ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ರಾಜ್ಯದಲ್ಲಿ ಶಾಲೆಗಳ ಆರಂಭದ ಕುರಿತಾಗಿ ಇಂದಿನವರೆಗೂ ಯಾವುದೇ ರೀತಿಯ ನಿರ್ಧಾರ ಕೈಗೊಂಡಿಲ್ಲ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶಾಲೆಗಳ ಆರಂಭದ ಕುರಿತಾಗಿ ಅಧಿಕಾರಿಗಳ ಜೊತೆ ಚರ್ಚಿಸಿ, ಮಾಹಿತಿ ಸಂಗ್ರಹಿಸಲಾಗಿದೆ. ಬೇರೆ ರಾಜ್ಯದಲ್ಲಿ ಶಾಲೆ ಆರಂಭ ಹಾಗೂ ಪರಿಸ್ಥಿತಿಯ ಅವಲೋಕನ ಮಾಡಲಾಗಿದೆ. ಇದರೊಂದಿಗೆ ಶಿಕ್ಷಣ ಇಲಾಖೆಯ ಆಯುಕ್ತರು ಮುಂದಿನ ಎರಡು ದಿನ ಸಮಾಜ ಕಲ್ಯಾಣ ಇಲಾಖೆ, ಬಿಬಿಎಂಪಿ, ಆರೋಗ್ಯ ಇಲಾಖೆ ಹಾಗೂ ರಾಜ್ಯದ ಎಲ್ಲ ತಾಲೂಕುಗಳ ಎಸ್’ಡಿಎಂಸಿ ಹಾಗೂ ಅವರ ಪ್ರತಿನಿಧಿಗಳ ಜೊತೆಯ ಚರ್ಚಿಸಿ ಅದರ ಆಧಾರದ ಮೇಲೆ ವರದಿ ಸಲ್ಲಿಸಲಿದ್ದಾರೆ ಎಂದರು.
ಮೊರಾರ್ಜಿ ದೇಸಾಯಿ, ಕಿತ್ತೂರು ಚೆನ್ನಮ್ಮ ಹಾಗೂ ಆಶ್ರಮ ಶಾಲೆಗಳ ಕುರಿತಾಗಿಯೂ ಸಹ ಮಾಹಿತಿ ಸಂಗ್ರಹಿಸಲಿದ್ದು, ಇದಕ್ಕೆ ಪೂರಕವಾಗಿ ಈಗಾಗಲೇ ಡಿಡಿಪಿಐ ಹಾಗೂ ಬಿಇಒಗಳ ಜೊತೆಯ ಚರ್ಚೆ ಆಗಿದೆ. ಶಿಕ್ಷಕರ ಸಂಘದ ಅಧ್ಯಕ್ಷರ ಜೊತೆಯಲ್ಲಿ ಚರ್ಚೆ ಆಗಿದೆ. ಈ ಎಲ್ಲ ವರದಿಗಳೊಂದಿಗೆ ಮುಖ್ಯಮಂತ್ರಿಗಳಿಗೆ ಸಲ್ಲಿಸಿ, ಆನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ
ಇನ್ನು, ಬಹು ನಿರೀಕ್ಷಿತ ಶಿಕ್ಷಕರ ವರ್ಗಾವಣೆ ಕುರಿತಾಗಿ ಮಾತನಾಡಿದ ಸಚಿವರು, ಸದ್ಯ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಅದು ಮುಕ್ತಾಯವಾದ ನಂತರ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುವುದು ಎಂದರು.
ವರ್ಗಾವಣೆಯ ಪೂರ್ವಭಾವಿ ಪ್ರಕ್ರಿಯೆ ಕ್ರಮಗಳು ಈಗಾಗಲೇ ಆರಂಭವಾಗಿದೆ. ಪ್ರಾಂಶುಪಾಲರ ಹುದ್ದೆಗೆ ಪದೋನ್ನತಿ ಹಾಗೂ ಶಿಕ್ಷಕರ ವರ್ಗಾವಣೆ ನೀತಿ ಸಂಹಿತೆ ಮುಕ್ತಾಯವಾದ ನಂತರ ಆರಂಭವಾಗಲಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post