ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊರೋನಾ ವೈರಸ್ ಗೆ ಆ ಹೆಸರು ಬಂದಿದ್ದು ಅದು ಕಿರೀಟವನ್ನು ಹೋಲುವುದರಿಂದ ಅಂತ ಎಲ್ಲರಿಗೂ ಗೊತ್ತು. ಲ್ಯಾಟಿನ್ ಭಾಷೆಯ ಅರ್ಥದ ಪ್ರಕಾರ ಕರೋನಾ ಎಂದರೆ ಕಿರೀಟದಾಕೃತಿಯ ವಸ್ತು ಎಂದರ್ಥ. ಆದರೆ ಈ ಪದಕ್ಕೆ ಭಾರತದಲ್ಲಿರುವ ಅರ್ಥಗಳು ನಿಮಗೆ ಗೊತ್ತೇ?? ಇಲ್ಲಿವೆ ನೋಡಿ ಕೆಲವು ಸ್ವಾರಸ್ಯಕರ ಮಾಹಿತಿಗಳು.
ತಮಿಳುನಾಡಿನ ದೇವಾಲಯಗಳ ನಗರಿ ಕುಂಭಕೋಣಂಗೆ ಕುಂಡತಾಯ್ ಮತ್ತು ಅಲ್ಲಿನ ದೇವಾಲಯಕ್ಕೆ ಕುಂಡತಾಯ್ ಕರೋನಂ ಎಂಬ ಹೆಸರೂ ಇದೆ. (ಇತ್ತೀಚಿಗೆ ಇಲ್ಲಿಗೆ ಸಮೀಪದ ಮಹಾಬಲಿಪುರಂಗೆ ಚೀನಾ ಅಧ್ಯಕ್ಷರು ಭೇಟಿ ನೀಡಿದ್ದನ್ನು ಸ್ಮರಿಸಬಹುದು!
ಇಲ್ಲಿನ ಎರಡು ಮುಖ್ಯ ದೇವಾಲಯಗಳಾದ ಕಾಶಿ ವಿಶ್ವನಾಥ ದೇವಾಲಯ ಮತ್ತು ಸೋಮೇಶ್ವರ ದೇವಾಲಯಗಳನ್ನು ಕರೋನಂ ಎಂಬ ಹೆಸರಿನಿಂದ ಕರೆಯುತ್ತಾರೆ.
ಕರೋನಂ ಎಂಬುದು ಕಾಯಾರೋಹಣ ಎಂಬ ಪದದ ಸಂಕ್ಷಿಪ್ತ ರೂಪವಾಗಿದೆ. ಕಾಯಾರೋಹಣ ಎಂದರೆ, ಕಾಯ = ದೇಹ, ಆರೋಹಣ = ಮೇಲೇರು ಅಥವಾ ದೇವರಲ್ಲಿ ಒಂದಾಗು ಎಂದರ್ಥ. ಲಾಕುಲೀಶನ ಶೈವ ಪಾಶುಪಥ ಸಾಹಿತ್ಯದಲ್ಲಿ ಇದರ ಉಲ್ಲೇಖವಿದೆ.
ಪ್ರಾಚೀನ ತಮಿಳು ಸಂತರಾದ ತಿರುಜ್ಞಾನಸಂಬಂತರ್ ಕರೋನಂ ದೇವರ ಕುರಿತು ಅನೇಕ ವಚನಗಳನ್ನು ಬರೆದಿದ್ದು. ಪ್ರತಿ ವಚನವು ಕರೋನತಾರೆ ಎಂಬ ಪದದಿಂದ ಅಂತ್ಯವಾಗುತ್ತದೆ.
ಈ ಕರೋನಂ ದೇವಾಲಯಗಳಿರುವುದು ಪ್ರಳಯ ಕಾಲದಲ್ಲಿ ಅಮೃತವಿದ್ದ ಕುಂಭವನ್ನು ಈ ಸ್ಥಳದಲ್ಲಿ ಶಿವ ಬಾಣ ಬಿಟ್ಟು ಒಡೆದಾಗ ಉದ್ಭವವಾದ ಪ್ರಸಿದ್ಧವಾದ ಮಹಾಮಹಾಮ್ ಕೊಳದ ಸುತ್ತ್. (ಈಗ ಕರೋನಾ ಕೂಡಾ ಪ್ರಳಯದ ಮುನ್ಸೂಚನೆಯನ್ನೇ ನೀಡುತ್ತಿದೆ ಅಲ್ಲವೇ?)
