ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜನವರಿ 31ರಂದು ಪ್ರಸಕ್ತ ಸಾಲಿನ ಮೊದಲ ಹಂತದ ಪಲ್ಸ್ ಪೋಲಿಯೋ ಲಸಿಕೆಯನ್ನು ಜಿಲ್ಲೆಯಲ್ಲಿ ಗ್ರಾಮಾಂತರ ಪ್ರದೇಶದ 91,415 ಮತ್ತು ನಗರ ಪ್ರದೇಶದ 5 ವರ್ಷದೊಳಗಿನ 44,423 ಮಕ್ಕಳಿಗೆ ಹಾಕುವ ಗುರಿ ಹೊಂದಲಾಗಿದ್ದು, ಅದಕ್ಕಾಗಿ ಪೂರ್ವಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್. ವೈಶಾಲಿ ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೋಲಿಯೋ ಲಸಿಕಾ ಆಂದೋಲನದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
200ಕ್ಕಿಂತ ಹೆಚ್ಚಿನ ಸಂಖ್ಯೆಯ ಮಕ್ಕಳಿರುವಲ್ಲಿ ಮತ್ತೊಂದು ಲಸಿಕಾ ಕೇಂದ್ರವನ್ನು ತೆರೆಯಲು ಕ್ರಮವಹಿಸಲಾಗುವುದು. ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ 1019 ಬೂತ್‌ಗಳನ್ನು ಹಾಗೂ ತಂಡಗಳನ್ನು ರಚಿಸಲಾಗಿದ್ದು, 3,472 ವ್ಯಾಕ್ಸಿನೇಟರ್ಸ್‌ಗಳನ್ನು ಬಳಸಿಕೊಳ್ಳಲಾಗುವುದಲ್ಲದೆ 199 ಮೇಲ್ವಿಚಾರಕರು, 33 ಟ್ರಾನ್ಸಿಟ್ ತಂಡ ಹಾಗೂ 22 ಸಂಚಾರಿ ತಂಡಗಳನ್ನು ರಚಿಸಿ, ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದವರು ತಿಳಿಸಿದರು.
ಇದಲ್ಲದೇ 557 ಆರೋಗ್ಯ ಸಿಬ್ಬಂಧಿ ಮತ್ತು ಮೇಲ್ವಿಚಾರಕರು, 2,418 ಅಂಗನವಾಡಿ ಮತ್ತು 13337 ಆಶಾ ಕಾರ್ಯಕರ್ತೆಯರು ಸೇರಿದಂತೆ ಒಟ್ಟು 4312 ಸಿಬ್ಬಂಧಿಗಳ ಸೇವೆಯನ್ನು ಬಳಸಿಕೊಳ್ಳಲಾಗುವುದು. ಇವರೊಂದಿಗೆ 162 ಜನ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ಉಸ್ತುವಾರಿ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಇರಲಿದ್ದಾರೆ ಎಂದವರು ತಿಳಿಸಿದ್ದಾರೆ.
ಲಸಿಕೆ ಹಾಕಲು ನಿಯೋಜಿಸಲಾದ ಸಿಬ್ಬಂಧಿಗಳಿಗೆ ಈಗಾಗಲೇ ಸರ್ಕಾರ ಹೊರಡಿಸಿರುವ ಕೋವಿಡ್-19ರ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಹಾಗೂ ಕೈಗವಸು ಹಾಗೂ ಮುಖಗವಸು ಬಳಸುವಂತೆ ಸೂಚಿಸಲಾಗಿದೆ. ಲಸಿಕೆ ಹಾಕುವ ಸಂದರ್ಭದಲ್ಲಿ ಮಗುವನ್ನು ಪೋಷಕರೆ ತಮ್ಮ ಕೈಯಲ್ಲಿಟ್ಟುಕೊಂಡು, ನಿಯೋಜಿತ ಸಿಬ್ಬಂಧಿಗಳೂ ಕೂಡ ಮಗುವನ್ನು ಸ್ಪರ್ಶಿಸದಂತೆ ಲಸಿಕೆ ಹಾಕಲು ಸೂಕ್ತ ತರಬೇತಿ ನೀಡಲಾಗಿದೆ ಎಂದರು.
ಮಗುವಿಗೆ ಕೆಮ್ಮು, ಸೀನು, ಜ್ವರ ಮುಂತಾದವುಗಳು ಕಂಡು ಬಂದಲ್ಲಿ ಲಸಿಕೆಯನ್ನು ಹಾಕದಂತೆ ಆರೋಗ್ಯ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಅಂತೆಯೇ ಮನೆಗಳಲ್ಲಿ ಕೊರೋನಾ ಸೇರಿದಂತೆ ಗಂಭೀರ ಹಾಗೂ ಸಾಮಾನ್ಯ ಸ್ವರೂಪದ ಕಾಯಿಲೆಯ ಲಕ್ಷಣಗಳು ಕಂಡುಬಂದಲ್ಲಿ ಅಂತಹವರನ್ನು ಗುರುತಿಸಿ ಚಿಕಿತ್ಸೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ನೌಕರರ ಮಕ್ಕಳು ಲಸಿಕಾ ಕೇಂದ್ರಕ್ಕೆ ಗೈರಾಗುವುದನ್ನು ಗುರುತಿಸಲಾಗಿದ್ದು, ನೌಕರರು ತಮ್ಮ ಮಕ್ಕಳನ್ನು ಲಸಿಕಾ ಕೇಂದ್ರಕ್ಕೆ ಕರೆತಂದು ಲಸಿಕೆ ಹಾಕಿಸಿಕೊಳ್ಳುವಂತೆ ಹಾಗೂ ನಿರ್ಲಕ್ಷ್ಯ ವಹಿಸದಂತೆ ಮನವಿ ಮಾಡಿರುವ ಅವರು, ಕೊಳಚೆ ಪ್ರದೇಶ, ಅಲೆಮಾರಿಗಳು, ಇಟ್ಟಿಗೆ ಸುಡುವ ಗೂಡುಗಳು, ಕಟ್ಟಡ ನಿರ್ಮಾಣದ ಸ್ಥಳಗಳು, ಮತ್ತಿತರೆ ವಲಸೆಗಾರರ ಪ್ರದೇಶಗಳು, ಸೆಟಲ್ಡ್ ಮತ್ತು ಅಪಾಯಕಾರಿ ಪ್ರದೇಶಗಳಲ್ಲಿ ನೆಲೆಸಿರುವ 1083 ಮಕ್ಕಳನ್ನು ಗುರುತಿಸಲಾಗಿದ್ದು, ಅಂತಹ ಮಕ್ಕಳಿಗೂ ಲಸಿಕೆ ಹಾಕಲು ಕ್ರಮ ವಹಿಸಲಾಗಿದೆ ಎಂದವರು ತಿಳಿಸಿದರು.
ಸರ್ಕಾರದ ಈ ಮಹತ್ವದ ಕಾರ್ಯಕ್ರಮದಲ್ಲಿ ಪೋಷಕರು 5 ವರ್ಷದೊಳಗಿನ ತಮ್ಮ ಮಕ್ಕಳನ್ನು ಸಮೀಪದ ಲಸಿಕಾ ಕೇಂದ್ರಕ್ಕೆ ಕರೆತಂದು ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಹಾಗೂ ಸಾರ್ವಜನಿಕರು, ಸ್ಥಳೀಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಈ ಕಾರ್ಯಕ್ರಮದ ಯಶಸ್ವಿಗಾಗಿ ಕಾರ್ಯನಿರ್ವಹಿಸುವಂತೆ ಅವರು ಮನವಿ ಮಾಡಿದ್ದಾರೆ.
ಸಭೆಯಲ್ಲಿ ಡಾ.ರಘುನಂದನ್, ಡಾ.ನಾಗರಾಜ್, ಡಾ. ಶಂಕರಪ್ಪ, ಡಾ. ಪಿ.ನಾರಾಯಣ್, ಡಾ.ಶ್ರೀಧರ್, ಡಾ. ಶಮಾ, ಡಾ.ಶ್ರೀನಿವಾಸ್ ಸೇರಿದಂತೆ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post