ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಬರಗಾಲ ಆವರಿಸಿ ಕುಡಿಯುವ ನೀರು, ನೈರ್ಮಲ್ಯ ಮತ್ತಿತರೆ ಬಳಕೆಗೆ ಸರಕಾರವು ಕೆಲವು ಆಯ್ದ ತಾಲೂಕುಗಳಿಗೆ ಸರಕಾರ ತಲಾ ಒಂದು ಕೋಟಿ ರೂ. ಅನುದಾನ ನೀಡಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ನಗರದ ತಾಲೂಕು ಪಂಚಾಯಿತಿಯಲ್ಲಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅಧಿಕಾರಿಗಳು ಶ್ರಮವಹಿಸಿ ಗ್ರಾಮ ಪಂಚಾಯಿಗಳ ಅಭಿವೃದ್ದಿಗೆ ಶ್ರಮಿಸಬೇಕು ಅದಕ್ಕೆ ತಕ್ಕಂತೆ ಸರಕಾರದ ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕು ಎಂದರು.
ಜೂನ್ ತಿಂಗಳು ಕೃಷಿಕರಿಗೆ ಬಿತ್ತನೆ ಸಮಯವಿದು. ಆದ್ದರಿಂದ ಕೃಷಿ ಇಲಾಖೆ ಅತೀ ಜಾಗರೂಕತೆಯಿಂದ ಕಾರ್ಯ ನಿರ್ವಹಿಸಿಬೇಕು, ರೈತರು ಕೇಳಿದ ಪರಿಕರಗಳನ್ನು, ಬಿತ್ತನೆ ಬೀಜಗಳನ್ನು ಸರಿಯಾದ ಸಮಯಕ್ಕೆ ಒದಗಿಸಬೇಕು ಎಂದು ಕೃಷಿ ಅಧಿಕಾರಿ ಡಾ.ಮೋಹನ್ ಕುಮಾರ್‌ಗೆ ಸೂಚಿಸಿದರು.
ಸಭೆಯಲ್ಲಿ ಸದಸ್ಯ ಗದ್ದಿಗೆ ತಿಪ್ಪೇಸ್ವಾಮಿ ಮಾತನಾಡಿ, ಕೃಷಿ ಇಲಾಖೆಯಲ್ಲಿ ರೈತರಿಗೆ ನೀಡುವ ಪರಿಕರಗಳು ಲಭ್ಯವಿಲ್ಲ, ಇದರಿಂದ ರೈತರು ಕಂಗಲಾಗಿದ್ದಾರೆ ಎಂದಾಗ ಅಧಿಕಾರಿ ಮೋಹನ್ ಸರಕಾರ ಇನ್ನು ಅನುದಾನ ಬಿಡುಗಡೆ ಮಾಡಿಲ್ಲ, ಎಂದು ಸಮಜಾಯಿಸಿಕೊಂಡರು. ಸದಸ್ಯ ನವೀನ್, ರಾಮರೆಡ್ಡಿ, ತಿಪ್ಪೇಸ್ವಾಮಿ, ಮಧ್ಯಸ್ಥಿಕೆ ವಹಿಸಿ ಕೃಷಿ ಇಲಾಖೆಯಲ್ಲಿ ರೈತರು ದುಬಾರಿ ಬೆಲೆಗೆ ಶೇಂಗಾಕಾಯಿ ಕೊಂಡುಕೊಳ್ಳಬೇಕಿದೆ. ಆದರೆ ಮಾರುಕಟ್ಟೆಯಲ್ಲಿ ಉತ್ತಮವಾದ ಶೇಂಗಾ ಇದೇ ಬೆಲೆಗೆ ದೊರೆಯುತ್ತದೆ. ಸರಕಾರ ರೈತರಿಗೆ ನೀಡುವುದಾದರೂ ಏನು ಎಂದು ಶಾಸಕರ ಗಮನಕ್ಕೆ ತಂದರು.
ತಾಪಂ ಸದಸ್ಯ ರಾಮರೆಡ್ಡಿ ಮಾತನಾಡಿ ತಳಕು, ಪರುಶುರಾಂಪುರದ ಕೃಷಿ ಇಲಾಖೆಗಳ ಸಂಪರ್ಕದಲ್ಲಿ ಸುಮಾರು ನಲವತ್ತರಿಂದ ಐವತ್ತು ಕಿಲೋ ದೂರದ ಗ್ರಾಮಗಳಿಂದ ಇಲಾಖೆಗೆ ಬರಬೇಕು. ಆದರೆ ಇಲ್ಲಿ ಟೋಕನ್ ಒಂದು ಕಡೆ, ಶೇಂಗಾ ಇನ್ನೊಂದೆಡೆ ನೀಡುತ್ತಾರೆ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತದೆ ಎಂದರು.
