ಬೆಂಗಳೂರು: ಪ್ರತಿಷ್ಠಿತ ಓಲಾ ಕ್ಯಾಬ್‌ನಲ್ಲಿ ಪ್ರಯಾಣಿಸಿದ ಮಹಿಳೆಗೆ ಡ್ರೈವರ್ ಕಿರುಕುಳ ನೀಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆ ಕುರಿತಂತೆ ಓಲಾ ಕಂಪೆನಿ ವಿಷಾದ ವ್ಯಕ್ತಪಡಿಸಿದೆ.
ಪ್ರಕರಣ ಬೆಳಕಿಗೆ ಬಂದ ನಂತರ ಹೇಳಿಕೆ ನೀಡಿರುವ ಕಂಪೆನಿ, ಇಂತಹ ಪ್ರಕರಣಗಳನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಘಟನೆ ನಮ್ಮ ಗಮನಕ್ಕೆ ಬಂದಾಕ್ಷಣ ಸದರಿ ಡ್ರೈವರನ್ನು ಬ್ಯಾಕ್ ಲಿಸ್‌ಟ್ ಗೆ ಸೇರಿಸಲಾಗಿದೆ ಎಂದಿದೆ.
ಇನ್ನು, ಈ ಕುರಿತಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಗೆ ಕಂಪೆನಿ ಸಂಪೂರ್ಣ ಸಹಕಾರ ನೀಡಲಿದೆ. ನಮಗೆ ಪ್ರಯಾಣಿಕರ ಸುರಕ್ಷತೆಯೇ ಆದ್ಯತೆಯಾಗಿದ್ದು, ಇದರಲ್ಲಿ ಯಾವುದೇ ರೀತಿಯ ರಾಜಿಯಿಲ್ಲ ಎಂದಿದೆ.
26 ವರ್ಷದ ಮಹಿಳೆ ಜೂನ್ 1ರಂದು ಮಧ್ಯರಾತ್ರಿ 2 ಗಂಟೆಗೆ ಕ್ಯಾಬ್ ಬುಕ್ ಮಾಡಿದ್ದು, ಮುಂಬೈಗೆ ತೆರಳಲು ಜೆಪಿ ನಗರದಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಕಿರುಕುಳ ನೀಡಿದ ಕ್ಯಾಬ್ ಡ್ರೈವರನ್ನು ಬೆಂಗಳೂರು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಒಂದು ವರದಿಯ ಅನ್ವಯ ನಿಗದಿತ ದಾರಿಯನ್ನು ಬದಲಿಸಿದ ಡ್ರೈವರ್, ಬೇರೆಯದೇ ದಾರಿಯಲ್ಲಿ ಕರೆದೊಯ್ದಿದ್ದಾನೆ. ಜನವಿಲ್ಲದ ಪ್ರದೇಶದಲ್ಲಿ ಕಾರು ನಿಲ್ಲಿಸಿ, ಮಹಿಳೆಯ ಜೊತೆಯಲ್ಲಿ ಅಸಭ್ಯವಾಗಿ ವರ್ತಿಸಿ, ಆಕೆಯ ಫೋಟೋ ಸಹ ತೆಗೆದಿದ್ದಾನೆ.
ಚಾಲಕ ವರ್ತನೆಗೆ ವಿರೋಧ ವ್ಯಕ್ತಪಡಿಸಿದ ಮಹಿಳೆಯನ್ನು ಬೆದರಿಸಿದ ಚಾಲಕ, ತನ್ನ ಸ್ನೇಹಿತರಿಗೆ ಕರೆ ಮಾಡಿ ಅತ್ಯಾಚಾರ ನಡೆಸೋಣ ಬನ್ನಿ ಎಂದು ಕರೆದಿದ್ದು, ಮಾತ್ರವಲ್ಲದೇ ಆಕೆಗೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.
ತತಕ್ಷಣವೇ ಆಕೆ ತನ್ನ ಮೊಬೈಲ್‌ನಲ್ಲಿ ಚಿತ್ರ ತೆಗೆದು ವೆಬ್‌ಸೈಟ್ ಹಾಗೂ ಫೇಸ್ ಬುಕ್‌ನಲ್ಲಿ ಪೋಸ್‌ಟ್ ಮಾಡಲು ಯತ್ನಿಸಿದ್ದಾರೆ. ಇದರಿಂದ ಹೆದರಿದ ಡ್ರೈವರ್ ಆಕೆಯನ್ನು ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿದ್ದಾನೆ ಎಂದು ವರದಿಯಾಗಿದೆ.
Discussion about this post