ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್ ತಡೆಗಟ್ಟಲು ರಾಜ್ಯ ಸರ್ಕಾರ ಇಂದಿನಿಂದ ಜಾರಿಗೆ ತಂದಿರುವ ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದಲ್ಲಿ 9 ಗಂಟೆ ವೇಳೆಗೆ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.
9 ಗಂಟೆಯಿಂದ ನೈಟ್ ಕರ್ಫ್ಯೂ ಆರಂಭವಾಗುವುದಿದ್ದರೂ ನಗರಸಭೆ ಅಧಿಕಾರಿ-ಸಿಬ್ಬಂದಿಗಳು ಹಾಗೂ ಪೊಲೀಸರು 8 ಗಂಟೆಯಿಂದಲೇ ಅಂಗಡಿ ಮುಂಗಟ್ಟು ಮುಚ್ಚಲು ಸೂಚನೆ ನೀಡುತ್ತಿದ್ದರು. 8 ಗಂಟೆಯಿಂದಲೇ ಮುಚ್ಚಲು ಹೇಳುತ್ತಿದ್ದರೂ ಸಂಪೂರ್ಣ ಬಂದ್ ಆಗುವ ವೇಳೆಗೆ 9.15 ಆಗಿತ್ತು.
ಇನ್ನು, ಬಿಎಚ್ ರಸ್ತೆ, ಚನ್ನಗಿರಿ ರಸ್ತೆ, ತರೀಕೆರೆ ರಸ್ತೆ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಮೆಡಿಕಲ್ ಶಾಪ್, ಹಾಲಿನ ಅಂಗಡಿಗಳು ಹಾಗೂ ಎಟಿಎಂಗಳ ಹೊರತಾಗಿ ಇನ್ನೆಲ್ಲಾ ವಹಿವಾಟು ಬಂದ್ ಆಗಿತ್ತು.
9 ಗಂಟೆಯಾದರೂ ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಅಂಗಡಿ ಮುಚ್ಚಲು ಹೇಳಿ ಬಲವಂತವಾಗಿ ಮುಚ್ಚಿಸಬೇಕಾಗಿತ್ತು. ವಾಹನ ಸಂಚಾರವೂ ಸಹ ಕಂಡು ಬಂದಿತು.
ನಗರಸಭೆ ಆಯುಕ್ತ ಮನೋಹರ್ ಅವರು ಸ್ವತಃ 10.30ವರೆಗೂ ನಗರಸಭೆ ಕಚೇರಿ ಬಳಿ ಹಾಗೂ ನಗರದ ಪ್ರಮುಖ ಪ್ರದೇಶಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು.
ಇದಲ್ಲದೇ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ರಾತ್ರಿ ಗಸ್ತು ತಿರುಗುತ್ತಿದ್ದುದು ಕಂಡು ಬಂದಿತು.

ಈ ವೇಳೆ ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ಆಯುಕ್ತ ಮನೋಹರ್, ಕೋವಿಡ್19 ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಸೇರಿದಂತೆ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಎಲ್ಲ ಇಲಾಖೆಗಳು ಸಮನ್ವಯತೆಯಿಂದ ನಗರಸಭೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದೆ. ಜನರು ಆಡಳಿತದೊಂದಿಗೆ ಸಹಕಾರ ನೀಡಬೇಕು. ಅನಾವಶ್ಯಕವಾಗಿ ಮನೆಗಳಿಂದ ಹೊರಕ್ಕೆ ಬರಬಾರದು, ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಬೇಕು ಎಂದು ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















