಮ್ ಸಹಾಯ್ ಮಾತನಾಡಿ, ಈಗಾಗಲೇ ನಾವು 35 ಯೂಟ್ಯೂಬ್ ಚಾನೆಲ್‌ಗಳು, ಎರಡು ಟ್ವಿಟರ್ ಖಾತೆಗಳು, ಎರಡು ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ಗಳು, ಎರಡು ವೆಬ್‌ಸೈಟ್‌ಗಳು ಮತ್ತು ಒಂದು ಫೇಸ್‌ಬುಕ್ ಖಾತೆಯನ್ನು ನಿಷೇಧಿಸಿದ್ದೇವೆ. ಈ ಯೂಟ್ಯೂಬ್ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಐಟಿ ನಿಯಮಗಳ ಪ್ರಕಾರ ಕ್ರಮ ವಹಿಸಲಾಗಿದೆ. ಈ ಚಾನಲ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು “ಭಾರತ ವಿರೋಧಿ” ಪ್ರಚಾರವನ್ನು ಉತ್ತೇಜಿಸಲು ಬಳಕೆಯಾಗುತ್ತಿವೆ. ನಕಲಿ ಮಾಹಿತಿ ನೀಡಿ ಸಾರ್ವಜನಿಕರನ್ನು ದಾರಿತಪ್ಪಿಸಲು ಈ ಮಾಧ್ಯಮಗಳನ್ನು ಬಳಸಲಾಗುತ್ತಿದೆ. ಗುಪ್ತಚರ ಸಂಸ್ಥೆಗಳಿಂದ ಮಾಹಿತಿಯನ್ನು ಸ್ವೀಕರಿಸಲಾಗಿದೆ ಮತ್ತು ಈ ನಿಟ್ಟಿನಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಲಾಗಿದೆ. ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳೂ ಇಂತಹ ವಿಷಯವನ್ನು ಗಮನಿಸಬೇಕು ಎಂದು ಹೇಳಿದರು.
ಈ ಚಾನೆಲ್‌ಗಳು ಒಟ್ಟು 1.2 ಕೋಟಿ ಚಂದಾದಾರರನ್ನು ಮತ್ತು 130 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಕಂಡಿವೆ. ಸಹಜವಾಗಿ, ತಡೆಗಟ್ಟುವುದು ಬಹಳ ಕಷ್ಟಕರ. ಸಚಿವಾಲಯವು ನಿರ್ಬಂಧಿಸಿದ 35 ಖಾತೆಗಳು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿವೆ. “ಖಬರ್ ವಿತ್ ಫ್ಯಾಕ್ಟ್ಸ್”, “ಗ್ಲೋಬಲ್ ಟ್ರುತ್”, “ಇನ್ಫರ್ಮೇಶನ್ ಹಬ್”, “ಅಪ್ನಿ ದುನ್ಯಾ ಟಿವಿ” ಮತ್ತು “ಬೋಲ್ ಮೀಡಿಯಾ ಟಿವಿ” ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಲಾಗಿದೆ. ಎರಡು ವೆಬ್‌ಸೈಟ್‌ಗಳಾ “whiteproductions.com.pk” ಮತ್ತು “dnowmedia.com” ಅನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
“ನಾವು ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಿಗೆ ಪತ್ರ ಬರೆದಿದ್ದೇವೆ ಮತ್ತು ಅವರು 24 ಗಂಟೆಗಳ ಕಾಲಾವಕಾಶವನ್ನು ಕೋರಿದ್ದರು ಮತ್ತು ಇದೀಗ ಬಹುತೇಕ ಎಲ್ಲಾ ಖಾತೆಗಳನ್ನು ಈಗಾಗಲೇ ನಿರ್ಬಂಧಿಸಲಾಗಿದೆ” ಎಂದು ಅಪೂರ್ವ ಚಂದ್ರ ಅವರು ಹೇಳಿದ್ದಾರೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ‘ಭಾರತ ವಿರೋಧಿ’ ಅಂಶವನ್ನು ಪ್ರಸಾರ ಮಾಡಿದ ಹಿನ್ನೆಲೆ 20 ಯೂಟ್ಯೂಬ್ ಚಾನೆಲ್‌ಗಳ ಮೇಲೆ ಸಚಿವಾಲಯವು ಇದೇ ರೀತಿಯ ಕ್ರಮ ಕೈಗೊಂಡಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post