ತಮಿಳುನಾಡಿನ ಮತ್ತೊಂದು ದೇವಾಲಯಗಳ ನಗರಿ ನಾಗಪಟ್ಟಿನಂ ನಗರದ ಕಾಯರೋಹಣ ಸ್ವಾಮಿ ದೇವಾಲಯಕ್ಕೂ ಸಹಾ ನಾಗೈ ಕರೋನಂ ಎಂಬ ಹೆಸರಿದೆ. ಇದರ ಮಹಾತ್ಮೆಯ ಕುರಿತಾಗಿ ಮೀನಾಕ್ಷಿ ಸುಂದರಂ ಪಿಳ್ಳೈ ಎಂಬುವವರು 1929 ರಲ್ಲಿ ನಾಗೈ ಕರೋನ ಪುರಾಣಂ ಎಂಬ ಗ್ರಂಥವನ್ನೇ ಬರೆದಿದ್ದಾರೆ.
ಇಲ್ಲಿನ ದೇವರನ್ನು ಕರೋನಸ್ವಾಮಿ ಎಂದೇ ಕರೆಯುತ್ತಾರೆ. ಕರೋನಸ್ವಾಮಿ ಎಂಬುದು ಕಾಯರೋಹಣ ಸ್ವಾಮಿ ಎಂಬ ಪದದ ಸಂಕ್ಷಿಪ್ತ ರೂಪವಾಗಿ ಇಂದು ಬಳಸಲ್ಪಡುತ್ತಿದೆ. ಈ ದೇವರ ವಿಗ್ರಹಗಳು ಬೇವಿನ ಮರದ ಕೆಳಗೆ ಮಾವಿನ ಮರದ ಕೆಳಗೆ ಇದೆ. (ಬೇವು ಮತ್ತು ಮಾವು ಸಹಾ ಕರೋನಾಕ್ಕೆ ಉತ್ತಮ ಔಷಧ ಎಂದು ಆಯುರ್ವೇದ ವೈದ್ಯರು ಹೇಳುತ್ತಿದ್ದಾರೆ)
ಈ ದೇವಾಲಯಗಳು ಶೈವ ಪರಂಪರೆಯ ಪಾಶುಪತ ಪಂಥದ ಅನುಸಾರ ಕಟ್ಟಲ್ಪಟ್ಟಿವೆ. ಈ ಪಂಥದ ಮುಖ್ಯ ಸಂತ ಲಾಕುಲೀಶನು ಶಿವನ 28 ನೆಯ ಹಾಗೂ ಕೊನೆಯ ಅವತಾರ ಎಂದು ನಂಬುತ್ತಾರೆ. ಈತನೇ ಈಗ ನಾವು ಚರ್ಚಿಸುತ್ತಿರುವ ಕಾಯರೋಹಣಂ ಅಥವಾ ಕರೋನಂ ಪದದ ಹುಟ್ಟಿಗೆ ಮುಖ್ಯ ಕಾರಣ.
ಇದೇ ರೀತಿಯ ದೇವಾಲಯವೊಂದು ಲಾಕುಲೀಶನ ಜನ್ಮಸ್ಥಳವಾದ ಗುಜರಾತ್’ನ ವಡೋದರಾದ (ಮೋದಿಯವರ ಕ್ಷೇತ್ರ) ಕಾರ್ವನ್ ಎಂಬ ಊರಿನಲ್ಲಿ ಇದೆ. ಹಿಂದೆ ಇದು ಕರೋಹನ ಎಂದು ಕರೆಯಲ್ಪಡುತ್ತಿತ್ತು. ಕರೋಹನವು ಇಂದು ಕಾಯಾವರೋಹಣ ಅಥವಾ ಕಾರ್ವನ್ ಎಂದು ಕರೆಯಲ್ಪಡುತ್ತದೆ. ಇಲ್ಲಿನ ದೇವರು ಕಾಯಾವರೋಹಣೇಶ್ವರ. ಸಂಕ್ಷಿಪ್ತವಾಗಿ ಕರೋನೇಶ್ವರ. ಈ ದೇವಾಲಯ ದ್ವಾದಶ ಜ್ಯೋತಿರ್ಲಿಂಗಗಳಿಗೆ ಸಮ ಎಂಬ ದಂತ ಕಥೆಗಳಿವೆ.
ಈ ದೇವಾಲಯವನ್ನು ವಿಶ್ವಾಮಿತ್ರರು ಕಾಶಿಗೆ ಸಮನಾಗಿರುವಂತೆ ಸ್ಥಾಪಿಸಿದರು ಎಂದು ಹೇಳಲಾಗುತ್ತದೆ. ಸ್ವಾರಸ್ಯವೆಂದರೆ ಕುಂಭಕೋಣಂ ನ ಕರೋನಾದಿಂದ ಇಲ್ಲಿಗೆ ಎಷ್ಟು ದೂರವಿದೆಯೋ ಹೆಚ್ಚು ಕಡಿಮೆ ಅಷ್ಟೇ ದೂರ ಕಾಶಿ ಮತ್ತು ಕುಂಭಕೋಣಂ ನ ಕರೋನಾ ನಡುವೆ ಇದೆ!
