ಜಾಂಗ್-ನಾಮ್ 2011ರಲ್ಲಿ ಟೋಕಿಯೋ ಸಮೀಪ ಇರುವ ಡಿಸ್ನಿಲ್ಯಾಂಡ್‌ಗೆ ಭೇಟಿ ನೀಡುವ ಸಲುವಾಗಿ ಜಪಾನ್‌ಗೆ ಪ್ರಯಾಣ ಬೆಳಿಸಿದ ವೇಳೆ ನರಿಟಾ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡೊಮಿನಿಕನ್ ರಿಪಬ್ಲಿಕ್‌ನ ನಕಲಿ ಪಾಸ್‌ಪೋರ್ಟ್ ಹೊಂದಿದ್ದ ಜಾಂಗ್-ನಮ್‌ನನ್ನು ಬಂಧಿಸಲಾಯಿತು. ಏಳುದಿನಗಳ ಕಾಲ ಕಸ್ಟಡಿಯಲ್ಲಿದ್ದು, ಜಪಾನ್ ಸರ್ಕಾರದ ಆದೇಶದಂತೆ ಜಾಂಗ್-ನಾಮ್‌ನನ್ನು ಚೀನಾಗೆ ಕಳುಹಿಸಲಾಯಿತು.
ಈ ಘಟನೆಯಿಂದ ಮುಜುಗರಕ್ಕೊಳಗಾದ ಜಾಂಗ್-ಇಲ್ ತನ್ನ ಚೀನಾ ಭೇಟಿಯನ್ನು ರದ್ದು ಮಾಡಿದನು. ಈ ಟೋಕಿಯೋ ಘಟನೆ ನಡೆಯುವಲ್ಲಿಯವರೆಗೂ ಜಾಂಗ್-ನಾಮ್‌ನೇ ಉತ್ತರ ಕೊರಿಯಾದ ಉತ್ತರಾಧಿಕಾರಿ ಎಂದು ಬಿಂಬಿಸಲಾಗಿತ್ತು. ಆದರೆ ಆನಂತರ ಆತನನ್ನು ದೂರ ಮಾಡಿ, ಆತನ ತಮ್ಮ ಕಿಮ್-ಜಾಂಗ್-ಉನ್‌ನನ್ನು ಉತ್ತರಾಧಿಕಾರಿಯನ್ನಾಗಿ ಮಾಡಲು ನಿರ್ಧರಿಸಲಾಯಿತು.
ಟೋಕಿಯೋ ಶಿಂಬುನ್ ಎಂಬ ಪತ್ರಿಕೆಗೆ ಇಮೇಲ್ ಮಾಡಿದ ಜಾಂಗ್-ನಾಮ್ ‘ನಾನು ನನ್ನ ವಿದ್ಯಾಭ್ಯಾಸವನ್ನು ಸ್ವಿಜ್ಜರ್‌ಲ್ಯಾಂಡ್‌ನಲ್ಲಿ ಮುಗಿಸಿ ಉತ್ತರ ಕೊರಿಯಾಕ್ಕೆ ಹಿಂತಿರುಗಿದ ನಂತರ ನನ್ನ ತಂದೆಯ ವಿಚಾರಗಳಿಂದ ವಿಮುಖನಾಗಿದ್ದೆ. ಉತ್ತರ ಕೊರಿಯಾ ಬೆಳವಣಿಗೆ ಹೊಂದಬೇಕಾದರೆ ಮಾರುಕಟ್ಟೆ ವಿಸ್ತರಣೆಯಾಗಬೇಕು ಮತ್ತು ಬದಲಾವಣೆಯ ಗಾಳಿ ಬಿಸಬೇಕು ಎಂದು ಪ್ರತಿಪಾದಿಸಿದ್ದೆ. ಈ ನನ್ನ ವಿಚಾರಗಳನ್ನು ತುಂಬಾ ಅನುಮಾನದಿಂದ ನೋಡಲಾಯಿತು.
ಮುಂದುವರೆದು, ‘ವಿದೇಶದಲ್ಲಿ ಬಹಳ ವರ್ಷ ಓದಿದ ಕಾರಣ ಬಂಡವಾಳಶಾಹಿತನ ಮೈಗೂಡಿಸಿಕೊಂಡಿದ್ದೇನೆ. ಈ ನಂತರದಲ್ಲಿ ತನ್ನ ಮಲ ತಮ್ಮ-ತಂಗಿಯಂದಿರಾದ ‘ಜಾಂಗ್-ಚೊಲ್’, ‘ಜಾಂಗ್-ಉನ್’ ಮತ್ತು ‘ಯೋ-ಜಾಂಗ್’ರ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವರನ್ನು ವಿದೇಶ ಶಿಕ್ಷಣದಿಂದ ದೂರ ಮಾಡಲಾಯಿತು’ ಎಂದು ಹೇಳಿಕೊಂಡಿದ್ದಾನೆ.
ಈ ಘಟನೆಗಳಿಂದಾಗಿ ಉತ್ತರ ಕೊರಿಯಾದಿಂದ ದೂರವಾಗಲು ನಿರ್ಧರಿಸಿದ ಜಾಂಗ್-ನಾಮ್ ಸದ್ಯ ಚೀನಾದ ಮಕಾನ್‌ನಲ್ಲಿ ವಾಸ್ತವ್ಯ ಹೂಡಿ ನೆಲೆ ಕಂಡುಕೊಂಡಿದ್ದಾನೆ. ಈ ಘಳಿಗೆಗೂ ಉತ್ತರ ಕೊರಿಯಾ ಬದಲಾಗಬೇಕೆನ್ನುವ ತನ್ನ ಅಭಿಪ್ರಾಯದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಈತನ ಕಾಲದಲ್ಲೇ ಆ ಆಸೆ ಈಡೇರಲಿ ಎನ್ನುವುದು ನಮ್ಮ ಆಸೆ ಕೂಡ.
(ಮುಂದುವರೆಯುವುದು)
Discussion about this post