1950ರಿಂದಲೂ ಉತ್ತರ ಕೊರಿಯಾ ಅಣುಶಕ್ತಿಯನ್ನು ಅಭಿವೃದ್ಧಿ ಪಡಿಸುವಲ್ಲಿ ದೃಷ್ಟಿ ನೆಟ್ಟಿದೆ. ಇಷ್ಟಾದರೂ ಸಹ ಇಲ್ಲಿಯವರೆಗೂ ಒಂದು ಸಕ್ರಿಯ ನ್ಯೂಕ್ಲಿಯರ್ ರಿಯಾಕ್ಟರ್ ಹೊಂದಿಲ್ಲವೆಂದರೆ ನಂಬಲೇಬೇಕು. ಆದರೆ 2006ರಿಂದ 2016ರವರೆಗೆ 4 ನ್ಯೂಕ್ಲಿಯರ್ ಟೆಸ್ಟ್‍ಗಳನ್ನು ಮಾಡಿದೆ ಮತ್ತು ಅಣ್ವಸ್ತ್ರಗಳನ್ನು ಹೊಂದಿರುವುದಾಗಿ ಘೋಷಿಸಿಕೊಂಡಿದೆ.
2006 ಅಕ್ಟೋಬರ್ 6ರಂದು ಮೊಟ್ಟಮೊದಲ ಬಾರಿಗೆ ಯಶಸ್ವಿಯಾಗಿ ಅಣು ಪರೀಕ್ಷೆ ನಡೆಸಿದ್ದಾಗಿ ಉತ್ತರ ಕೊರಿಯಾ ಘೋಷಿಸಿಕೊಂಡಿತು. 2009ರಲ್ಲಿ ಎರಡನೆಯ ಬಾರಿಗೆ 2013ರಲ್ಲಿ ಮೂರನೆಯ ಬಾರಿಗೆ ಮತ್ತು ತೀರ ಇತ್ತೀಚೆಗೆ 2016ರಲ್ಲಿ ನಾಲ್ಕನೆಯ ಬಾರಿಗೆ ಅಣ್ವಸ್ತ್ರ ಪರೀಕ್ಷೆ ನಡೆಸಿದೆ.
2016 ಜನವರಿ 6ರಂದು ಪುಂಗೈ- ರೀಯಲ್ಲಿ 4ನೆಯ ಬಾರಿಗೆ ಅಣ್ವಸ್ತ್ರ ಪರೀಕ್ಷೆ ನಡೆಸಿದೆ. `ಯುನೈಟೆಡ್ ಸ್ಟೇಟ್ಸ್ ಜಿಯೋ ಲಾಜಿಕಲ್ ಸರ್ವೀಸ್’ನ ಪ್ರಕಾರ ಈ ಅಣ್ವಸ್ತ್ರ ಪರೀಕ್ಷೆಯು 5.1 ತೀವ್ರತೆಯ ಭೂಕಂಪವನ್ನು ಸೃಷ್ಟಿಸಿದೆ ಹಾಗೂ `ಚೈನಾ ಅರ್ಥ್‍ಕ್ವೇಕ್ ನೆಟ್‍ವಕ್ರ್ಸ್ ಸೆಂಟರ್’ನ ಪ್ರಕಾರ 4.3 ತೀವ್ರತೆಯ ಭೂಕಂಪವನ್ನು ಉಂಟುಮಾಡಿದೆ.
ಉತ್ತರ ಕೊರಿಯಾದ ಮಾಧ್ಯಮದ ವರದಿಯಂತೆ ಉತ್ತರ ಕೊರಿಯಾವು ಯಶಸ್ವಿಯಾಗಿ ಅಣುಪರೀಕ್ಷೆಯನ್ನು ಮಾಡಿದೆ ಮತ್ತು ಇದು ಸಾಂಪ್ರದಾಯಿಕ ಅಣುಪರೀಕ್ಷೆ ಮಾತ್ರವೇ ಅಲ್ಲದೆ `ಹೈಡ್ರೋಜನ್ ಬಾಂಬ್’ ಟೆಸ್ಟ್ ಎಂದು ಹೇಳಿಕೊಂಡಿದೆ. ಹೈಡ್ರೋಜನ್ ಬಾಂಬ್ ಸಾಂಪ್ರದಾಯಿಕ ಅಣ್ವಸ್ತ್ರಕ್ಕಿಂತ ಬಹಳ ಶಕ್ತಿಶಾಲಿಯಾಗಿದ್ದು, ಭಾರೀ ಪ್ರಮಾಣದಲ್ಲಿ ಹಾನಿಯುಂಟುಮಾಡಬಲ್ಲದಾಗಿದೆ. ಆದರೆ ದಕ್ಷಿಣ ಕೊರಿಯಾದ ಅಧಿಕಾರಿಗಳು ಮತ್ತು ಮಾಧ್ಯಮಗಳು ಉತ್ತರ ಕೊರಿಯಾದ ಹೇಳಿಕೆಯನ್ನು ಅಲ್ಲಗಳೆದಿದ್ದು, ಸಮೂಹನಾಶಕ ಹೈಡ್ರೋಜನ್ ಬಾಂಬ್ ಉತ್ತರ ಕೊರಿಯಾ ಬಳಿ ಇರುವ ಸಾಧ್ಯತೆಯನ್ನು ತಳ್ಳಿಹಾಕಿವೆ.
ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿಯನ್ನು ಕಡೆಗಣಿಸಲೂ ಸಾಧ್ಯವಿಲ್ಲ ಅಥವಾ ಸಂಪೂರ್ಣವಾಗಿ ನಂಬಲೂ ಸಾಧ್ಯವಿಲ್ಲ. ಏಕೆಂದರೆ, ಮಿಲಿಟರಿಯನ್ನೇ ಉಸಿರಾಗಿಸಿಕೊಂಡಿರುವ ಉತ್ತರ ಕೊರಿಯಾದ ಬಳಿ ಸಮೂಹ ನಾಶಕ ಅಸ್ತ್ರಗಳು ಇರುವ ಸಾಧ್ಯತೆಯೂ ಇದೆ.
(ಮುಂದುವರೆಯುವುದು)
Discussion about this post