ಇಲ್ಲಿನ ದೇವರ ವಿಗ್ರಹದೊಳಕ್ಕೆ ಲಾಕುಲೀಶ ಶಾಂಭವೀ ಮುದ್ರೆಯಲ್ಲಿ ಐಕ್ಯವಾದನು ಎಂಬ ಕಥೆ ಇದೆ. ಮೂರ್ತಿಯನ್ನು ದೇವರು ತನ್ನ ಕೈಯ್ಯಲ್ಲಿ ಶಾಸ್ತ್ರಗ್ರಂಥ ಮತ್ತು ಕಿತ್ತಳೆ ಹಣ್ಣನ್ನು ಹಿಡಿದಿರುವಂತೆ ಕೆತ್ತಲಾಗಿದೆ. ಈ ಪಂಥದಲ್ಲಿ ಭಸ್ಮ ಅಥವಾ ವಿಭೂತಿ ಧಾರಣೆಗೆ ಬಹಳ ಮಹತ್ವವಿದೆ. (ಕರೋನಾ ಕ್ಕೆ ಬಹುದೊಡ್ಡ ಔಷಧಿ ಸಿಟ್ರಸ್ ಹಣ್ಣುಗಳು ಮತ್ತು ಭಸ್ಮ/ವಿಭೂತಿ ಎಂದು ಶಾಂಭವಿ ಮುದ್ರೆಯನ್ನು ಅಥವಾ ಕ್ರಿಯೆಯನ್ನು ಹೇಳಿಕೊಡುವ ಸದ್ಗುರು ಹೇಳುತ್ತಾರೆ)
ಒಟ್ಟಾರೆಯಾಗಿ ಈ ಎಲ್ಲ ಚುಕ್ಕಿಗಳನ್ನು ಕುರುಡು ಕುರುಡಾಗಿ ಜೋಡಿಸಿದಾಗ ನನಗೆ ಹೊಳೆದದ್ದು…
ಈ ಕೊರೋನಾ ರೋಗಕ್ಕೆ ಅಧಿಪತಿ ಯಾರೆಂದರೆ ಪಶುಗಳಿಗೆಲ್ಲ ಅಧಿಪತಿಯಾದ ಪಶುಪತಿ ಶಿವ. ಚೀನಾ ಜೈವಿಕ ಅಸ್ತ್ರವಾಗಿ ಇದನ್ನು ಬಳಸಿಲ್ಲ ಎಂಬುದನ್ನು ನಂಬುಬುದಾದರೆ ಪ್ರಾಣಿ ಪಕ್ಷಿಗಳಿಗೆ ತೊಂದರೆ ಕೊಟ್ಟ ಕಾರಣದಿಂದ ಪ್ರಕೃತಿಯ ಒಡೆಯನಾದ ಪಶುಪತಿಗೆ ಬಂದ ಕೋಪದಿಂದ ಈ ವಿಪರೀತ ಘಟಿಸುತ್ತಿದೆಯೆಂದು ಆಸ್ತಿಕರು ಸುಲಭವಾಗಿ ಊಹಿಸಬಹುದು. ಸಕಲ ಜೀವರಾಶಿಗಳಿಗೆ ಅಧಿಪತಿಯಾದ ಶಿವ ಇಲ್ಲಿ ಕಾಯರೋಹಣೇಶ್ವರ ಅಂದರೆ ಕರೋನೇಶ್ವರನಾಗಿ ಪೂಜಿಸಲ್ಪಡುತ್ತಿದ್ದಾನೆ. ಲಾಕ್’ಡೌನ್’ನ ಈ ಸಂದರ್ಭದಲ್ಲಿ ಕೊರೋನಾ ವಿರುದ್ಧ ಹೋರಾಡಲು ನಮ್ಮ ನಮ್ಮ ಕಾಯಗಳನ್ನು ಆಧ್ಯಾತ್ಮಿಕವಾಗಿ ಮೇಲೆತ್ತಿ ಆರೋಹಣ ಮಾಡಿ ಯೋಗ, ಕ್ರಿಯಾ ಹಾಗೂ ಮುದ್ರೆಗಳ ಮೂಲಕ, ಮಂತ್ರಜಪ, ನಾಮಜಪ, ಸ್ತೋತ್ರ ಪಾರಾಯಣಗಳ ಮೂಲಕ, ಭಸ್ಮ, ವಿಭೂತಿ, ಅರಿಶಿನ, ಬೇವು, ನಿಂಬೆ, ಕಿತ್ತಳೆ, ನೆಲ್ಲಿಕಾಯಿಯಂಥಾ ವಸ್ತುಗಳನ್ನು ಬಳಸಿ ದೇಹದ ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸಿಕೊಳ್ಳುವುದೊಂದೇ ಜೀವ ಉಳಿಸಿಕೊಳ್ಳಲು ಇರುವ ಮಾರ್ಗ. ಆದ್ದರಿಂದ ದೇವರಿಗೆ ಶರಣಾಗಿ ಪ್ರಾಣಿ ಪಕ್ಷಿಗಳಿಗೆ ದಯೆ ತೋರಿಸಿ ಅವುಗಳಿಗೆ ನೆಮ್ಮದಿಯ ವಾತಾವರಣ ಕಲ್ಪಿಸಿ ಅವಿಗಳ ಸಂತತಿ ವೃದ್ಧಿಗೆ ಅವಕಾಶ ಮಾಡಿಕೊಡುವುದೊಂದೇ ದಾರಿ. ಲಾಕ್ ಡೌನ್ ಮುಗಿಯುವವರೆಗೂ ನಾವುಗಳು ಸಾತ್ವಿಕ ದಾರಿಯಲ್ಲಿ ನಮ್ಮ ನಮ್ಮ ಕಾಯದ ಆರೋಹಣಕ್ಕೆ ಮುಂದಾಗುವುದೇ ಒಳ್ಳೆಯ ನಿರ್ಧಾರ. ಇಲ್ಲದಿದ್ದರೆ ಕಾಯವೇ ಆರೋಹಣವಾಗಿಬಿಡುವುದರಲ್ಲಿ ಸಂಶಯವಿಲ್ಲ.
ಕೊರೋನಾಕ್ಕೆ ಕಾಯಾರೋಹಣವೇ ಮದ್ದು!
ಗೆಳೆಯರೇ, ಯಾವುದೋ ಒಂದು ಹೆಸರು ಸುಮ್ಮ ಸುಮ್ಮನೆ ಖ್ಯಾತಿಗೆ ಬರುವುದಿಲ್ಲ. ನಾಮಬಲದ ಶಕ್ತಿಯ ಬಗ್ಗೆ ಅನೇಕ ವಿಚಾರಗಳಿವೆ. ಹೀಗಾಗಿ ಇದೊಂದು ಸಂಶೋಧನೆಗೆ ಗ್ರಾಸವಾಗಿರುವ ವಿಚಾರ ಎಂಬ ಕಾರಣಕ್ಕಾಗಿ ಕುತೂಹಲಕ್ಕಾಗಿ ಗೂಗಲ್ ಬಳಸಿ ಹುಡುಕಿದಾಗ ಸಿಕ್ಕ ಮಾಹಿತಿಗಳಾಗಿದ್ದು ಸಣ್ಣಪುಟ್ಟ ದೋಷಗಳಿಂದ ಕೂಡಿರಬಹುದು. ಕೇವಲ ಕುತೂಹಲದ ದೃಷ್ಟಿಯಿಂದ ಈ ಟೈಮ್ ಪಾಸ್ ಸಂಶೋಧನೆ ಮಾಡಿರುವುದರಿಂದ ಕೇವಲ ಚುಕ್ಕಿಗಳನ್ನಷ್ಟೇ ನೀಡಿದ್ದೀನಿ. ಹೇಗಿದ್ದರೂ ಲಾಕ್ ಡೌನ್ ನಿಂದ ಬಿಡುವಾಗಿದ್ದೀರಿ. ಕರೋನಾ ಬಗ್ಗೆ ಯೋಚಿಸಿ ಪ್ಯಾನಿಕ್ ಆಗುವುದರ ಬದಲು ಟೈಮ್ ಪಾಸ್ ಗಾಗಿ ಇಲ್ಲಿ ನೀಡಿರುವ ಚುಕ್ಕೆಗಳನ್ನು ಸೇರಿಸಿ ಚಿತ್ರ ಮಾಡಬಹುದು. ನಾನು ನೀಡಿರುವ ಈ ಮಾಹಿತಿಗಳಲ್ಲಿ ತಪ್ಪುಗಳಿದ್ದರೆ ಖಂಡಿತಾ ನನಗೆ ತಿಳಿಸಿ. ನಿಮಗೆ ಆಸಕ್ತಿಯಿದ್ದರೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀವೂ ಹುಡುಕಿ ಸಂಗ್ರಹಿಸಬಹುದು.
ಧನ್ಯವಾದಗಳು
ಕರೋನಾಕ್ಕೆಮದ್ದುಕಾಯಾರೋಹಣ
Get in Touch With Us info@kalpa.news Whatsapp: 9481252093
Discussion about this post