ಕೃಷಿ ಇಲಾಖೆಯಲ್ಲಿ ಹಳೆ ಫಲಾನುಭವಿಗಳಿಗೆ ಮಾತ್ರ ಕಾಮಗಾರಿಗಳನ್ನು ನೀಡುತ್ತಾರೆ. ಹೊಸಬರಿಗೆ ನೀಡುವುದಿಲ್ಲ ಎಂದು ಸಭೆಯಲ್ಲಿ ತಿಮ್ಮಾರೆಡ್ಡಿ ಆರೋಪಿಸಿದರು.
ನಲವತ್ತು ಗ್ರಾಪಂ ವ್ಯಾಪ್ತಿಯಲ್ಲಿ 31 ಗ್ರಾಮಗಳಲ್ಲಿ ಶುದ್ದ ನೀರಿನ ಘಟಕಗಳು ಹಾಳಾಗಿವೆ ಎಂದು ಕುಡಿಯುವ ನೀರಿನ ಅಧಿಕಾರಿ ಕಿರಣ್, ತಿಪ್ಪೇಸ್ವಾಮಿ ಮಾಹಿತಿ ನೀಡಿದಾಗ ಶಾಸಕರು ಯಾವುದೇ ಕಾರಣಕ್ಕೂ ಶುದ್ದ ಕುಡಿಯುವ ನೀರಿನ ಘಟಕಗಳು ದುರಸ್ಥಿಯಲ್ಲಿ ಇವೆ ಎಂದು ಸಬೂಬು ಹೇಳಬಾರದರು. ತಕ್ಷಣವೇ ರಿಪೇರಿ ಮಾಡಿಸಿ ಎಂದಾಗ ಅಧಿಕಾರಿ ಕಿರಣ್ ಮಾತನಾಡಿ, ಕೆಲವು ಗ್ರಾಮಗಳಲ್ಲಿ ಜನರ ಸಮಸ್ಯೆಯಿಂದ ಪೈಪ್ ಲೈನ್‌ಗಳು ಮಾಡಿಸಲು ಸಾಧ್ಯವಾಗುತ್ತಿಲ್ಲ ಕೆಲವು ಜನರು ಸರಿಯಿಲ್ಲ ಎಂದರು. ಶಾಸಕರು ಏರು ಧ್ವನಿಯಲ್ಲಿ ಅಧಿಕಾರಿಯಾಗಿರುವುದು ನೀವು ಮೊದಲು ಜನಗಳ ವಿಶ್ವಾಸ ಗಳಿಸಿ ಸಮಸ್ಯೆ ದ್ವಿಗುಣಗೊಳಿಸಿ ಎಂದು ಸೂಚಿಸಿದರು.
ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜೂನ್ 25ರಿಂದ ಜುಲೈ 4ರವರೆಗೆ ನಡೆಯುತ್ತದೆ. ತಾಲೂಕಿನ 4588 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲ್ಲಿದ್ದಾರೆ, ಹೊಸದಾಗಿ 92 ವಿದ್ಯಾರ್ಥಿಗಳು ಬೇರೆ ಪ್ರದೇಶಗಳಿಂದ ಬಂದ ವಿದ್ಯಾರ್ಥಿಗಳಿಗೆ ಆಯಾ ವ್ಯಾಪ್ತಿಯ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಿದೆ ಎಂದರು. ಆಗ ಶಾಸಕರು ತಾಲೂಕಿನ ಯಾವೊಬ್ಬ ವಿದ್ಯಾರ್ಥಿ ಪರೀಕ್ಷೆಯಿಂದ ಹೊರಗುಳಿಯದಂತೆ ಕ್ರಮವಹಿಸಬೇಕು ಎಂದರು.
ತಾಲೂಕು ಪಂಚಾಯಿತಿ ಅಧ್ಯಕ್ಷರಾದ ವಿಜಯಲಕ್ಷ್ಮೀ, ಉಪಾಧ್ಯಕ್ಷರಾದ ತಿಪ್ಪಮ್ಮ, ಕಾರ್ಯನಿರ್ವಾಹನ ಅಧಿಕಾರಿ ಶ್ರೀಧರ್ ಬಾರುಕೇರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಚ್. ಆಂಜನೇಯ, ಸದಸ್ಯ ಸಮರ್ಥರಾಯ್, ರಂಜಿತಾ, ರಾಮರೆಡ್ಡಿ, ವೀರೇಶ್, ಸುರ್ವಣಮ್ಮ, ಉಮಾ, ಮಲ್ಲಮ್ಮ, ಬೆಸ್ಕಾಂ ಎಇಇ ಟಿ. ತಿಮ್ಮರಾಜು, ಅಬಕಾರಿ ವೃತ್ತ ನಿರೀಕ್ಷಕ ಕೃಷ್ಣಸ್ವಾಮಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಆರ್. ವಿರೂಪಾಕ್ಷಪ್ಪ, ಮಾಲತಿ, ರವಿ, ತಿಪ್ಪೇಸ್ವಾಮಿ, ಕಾವ್ಯ, ಕಿರಣ ಇತ್ಯಾದಿ ಸದಸ್ಯರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
Discussion about this post