ನವದೆಹಲಿ: ಇಡಿಯ ಭಾರತ ಮಾತ್ರವಲ್ಲ ವಿಶ್ವದ ಗಮನವನ್ನು ಸೆಳೆದಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆ ಶಾಂತಿಗಾಗಿ ಎಂದಿದ್ದ ಪಾಕಿಸ್ಥಾನದ ನಿಜಬಣ್ಣ ಬಯಲಾಗಿದ್ದು, ಭಾರತದ ಆ ಒಂದು ಮಾತಿಗೆ ಹೆದರಿ ಬಿಡುಗಡೆ ಮಾಡಿತ್ತು ಎಂಬುದು ಬಹಿರಂಗಗೊಂಡಿದೆ.
ಈ ಕುರಿತಂತೆ ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ಅಭಿನಂದನ್ ಅವರನ್ನು ಬಿಡುಗಡೆ ಮಾಡುವ ವಿಚಾರದಲ್ಲಿ ಕೊಂಚ ಏರುಪೇರಾದರೂ ಪಾಕಿಸ್ಥಾನವನ್ನೇ ಉಡಾಯಿಸುವ ಸಲುವಾಗಿ ಸುಮಾರು 12 ಕ್ಷಿಪಣಿಗಳನ್ನು ಶತ್ರುರಾಷ್ಟ್ರದತ್ತ ಮುಖಮಾಡಿಸಲಾಗಿತ್ತು. ಇದಕ್ಕೆ ಅಕ್ಷರಶಃ ಹೆದರಿದ್ದ ಪಾಕಿಸ್ಥಾನ, ಶಾಂತಿಗಾಗಿ ಎಂಬ ಬೋರ್ಡ್ ಹಾಕಿ, ಅಭಿನಂದನ್ ಅವರನ್ನು ಬಿಡುಗಡೆ ಮಾಡಿತ್ತು.
ಇನ್ನು, ಅಭಿನಂದನ್ ಅವರ ಸುರಕ್ಷತೆ ವಿಚಾರದಲ್ಲಿ ಪಾಕಿಸ್ಥಾನದ ಗುಪ್ತಚರ ದಳ ಐಎಸ್’ಐ ಮುಖ್ಯಸ್ಥರೊಂದಿಗೆ ಮಾತನಾಡಿದ್ದ ಭಾರತದ ಸಂಶೋಧನೆ ಹಾಗೂ ವಿಶ್ಲೇಷಣೆ(ರಾ) ವಿಭಾಗದ ಕಾರ್ಯದರ್ಶಿ ಅನಿಲ್ ದಸ್ಮಾನಾ ಅವರು, ಅಭಿನಂದನ್ ಅವರಿಗೆ ಕೊಂಚ ತೊಂದರೆಯಾದರೂ ಅದರ ಕ್ರೂರ ಪರಿಣಾಮವನ್ನು ಎದುರಿಸಲು ಸಿದ್ದರಾಗಿರಿ ಎಂದು ಎಚ್ಚರಿಕೆ ನೀಡಿದ್ದರು.
ಅಲ್ಲದೇ, ನಮ್ಮ ವಿಂಗ್ ಕಮಾಂಡರ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿ, ಭಾರತಕ್ಕೆ ಕಳುಹಿಸಿ. ಒಂದು ವೇಳೆ ಅವರಿಗೆ ಏನಾದರೂ ಹೆಚ್ಚುಕಡಿಮೆಯಾದರೆ ಕೆಟ್ಟ ಪರಿಣಾಮ ಎದುರಿಸುತ್ತೀರಿ. ಇದಕ್ಕಾಗಿ ನಾವು ರಾಜಾಸ್ಥಾನದಲ್ಲಿ 12 ಕ್ಷಿಪಣಿಗಳನ್ನು ನಿಯೋಜನೆ ಮಾಡಿ ನಿಮ್ಮ ದೇಶದ ಕಡೆ ಮುಖಮಾಡಿ ನಿಲ್ಲಿಸಿದ್ದೇವೆ ಎಂದು ಎಚ್ಚರಿಕೆ ನೀಡಿದ್ದರು.
ಆದರೆ, ಇದಕ್ಕೆ ಪ್ರತಿಯಾಗಿ ಪಾಕಿಸ್ಥಾನ ಸಹ 13 ಕ್ಷಿಪಣಿಗಳನ್ನು ಭಾರತದೆಡೆಗೆ ಮುಖ ಮಾಡಿ ನಿಲ್ಲಿಸಿ, ಸೆಡ್ಡು ಹೊಡೆದಿತ್ತು.
ಈ ಹಂತದಲ್ಲಿ ಪ್ರವೇಶ ಮಾಡಿದ್ದೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್… ದಸ್ಮಾನಾ ಅವರೊಂದಿಗೆ ಮಾತನಾಡಿದ ಅಜಿತ್ ಧೋವಲ್, ಪಾಕಿಸ್ಥಾನವನ್ನು ಬಗ್ಗುಬಡಿಯಲು ಅಮೆರಿಕಾ, ಯುಎಇ ಹಾಗೂ ಸೌದಿ ಅರೇಬಿಯಾ ಜೊತೆಗೆ ಮಾತನಾಡಿ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿಸಿದ್ದರು.
ಈ ಬೆಳವಣಿಗೆಯಿಂದ ಜಾಗತಿಕವಾಗಿ ಆಕ್ರಮಣಕ್ಕೆ ಒಳಗಾಗುವ ಭಯದಿಂದ ನಡುಗಿ ಹೋಗಿದ್ದ ಪಾಕಿಸ್ಥಾನ ಅಭಿನಂದನ್ ಅವರನ್ನು ಬಿಡುಗಡೆ ಮಾಡಿತ್ತು. ಆದರೆ, ಇದಕ್ಕೆ ಶಾಂತಿಪ್ರಕ್ರಿಯೆಯ ಭಾಗ ಎಂಬ ಬೋರ್ಡ್ ನೇತುಹಾಕಿತ್ತು. ಆದರೆ, ಆದರೆ ಪಾಪಿಯ ಮುಖವಾಡ ಈಗ ಮತ್ತೆ ಕಳಚಿದೆ.
Discussion about this post