ಕಲ್ಪ ಮೀಡಿಯಾ ಹೌಸ್ | ಹಾಸನ |
ರಾಷ್ಟ್ರೀಯ ಸೇವಾ ಯೋಜನೆ (NSS) ದೇಶದ ಅತ್ಯಂತ ದೊಡ್ಡ ವಿದ್ಯಾರ್ಥಿ ಸೇವಾ ಸಂಘಟನೆಗಳಲ್ಲಿ ಒಂದಾಗಿದ್ದು, ಸಮಾಜಕ್ಕೆ ತನ್ನದೇ ಆದ ಮಹತ್ವದ ಕೊಡುಗೆ ನೀಡುತ್ತಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಶಿಸ್ತು, ಸಹಬಾಳ್ವೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಮೂಲಕ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ (Personality development) ಎನ್‌ಎಸ್‌ಎಸ್ ಅತ್ಯುತ್ತಮ ವೇದಿಕೆಯಾಗಿದೆ ಎಂದು ಪಿಇಎಸ್ ಐಎಎಮ್‌ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುದರ್ಶನ್ ಜಿ.ಎಂ. ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಆಯೋಜಿಸಿದ್ದ ಎನ್‌ಎಸ್‌ಎಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿವರ್ಷ ಸೆಪ್ಟೆಂಬರ್ 24ರಂದು ರಾಷ್ಟ್ರೀಯ ಸೇವಾ ಯೋಜನಾ ದಿನವನ್ನು ಆಚರಿಸಲಾಗುತ್ತದೆ. ‘ನನಗಲ್ಲ, ನಿನಗೆ’ ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಎನ್‌ಎಸ್‌ಎಸ್, ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ವಿದ್ಯಾರ್ಥಿಗಳ ಜೀವನವು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗಬಾರದು. ಸಮಾಜದಲ್ಲಿರುವ ಸಮಸ್ಯೆಗಳನ್ನು ಅರಿತುಕೊಂಡು, ಅವುಗಳನ್ನು ಎದುರಿಸುವ ಹಾಗೂ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ನೈಜ ಸಾಮಾಜಿಕ ಪರಿಸ್ಥಿತಿಗಳೊಂದಿಗೆ ಮುಖಾಮುಖಿಯಾಗಲು ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದರು.
NSS: ನಾಯಕತ್ವ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸುವ ವೇದಿಕೆ
ಎನ್‌ಎಸ್‌ಎಸ್ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳು ಬೆಳೆಯುವುದರ ಜೊತೆಗೆ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಶಿಸ್ತು, ಸಹಕಾರ, ಸಹಬಾಳ್ವೆ, ಮಾನವೀಯತೆ ಮತ್ತು ಸೇವಾ ಮನೋಭಾವದಂತಹ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಇದು ಪ್ರೇರಣೆ ನೀಡುತ್ತದೆ ಎಂದು ಡಾ. ಸುದರ್ಶನ್ ಜಿ.ಎಂ. ತಿಳಿಸಿದರು.
ತಮ್ಮ ಸ್ವಾರ್ಥಕ್ಕಾಗಿ ಮಾತ್ರ ಬದುಕದೆ, ಸಮಾಜಕ್ಕೆ ಸಾಧ್ಯವಾದಷ್ಟು ಉತ್ತಮ ಕೊಡುಗೆ ನೀಡುವ ಮನೋಭಾವವನ್ನು ಯುವಜನರಲ್ಲಿ ಬೆಳೆಸುವ ಅಗತ್ಯವಿದೆ. ದೇಶ ನಿರ್ಮಾಣದಲ್ಲಿ ಯುವಜನಾಂಗದ ಪಾತ್ರ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
Also read>> ಶಿವಮೊಗ್ಗದಲ್ಲಿ ಈ ಭಾನುವಾರ ಬ್ಯಾಂಕ್’ಗಳು ಓಪನ್ | ಕಾರಣವೇನು?
ಸೇವೆ ಶ್ರೇಷ್ಠ ಮೌಲ್ಯ: ಡಾ. ಎನ್. ಪ್ರವೀಣ್ ಚಂದ್ರ
ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಎನ್. ಪ್ರವೀಣ್ ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಸೇವೆ ಎನ್ನುವುದು ಶ್ರೇಷ್ಠವಾದ ಮೌಲ್ಯ. ಪ್ರತಿಯೊಬ್ಬರೂ ತಮ್ಮ ಕೈಲಾದ ಸೇವೆಯನ್ನು ಸಮಾಜ ಹಾಗೂ ದೇಶಕ್ಕಾಗಿ ಸಲ್ಲಿಸುವ ಅಗತ್ಯವಿದೆ ಎಂದರು.
ಎನ್‌ಎಸ್‌ಎಸ್ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದ ಜೊತೆಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ. ದೇಶ ಕಟ್ಟುವಲ್ಲಿ ಯುವಜನಾಂಗದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸೇವಾ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬಹುದು ಎಂದು ಹೇಳಿದರು.
ಸಂವಿಧಾನವು ಪ್ರಜೆಗಳಿಗೆ ನೀಡಿರುವ ಮೂಲಭೂತ ಹಕ್ಕುಗಳ ಜೊತೆಗೆ ತಮ್ಮ ಕರ್ತವ್ಯಗಳ ಬಗ್ಗೆಯೂ ವಿದ್ಯಾರ್ಥಿಗಳು ಅರಿವು ಹೊಂದಬೇಕು. ಶ್ರಮ, ಸೇವೆ, ಸಹಕಾರ ಮತ್ತು ಮಾನವೀಯತೆಯಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಎನ್‌ಎಸ್‌ಎಸ್ ಅವಕಾಶ ಕಲ್ಪಿಸುತ್ತದೆ ಎಂದು ತಿಳಿಸಿದರು.
ಪ್ರತಿಜ್ಞಾ ವಿಧಿ, ಸ್ವಚ್ಛತಾ ಜಾಗೃತಿ
ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮದಲ್ಲಿ ಸ್ವಯಂಸೇವಕರಿಗೆ ಎನ್‌ಎಸ್‌ಎಸ್ ಪ್ರತಿಜ್ಞಾ ವಿಧಿ ಹಾಗೂ ಸ್ವಚ್ಛತೆಯ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಸಮಾಜದ ಸ್ವಚ್ಛತೆ, ಸಾರ್ವಜನಿಕ ಜವಾಬ್ದಾರಿ ಹಾಗೂ ಸೇವಾ ಮನೋಭಾವದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಪ್ರಶಾಂತ್ ಕುಮಾರ್, ಎನ್‌ಎಸ್‌ಎಸ್ ನೋಡಲ್ ಅಧಿಕಾರಿ ಸಚ್ಚಿದಾನಂದ ಎಂ.ಎಚ್., ಯುವ ರೆಡ್‌ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಅಶ್ವಿನಿ ಎಚ್.ಸಿ., ಗ್ರಂಥಪಾಲಕ ಪ್ರಸಾದ್ ಎಸ್.ವಿ. ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕ ವೃಂದ ಹಾಗೂ ಎನ್‌ಎಸ್‌ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









